‘ಧ್ವನಿ ರಂಗಸಿರಿ ಉತ್ಸವ’ ದಲ್ಲಿ ಶ್ರೀ ಸಿ. ಕೆ . ಗುಂಡಣ್ಣ ನವರಿಗೆ ಧ್ವನಿ ಶ್ರೀರಂಗ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ

Spread the love

“ಧ್ವನಿ ರಂಗಸಿರಿ ಉತ್ಸವ” ದಲ್ಲಿ ಶ್ರೀ ಸಿ. ಕೆ . ಗುಂಡಣ್ಣ ನವರಿಗೆ ಧ್ವನಿ ಶ್ರೀರಂಗ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ

ಎತ್ತಣ ಮಾಮರ ಎತ್ತಣ ಕೋಗಿಲೆ , ಮರುಭೂಮಿ ನಾಡಿನಲ್ಲಿ ಮಣ್ಣಿನ ಬಂಡಿ ಎಳೆದ ಧ್ವನಿ ಕಲಾವಿದರು , ಚಿನ್ನದ ನಗರಿ ದುಬೈಯಲ್ಲಿ ನನಗೆ ಮಣ್ಣಿನ ಬಂಡಿ ಬೇಡ ಚಿನ್ನದ್ದೇ ಬೇಕು ಅನ್ನುವ ರೋಹಸೇನನ ಅಳಲು … ಇದೆಲ್ಲಾ ನಡೆದದ್ದು ಫೆಬ್ರುವರಿ 8 -2019 ರ ಸಂಜೆ ದುಬೈ ಯ ಎಮಿರೇಟ್ಸ್ ಥಿಯೇಟರ್ನಲ್ಲಿ ನಡೆದ ‘ಧ್ವನಿ ರಂಗ ಸಿರಿ ಉತ್ಸವ -2019 ರ ಪ್ರಯುಕ್ತ ನಡೆದ ಶೂದ್ರಕ ಮಹಾಕವಿ 2000 ವರ್ಷಗಳ ಹಿಂದೆ ರಚಿಸಿದ ‘ಮೃಚ್ಛಕಟಿಕ , ಎನ್ನುವ ನಾಟಕದ ಪ್ರದಶನದಲ್ಲಿ .

ಸದಭಿರುಚಿಯ ಕನ್ನಡ ಕಲಾಭಿಮಾನಿಗಳಿಂದ ತುಂಬಿ ತುಳುಕಿದ ಸಭಾಂಗಣದಲ್ಲಿ ಹೊರನಾಡ ಖ್ಯಾತ ಕನ್ನಡ ರಂಗ ನಿರ್ದೇಶಕ ಪ್ರಕಾಶ್ ರಾವ್ ಪಯ್ಯಾರ್ ಅವರ ನಿರ್ದೇಶನದ ಡಾ . ಎನ್ .ಎಸ್ . ಲಕ್ಷ್ಮೀನಾರಾಯಣ ಭಟ್ಟರ ಕನ್ನಡಾನುವಾದದ ‘ ಮೃಚ್ಛಕಟಿಕ ‘ ನೆರವೇರಿ ಪ್ರತಿಯೊಂದು ಅಂಕವೂ ಮುಂದೇನು ಅನ್ನುವ ಕುತೂಹಲವನ್ನು ಮೂಡಿಸಿತು .

