ಧರ್ಮಸ್ಥಳದ ವತಿಯಿಂದ ‘ಸ್ವಚ್ಛ ಗೃಹ – ಸ್ವಚ್ಛ ಪರಿಸರ’ ಆಂದೋಲನ
ಧರ್ಮಸ್ಥಳ :ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಇತ್ತೀಚೆಗೆ ಬರೆದ ಪತ್ರದಲ್ಲಿ ಕ್ಷೇತ್ರ ಧರ್ಮಸ್ಥಳದ ವತಿಯಿಂದ ನಡೆಸಲಾಗುತ್ತಿರುವ ಸ್ವಚ್ಛತಾ ಕಾರ್ಯಕ್ರಮಗಳು, ಮಾದಕ ವಸ್ತು ನಿರೋಧ ಕಾರ್ಯಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದು, ತಮ್ಮೆಲ್ಲ ಸಂಸ್ಥೆಗಳಿಂದ ಸ್ವಚ್ಛತೆಗೆ ಪ್ರೇರಣೆ ನೀಡಬೇಕೆಂದು ವಿನಂತಿ ಮಾಡಿಕೊಂಡಿರುತ್ತಾರೆ. ಕ್ಷೇತ್ರದಲ್ಲಿ ಸ್ವಚ್ಛತೆಯ ಬಗ್ಗೆ ಅತಿ ಹೆಚ್ಚಿನ ಆದ್ಯತೆಯನ್ನು ನೀಡಿರುವ ವೀರೇಂದ್ರ ಹೆಗ್ಗಡೆಯವರು ಕಳೆದ ಒಂದು ದಶಕದಿಂದ ನಾಗರಿಕ ಪ್ರಜ್ಞೆ, ಸಾರ್ವಜನಿಕ ಪ್ರದೇಶಗಳ ಸ್ವಚ್ಛತೆ, ಶ್ರದ್ಧಾ ಕೇಂದ್ರಗಳ ಸ್ವಚ್ಛತೆ ಮುಂತಾದ ಕಾರ್ಯಕ್ರಮಗಳ ಬಗ್ಗೆ ತಮ್ಮ ಬೆಂಬಲವನ್ನು ನೀಡುವುದಲ್ಲದೆ ನಾಡಿನಾದ್ಯಂತ ಸ್ವಚ್ಛತೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ವತಿಯಿಂದ “ಸ್ವಚ್ಛ್ ಹೀ ಸೇವಾ” ಪಾಕ್ಷಿಕದ ಭಾಗವಾಗಿ ಕರ್ನಾಟಕ ರಾಜ್ಯದಾದ್ಯಂತ ನವರಾತ್ರಿಯ ಸಮಯದಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಕೈಗೊಳ್ಳುವರೇ ವೀರೇಂದ್ರ ಹೆಗ್ಗಡೆಯವರು ಕರೆಕೊಟ್ಟಿದ್ದಾರೆ. ಈ ಸಂಬಂಧ ಯೋಜನೆಯ 37 ಲಕ್ಷ ಫಲಾನುಭವಿಗಳಿಗೆ ಮೊಬೈಲ್ ಎಸ್.ಎಮ್.ಎಸ್. ಮೂಲಕ ಸಂದೇಶವನ್ನು ಕಳುಹಿಸಿದ್ದಾರೆ. ಅವರು ನವರಾತ್ರಿಯಲ್ಲಿ ದೇವಿಯ ಪೂಜೆ ಮಾಡುವ ಮೊದಲು ತಮ್ಮ ಮನೆ ಮತ್ತು ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಈ ಸಂಪ್ರದಾಯವನ್ನು ದಿನನಿತ್ಯ ಅಳವಡಿಸಿಕೊಳ್ಳಬೇಕೆಂದು ಸೂಚಿಸಿದ್ದಾರೆ. ಯೋಜನೆಯ ಕಾರ್ಯಕರ್ತರು ಸದಸ್ಯರ ಮನೆಭೇಟಿ ಮಾಡುವ ಸಂದರ್ಭದಲ್ಲಿ ಕುಟುಂಬಗಳು ಕೈಗೊಳ್ಳುತ್ತಿರುವ ಪರಿಸರ ಸ್ವಚ್ಛತೆಯನ್ನು ಗಮನಿಸಬೇಕು. ತ್ಯಾಜ್ಯ ವಿಲೇವಾರಿಯನ್ನು ಸಮರ್ಪಕವಾಗಿ ಮಾಡುವಂತೆ ಪ್ರತ್ಯೇಕ ತಿಳುವಳಿಕೆಯನ್ನು ಮೂಡಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ತಮ್ಮ ಕಾರ್ಯಕರ್ತರಿಗೆ ಸೂಚಿಸಿದ್ದಾರೆ ಎಂದು ಶ್ರೀ ಕ್ಷೇತ್ರದ ಪ್ರಕಟಣೆ ತಿಳಿಸಿರುತ್ತದೆ.