ಧರ್ಮ ಸಂಸತ್: ಆಮಂತ್ರಣ ಪತ್ರಿಕೆ ವೀರೇಂದ್ರ ಹೆಗ್ಗಡೆಯವರಿಂದ ಬಿಡುಗಡೆ
ಬೆಳ್ತಂಗಡಿ: ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮ ಕಾಪಾಡುತ್ತದೆ. ಸಾವಿರಾರು ವರ್ಷಗಳಿಂದ ಹಿಂದೂ ಧರ್ಮ ತನ್ನ ಸಾರ, ಸತ್ವ ಮತ್ತು ತತ್ವವನ್ನು ಉಳಿಸಿಕೊಂಡು ಬಂದಿದೆ. ಇಂದು ದೇಶ – ವಿದೇಶಗಳಲ್ಲಿಯೂ ಹಿಂದೂ ಧರ್ಮದ ಅನುಯಾಯಿಗಳು ಇದ್ದಾರೆ. ಧರ್ಮದ ಮೂಲ ಸತ್ವವನ್ನು ಸಂರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸುವುದರೊಂದಿಗೆ ಸಮಾಜದ ಸಂಘಟನೆ ಮತ್ತು ಬಲವರ್ಧನೆಯೇ ವಿಶ್ವ ಹಿಂದೂ ಪರಿಷತ್ ಆಶ್ರಯದಲ್ಲಿ ಉಡುಪಿಯಲ್ಲಿ ಆಯೋಜಿಸಲಾಗುವ ಧರ್ಮ ಸಂಸತ್‍ನ ಉದ್ದೇಶವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ದೇವಾಲಯಗಳ ನಿರ್ಮಾಣಕ್ಕಿಂತಲೂ ಅವುಗಳ ನಿರ್ವಾಹಣೆ ಮತ್ತು ಸಂರಕ್ಷಣೆ ಮುಖ್ಯವಾಗಿದೆ. ಧರ್ಮಸ್ಥಳದಿಂದ ಈಗಾಗಲೇ ಒಂದು ಸಾವಿರ ದೇವಾಲಯಗಳ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಲಾಗಿದೆ. ಜನವರಿ 14 ಮತ್ತು ಆಗೋಸ್ತು 15ರಂದು ದೇವಾಲಯಗಳ ಸ್ವಚ್ಛತಾ ಅಭಿಯಾನಕ್ಕೆ ಕರೆ ನೀಡಿದಾಗ ಎಂಟು ಸಾವಿರ ದೇವಾಲಯಗಳನ್ನು ಸ್ವಚ್ಛಗೊಳಿಸಲಾಗಿದೆ ಮುಂದೆ ವರ್ಷಕ್ಕೆ ಎರಡು ಬಾರಿ ದೇವಾಲಯಗಳ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗುವುದು. ರುದ್ರಭೂಮಿ ನಿರ್ಮಾಣ, ಭಜನಾ ಮಂದಿರನಿರ್ಮಾಣ ಹಾಗೂ ಭಜನಾ ತರಬೇತಿ ಕಮ್ಮಟದ ಮೂಲಕ ಸಮಾಜದ ಸಂಘಟನೆ ಮತ್ತು ಧರ್ಮ ಜಾಗೃತಿಗೆ ನಿರಂತರ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ನೀಡಲಾಗುತ್ತದೆ ಎಂದು ಹೆಗ್ಗಡೆಯವರು ತಿಳಿಸಿದರು.
ಪ್ರೊ. ಎಂ. ಬಿ. ಪುರಾಣಿಕ್ ಪ್ರಾಸ್ತಾವಿಕವಾಗಿ ಮಾತನಾಡಿ ಧರ್ಮ ಸಂಸತ್‍ನ ಉದ್ದೇಶ ವಿವರಿಸಿದರು.
ಡಾ. ಕೃಷ್ಣಪ್ರಸಾದ್, ಶರಣ್ ಪಂಪ್‍ವೆಲ್, ವಿಲಾಸ್ ನಾಯಕ್, ಜಗದೀಶ ಶೇಣವ, ಸುನಿಲ್ ಕೆ.ಆರ್., ಉಜಿರೆಯ ಡಾ. ಎಂ.ಎಂ. ದಯಾಕರ್, ಶರತ್‍ಕೃಷ್ಣ ಪಡ್ವೆಟ್ನಾಯ, ಡಾ. ಬಿ. ಯಶೋವರ್ಮ, ಹರೀಶ್ ಪೂಂಜ ಮತ್ತು ಭಾಸ್ಕರ ಧರ್ಮಸ್ಥಳ ಉಪಸ್ಥಿತರಿದ್ದರು. ಕೃಷ್ಣಮೂರ್ತಿ ಸಾಗತಿಸಿದರು. ವಿಲಾಸ್ ನಾಯಕ್ ಧನ್ಯವಾದವಿತ್ತರು.