ಧರ್ಮ, ಜಾತಿ, ಲಿಂಗ, ಬಣ್ಣ, ವರ್ಗ ಮೀರಿ ಮಾನವೀಯ ಸಂಬಂಧ, ಏಕತೆ ಸಾರುವ ಶಕ್ತಿ ಯೋಗಕ್ಕಿದೆ: ಪ್ರಧಾನಿ ಮೋದಿ
ನವದೆಹಲಿ: ಎಲ್ಲರೂ ತಮ್ಮ ಮನೆಯಲ್ಲಿ ಯೋಗದ ಮೂಲಕ ಕುಟುಂಬ ಸಂಬಂಧವನ್ನು ಹೆಚ್ಚಿಸುವ ಸಂದರ್ಭ ಇದಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
6ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ದೆಹಲಿಯಲ್ಲಿ ಇಂದು ಭಾಷಣ ಮಾಡಿದ ಅವರು, ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಲು ಮನಸ್ಸಿನಲ್ಲಿ ಆತ್ಮವಿಶ್ವಾಸ ವೃದ್ಧಿಸಲು ಯೋಗ ಸಹಕಾರಿಯಾಗಿದೆ. ದೃಢ, ಆರೋಗ್ಯ ಸಮಾಜ ನಿರ್ಮಾಣಕ್ಕೆ ಯೋಗ ಮಾಡುವುದು ಅತ್ಯಂತ ಉಪಕಾರಿ. ನಮ್ಮಲ್ಲಿ ಏಕತೆ, ಒಗ್ಗಟ್ಟನ್ನು ಯೋಗ ಹೆಚ್ಚಿಸಿ ಮಾನವೀಯ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ ಎಂದು ಹೇಳಿದರು.
ನಮ್ಮ ಆರೋಗ್ಯ ಮತ್ತು ಭರವಸೆಯ ಸ್ವರಮೇಳವನ್ನು ಉತ್ತಮಗೊಳಿಸಲು, ಆರೋಗ್ಯಕರ ಮತ್ತು ಸಂತೋಷದ ಮಾನವೀಯತೆಯ ಯಶಸ್ಸಿಗೆ ಜಗತ್ತು ಸಾಕ್ಷಿಯಾಗುವ ದಿನ ದೂರವಿಲ್ಲ. ಇದನ್ನು ಮಾಡಲು ಯೋಗ ಖಂಡಿತವಾಗಿಯೂ ನಮಗೆ ಸಹಾಯ ಮಾಡುತ್ತದೆ, ಯೋಗವು ಏಕತೆಯ ಶಕ್ತಿಯಾಗಿ ಹೊರಹೊಮ್ಮಿದೆ; ಯೋಗ ಮಾಡುವುದಕ್ಕೆ ಯಾವುದೇ ಜನಾಂಗ, ಬಣ್ಣ, ಲಿಂಗ, ನಂಬಿಕೆ ಮತ್ತು ರಾಷ್ಟ್ರಗಳ ತಾರತಮ್ಯವಿಲ್ಲ, ಇವೆಲ್ಲಕ್ಕೂ ನೀರಿದ ಶಕ್ತಿ ಇರುವುದು ಯೋಗಕ್ಕೆ ಎಂದು ಬಣ್ಣಿಸಿದರು.
ಈ ವರ್ಷದ ಯೋಗ ದಿನದ ಧ್ಯೇಯವಾಕ್ಯ ಮನೆಯಲ್ಲಿಯೇ ಯೋಗ ಎಂಬುದಾಗಿದ್ದು ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಇಂದು ಯಾವುದೇ ಸಾರ್ವಜನಿಕ ಸಮಾರಂಭಗಳನ್ನು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಿಲ್ಲ ಎಂದರು.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 2014ರ ಸೆಪ್ಟೆಂಬರ್ 27ರಂದು ಪ್ರಧಾನಿ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸುವ ಬಗ್ಗೆ ಪ್ರಸ್ತಾವನೆ ಮುಂದಿಟ್ಟಿದ್ದರು. ಅದನ್ನು ಎಲ್ಲಾ ರಾಷ್ಟ್ರಗಳು ಒಪ್ಪಿ ಮರುವರ್ಷದಿಂದ 2015ರಿಂದ ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನವೆಂದು ಆಚರಿಸಿಕೊಂಡು ಬರಲಾಗುತ್ತಿದೆ.