ವೇಶ್ಯೆಯ ಹುಡುಗಿ ವಸಂತಸೇನೆಗೆ ಸದ್ಗುಣಿ ಚಾರುದತ್ತನ ಕಡೆಗೆ ಒಸರಿದ ಅನುರಾಗ , ರೋಹಸೇನನ ಅಳುವಿಗೆ ಅವಳಲ್ಲಿ ಸುಪ್ತವಾಗಿದ್ದ ತಾಯ್ತನ ಅರಳಿನಿಲ್ಲುವುದು ,ಪ್ರಾಣಹೋದರು ಮಾನ ಮಾರದಿರುವ ಅವಳ ದಿಟ್ಟ ನಿರ್ಧಾರಕ್ಕೆ ಬಲಿಯಾಗುವ ಪ್ರಸಂಗ , ಬಾಹ್ಯ ಶ್ರೀಮಂತಿಕೆಯೊಂದಿಗೆ ಉತ್ತಮ ಅಂತಃ ಕರಣ ಹೊಂದಿರುವ ಗುಣ ಶೀಲೆ … ಬಡವನಾದರೂ ಗುಣವಂತನಾದ ದರಿದ್ರ ನಾದರೂ ಮರ್ಯಾದೆ ಬಿಟ್ಟು ಕೊಡದ ಅಸಹಾಯಕ ನಾಯಕ ಚಾರುದತ್ತ , ರಾಜನ ಭಾವಮೈದುನ ಎನ್ನುವ ಏಕೈಕ ಸಾಧನೆಯಿಂದ ಬೀಗುವ ಕೈಗೆ ಸಿಗದ ಹುಡುಗಿಯನ್ನು ಕೊಲೆಮಾಡಿ ಅದನ್ನು ನಾಯಕನ ತಲೆಗೆ ಕಟ್ಟುವ ಶಕಾರ , ಇದೆಲ್ಲದರ ಜೊತೆಗೆ ನಾಯಕನಿಗೆ ಸದಾ ಜೊತೆಯಾಗಿರುವ ಮೈತ್ರೇಯ , ಆಪದ್ ಭಾಂದವ ಶರ್ವಿಲಕ , ಬಂಡಾಯ ನಾಯಕ ಆರ್ಯಕ , ಕಷ್ಟಬಂದಾಗ ಕಾಪಾಡಿದ ವಸಂತಸೇನೆಯ ಗುಣದಿಂದ ಮನಪರಿವರ್ತನೆಗೊಂಡು ಭಿಕ್ಷುವಾದ ಸಂವಾಹಕ ಇವರ ಜೊತೆ ಕುಂಭಿಲಕ , ಜೂಜುಕೋರರು , ಕಟುಕರು ,ಸಖಿಯರು , ನ್ಯಾಯಾಧೀಶರು ಕಾವಲುಗಾರರು ಶಕಾರ ನ ಬಂಟರಾದ ಸ್ಥಾವರಕ ಮತ್ತು ವಿಟ ,ಇವೆಲ್ಲವನ್ನೂ ಕುಡಿಸಿ ಹೆಣೆದ ಅದ್ಭುತ ಕಥಾಹಂದರವನ್ನು ಹೊಂದಿದ ಸಾರ್ವಕಾಲಿಕ ಶ್ರೇಷ್ಠ ನಾಟಕವೇ ಮೃಚ್ಛಕಟಿಕ .

ವಸಂತಸೇನೆಯಾಗಿ ಭಾವ ಪರವಶ ಅಭಿನಯ ನೀಡಿದ ಆರತಿ ಅಡಿಗ , ರೋಹಸೇನನಾಗಿ ಪುಟಾಣಿ ಸಾನ್ವಿಯ ಮುಗ್ದ ಅಭಿನಯ, ಚಾರುದತ್ತನಾಗಿ ಮನೋಜ್ಞ ಅಭಿನಯ ಮಾಡಿದ ವಾಸು ಬಾಯರ್ , ಸಭಾಂಗಣವೇ ತನ್ನನ್ನು ದ್ವೇಷಿಸುವಂತೆ ಶಕರನಾದ ಪ್ರಭಾಕರ್ ಕಾಮತ್ , ಜನರನ್ನು ನಕ್ಕು ನಗಿಸಿದ ಮೈತ್ರೇಯ ,ಕುಂಭೀಲಕ ಜೋಡಿಯಾಗಿ ನಾಗಭೂಷಣ್ ಕಶ್ಯಪ್ ,ವೆಂಕಟೇಶ್ ರಾವ್ ಭಿಕ್ಷುವಾಗಿ ರುದ್ರಯ್ಯ ನವಲಿ ಹಿರೇಮಠ್ ತಮ್ಮ ತಮ್ಮ ಪಾತ್ರಕ್ಕೆ ಜೀವ ತುಂಬಿದರು . ಇದರೊಂದಿಗೆ 20ಕ್ಕೂ ಹೆಚ್ಚು ಪಾತ್ರಧಾರಿಗಳು ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿ ನಾಟಕಕ್ಕೆ ರಂಗೇರಿಸಿದರು .. ಬೆಳಕಿನ ಸಂಯೋಜನೆಯಿಂದ ನಾಟಕವನ್ನು ದೃಶ್ಯ ಕಾವ್ಯವಾಗಿಸಿದ ಅರುಣ್ ಮಣಿಪಾಲ್, ಅರುಣ್ ಕಾರ್ಲೊ ಮತ್ತು ರಾಜೇಶ್ ಅಡಿಗರ ಅರ್ಥವತ್ತಾದ ಸಂಗೀತ , ರಮ್ಯಾ ಜಾಗೀರ್ದಾರ್ ಮತ್ತು ಸಾಯಿ ಮಲ್ಲಿಕಾ ಅವರ ಅದ್ಭುತ ಹಿನ್ನೆಲೆ ಗಾಯನ , ಪರದೆಯ ಹಿಂದೆ ಕೆಲಸ ಮಾಡಿದ ಹಲವಾರು ಕೈಗಳ ಸಹಯೋಗದೊಂದಿಗೆ ಕಾರ್ಯಕ್ರಮ ಯಶಸ್ವೀ ಗೊಂಡಿತು.

