ನಕಲಿ ಚಿನ್ನ ಧರಿಸಿಕೊಂಡು ಅಂಗಡಿ ಮಾಲೀಕರಿಗೆ ಮೋಸ – ಆರೋಪಿ ಗುರುತು ಪತ್ತೆ
ಉಳ್ಳಾಲ: ತೊಕ್ಕೊಟ್ಟು ಭಾಗದ ಎರಡು ಹಾಗೂ ಕುತ್ತಾರಿನಲ್ಲಿ ಒಂದು ಅಂಗಡಿಗೆ ವಂಚಿಸಿದ ಆರೋಪಿಯ ಗುರುತು ಹಿಡಿದಿರುವ ಅಂಗಡಿ ಮಾಲೀಕರು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕಸಬಾ ಬೆಂಗ್ರೆ ನಿವಾಸಿ , ಹಲವು ವಂಚನೆ ಪ್ರಕರಣಗಳ ಆರೋಪಿ ಗೂಡ್ಸ್ ಮುನೀರ್ ಎಂಬಾತನ ವಿರುದ್ಧ ದೂರು ದಾಖಲಿಸಿದ್ದು, ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಕಳೆದ ಅಕ್ಟೋಬರ್ ತಿಂಗಳಲ್ಲಿ ತೊಕ್ಕೊಟ್ಟು ಓವರ್ ಬ್ರಿಡ್ಜ್ ನ ಅಯ್ಯಂಗಾರ್ ಬೇಕರಿ ಮತ್ತು ಸಮೀಪದ ಪೂರ್ಣಿಮ ಎಂಬವರ ದಿನಸಿ ಅಂಗಡಿಗೆ ಮೈಯಿಡೀ ಚಿನ್ನದ ಒಡವೆ ಧರಿಸಿದ್ದ ವ್ಯಕ್ತಿಯೋರ್ವ ಹೆಲ್ಮೆಟ್ ತೆಗೆಯದೆ ತಾನು ನಿತಿನ್ ಶೆಟ್ಟಿ ಎಂದು ಪರಿಚಯಿಸಿ ಸಾವಿರಾರು ರೂಪಾಯಿ ಮೌಲ್ಯದ ಸಿಹಿತಿಂಡಿ,ದಿನಸಿ ಖರೀದಿಸಿ ಗೂಗಲ್ ಪೇ ಮಾಡಲು ಫೋನ್ ಸ್ವಿಚ್ ಆಫ್ ಆಗಿದೆ. ಈಗಲೇ ಹಣ ತಂದು ಕೊಡುವೆ ಎಂದು ಹೇಳಿ ಅಂಗಡಿಗಳ ಮಾಲೀಕರನ್ನು ವಂಚಿಸಿದ್ದನು.
ಪ್ರಕರಣ ನಡೆದ ಹಲವು ದಿನಗಳ ಬಳಿಕ ಮತ್ತೆ ನ. 13 ರಂದು ಕುತ್ತಾರು ಪಂಡಿತ್ ಹೌಸ್ ನಲ್ಲಿರುವ “ಸುಧಿ ಕಲೆಕ್ಷನ್” ಎಂಬ ಮೊಬೈಲ್ ಅಂಗಡಿಗೆ ತೆರಳಿ ಮಾಲಕ ದೀಪಕ್ ಅವರಲ್ಲಿ ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿಸಿದ್ದನು. ಗೂಗಲ್ ಪೇ ಮಾಡಲು ತನ್ನ ಮೊಬೈಲ್ ಸ್ವಿಚ್ ಆಫ್ ಎಂದು ಹೇಳಿ ನನ್ನ ಮನೆ ಸಮೀಪದಲ್ಲೇ ಇದ್ದು ನಾಳೆ ಹಣ ನೀಡುವುದಾಗಿ ತನ್ನ ಸಂಪರ್ಕದ ಮೊಬೈಲ್ ನಂಬರ್ ನೀಡಿ ತೆರಳಿದ್ದ. ದೀಪಕ್ ಅವರು ವಂಚಕ ನೀಡಿದ್ದ ಮೊಬೈಲ್ ನಂಬರಿಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದ್ದು ತಾನು ಮೋಸ ಹೋಗಿರುವುದು ಗೊತ್ತಾಗಿ ಮೊಬೈಲ್ ನಂಬರ್ನ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಅದು ವಂಚಕ ಗೂಡ್ಸ್ ಮುನೀರನಿಗೆ ಸೇರಿದ್ದೆಂಬುದು ತಿಳಿದುಬಂದಿದೆ.ಗೂಡ್ಸ್ ಮುನೀರನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ವಂಚನೆ,ಕಳವು ಪ್ರಕರಣಗಳು ದಾಖಲಾಗಿವೆ.