ನಗರದ ವಿವಿಧ ಕಡೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊರವರಿಂದ ಬಿರುಸಿನ ಮತಯಾಚನೆ

Spread the love

ನಗರದ ವಿವಿಧ ಕಡೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊರವರಿಂದ ಬಿರುಸಿನ ಮತಯಾಚನೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 58ನೇ ಬೋಳಾರ ವಾರ್ಡ್ ವ್ಯಾಪ್ತಿಯಲ್ಲಿರುವ ಪಿ.ಎಲ್.ಗೇಟ್, ಮೊರ್ಗನ್ ಗೇಟ್, ಜಪ್ಪು ಮಾರ್ಕೇಟ್, ಭಗಿನಿ ಸಮಾಜ, ಶೆಟ್ಟಿಬೆಟ್ಟು ಪರಿಸರಗಳಲ್ಲಿ ಹಾಗೂ 36ನೇ ಪದವು ಪೂರ್ವ ವಾರ್ಡಿನ ಸಿಲ್ವರ್ಗೇಟ್, ಕೋಟಿಮುರ ಪರಿಸರಗಳಲ್ಲಿ ಸುಮಾರು 350ಕ್ಕೂ ಅಧಿಕ ಮನೆಗಳಿಗೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೊ ರವರು ಮತಯಾಚನೆ ನಡೆಸಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಈ ಸಂಧರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅಭ್ಯರ್ಥಿ ಲೋಬೊ ರವರು ಕಳೆದ 5 ವರ್ಷಗಳಲ್ಲಿ ಶಾಸಕನಾಗಿ ನಗರದ ಮೂಲಭೂತ ಸೌಕರ್ಯಕ್ಕೆ ಸಾಕಷ್ಟು ಒತ್ತು ನೀಡಿದ್ದೇನೆ. ಮುಖ್ಯರಸ್ತೆಗಳಿಗೆ ಹಾಗೂ ಒಳರಸ್ತೆಗಳಿಗೆ ಕಾಯಕಲ್ಪ ನೀಡಿ ಜನರು ನೆಮ್ಮದಿಯಿಂದ ಪಯಣಿಸುವಂತಾಗಿದೆ. ಜಪ್ಪು ಕುಡಪಾಡಿ ಅಂಡರ್ಪಾಸ್, ಕಾಮಗಾರಿ ಪೂರ್ತಿಯಾಗಿದ್ದು ಜನರಿಗೆ ನಡೆದಾಡಲು ಬಹಳಷ್ಟು ಅನುಕೂಲವಾಗಿದೆ. ಕುಲಶೇಖರ ಕನ್ನಗುಡ್ಡ ರಸ್ತೆ ಅಭಿವೃದ್ಧಿ ಕಾಮಗಾರಿ ಈಗಾಗಲೇ ಶುರುವಾಗಿದೆ. ಮಹಾನಗರಪಾಲಿಕೆ ಪೌರಕಾರ್ಮಿಕರಿಗೆ ಮಹಾಕಾಳಿ ಪಡ್ಪುವಿನಲ್ಲಿ ವಸತಿಗೃಹ ಕಟ್ಟಡದ ಕೆಲಸ ಈಗಾಗಲೇ ಪ್ರಾರಂಭವಾಗಿದೆ. ಕೆರೆಗಳ ಅಭಿವೃದ್ದಿ ಕಾರ್ಯ ಈಗಾಗಲೇ ಶುರುವಾಗಿದೆ. ಗುಜ್ಜರಕೆರೆ ಬಳಿ ಯುಜಿಡಿ ಕಾಮಗಾರಿ ವೇಗವಾಗಿ ಸಾಗುತ್ತಿದ್ದು ಅದು ಪೂರ್ತಿಯಾದ ಬಳಿಕ ಕೆರೆ ಅಭಿವೃದ್ಧಿ ಕಾರ್ಯ ಆರಂಭಿಸಲಿದ್ದೇನೆ. ಈಗಾಗಲೇ ಜಪ್ಪಿನಮೊಗರಿನಲ್ಲಿರುವ ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಪಡಿಲು ಬೈರಾಡಿಕೆರೆ ಅಭಿವೃದ್ಧಿ ಕಾರ್ಯ ಆರಂಭವಾಗಿದೆ. ಕರ್ನಾಟಕ ಸರ್ಕಾರದಿಂದ ಎಡಿಬಿ 2ನೇ ಹಂತದ ಯೋಜನೆ ಈಗಾಗಲೇ ಮಂಜೂರಾಗಿದ್ದು, ಹಳೆ ಒಳಚರಂಡಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿಪಡಿಸಿ, ತೆರೆದ ಮಳೆನೀರು ಚರಂಡಿಗಳಲ್ಲಿ ಒಳಚರಂಡಿ ತ್ಯಾಜ್ಯ ಹರಿಯುದನ್ನು ಸಂಪೂರ್ಣವಾಗಿ ನಿಲ್ಲಿಸಲಾಗುವುದು ಎಂದರು.

ಅಭ್ಯರ್ಥಿಯ ಜೊತೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಭಾಸ್ಕರ್.ಕೆ, ಕಾರ್ಪೋರೇಟರ್ಗಳಾದ ರತಿಕಲಾ, ಕವಿತಾ, ಕಾಂಗ್ರೆಸ್ ನಾಯಕರಾದ ಅಬ್ದುಲ್ ಸಲೀಂ, ಸದಾಶಿವ ಅಮೀನ್, ರಮಾನಂದ ಪೂಜಾರಿ, ಸುರೇಶ್ ಶೆಟ್ಟಿ, ದಿನೇಶ್, ರಾಮ್ದಾಸ್, ಉದಯ್ಕುಮಾರ್, ಗೋಪಾಲ ಮಾಸ್ತರ್, ಅಲ್ವಿನ್, ಸುರೇಶ್ ಸನಿಲ್, ಬೆನೆಟ್ ಡಿ’ಮೆಲ್ಲೊ, ನಾರಾಯಣ್ ಕೊಟ್ಯಾನ್, ಶಫಿ ಅಹ್ಮದ್, ಸುರೇಶ್ ಕೊಟಾರಿ, ಮನೀಶ್ ಬೋಳಾರ, ಭಾರತಿ, ಶಾಲಿನಿ, ಸಂದೀಪ್ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.


Spread the love