ಈ ಕಾರ್ಯಕ್ರಮದಲ್ಲಿ “ಧ್ವನಿ ಶ್ರೀರಂಗ ಅಂತಾರಾಷ್ಟ್ರೀಯ ರಂಗ ಪ್ರಶಸ್ತಿ “ಯನ್ನು ಹಿರಿಯ ರಂಗಕರ್ಮಿ ‘ಸಮುದಾಯ ‘ ನಾಟಕ ಬಳಗದ ಶ್ರೀ ಸಿ .ಕೆ . ಗುಂಡಣ್ಣ ಅವರಿಗೆ ಪ್ರದಾನಿಸಲಾಯಿತು . ಈ ಸಂಧರ್ಭದಲ್ಲಿ ಉಪಸ್ಥಿತರಿದ್ದ ಖ್ಯಾತ ಕನ್ನಡ ಚಲನಚಿತ್ರ ನಿರ್ದೇಶಕ ಶ್ರೀ ಪಿ . ಶೇಷಾದ್ರಿ , ಜಿ .ಎಮ್ .ಸಿ ಯೂನಿವರ್ಸಿಟಿ ಯ ಉಪ ಕುಲಪತಿ ಗಳಾದ ಶ್ರೀ .ಎಂ . ವೆಂಕಟರಮಣ . ಭಾರತೀಯ ಧೂತಾವಾಸದ ಶ್ರೀ ವಿಪುಲ್ ಅವರನ್ನು ಗೌರವಿಸಲಾಯಿತು . ಧ್ವನಿ ಪುರಸ್ಕಾರವನ್ನು ದುಬೈ ರಂಗನಟಿ ಗೋಪಿಕಾ ಮಯ್ಯ ಅವರಿಗೆ ಪ್ರದಾನಿಸಲಾಯಿತು .

ಧ್ವನಿಯ ಸೇವೆಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಗುಂಡಣ್ಣನವರು ಹೊರ ದೇಶದಲ್ಲಿ ಇಂತಹ ತಂಡವನ್ನು ಕಟ್ಟಿ ನಾಟಕ ಮಾಡುವ ಅಸಾಧ್ಯ ಕೆಲಸವನ್ನು ಸಾದ್ಯವಾಗಿಸಿದಕ್ಕೆ ಅಚ್ಚರಿ ವ್ಯಕ್ತ ಪಡಿಸಿದರು . ಶೇಷಾದ್ರಿಯವರು ಪ್ರತಿಯೊಬ್ಬರ ಪರಿಶ್ರಮವನ್ನೂ ಗುರುತಿಸಿ ತಮ್ಮ ಅನುಭವದಿಂದ ಎಲ್ಲರಿಗೂ ವೈಯುಕ್ತಿಕ ಮಾರ್ಗದರ್ಶನ ನೀಡಿದರು .

ವರದಿ: ಶ್ವೇತಾ ನಾಡಿಗ್ ,ದುಬೈ


Spread the love