Home Mangalorean News Kannada News ನದಿ ಹೂಳಿನ ಸಮಸ್ಯೆ : ಆ.20 ಕ್ಕೆ ಶಾಸಕ ನೇತ್ರತ್ವದಲ್ಲಿ ಸಭೆ 

ನದಿ ಹೂಳಿನ ಸಮಸ್ಯೆ : ಆ.20 ಕ್ಕೆ ಶಾಸಕ ನೇತ್ರತ್ವದಲ್ಲಿ ಸಭೆ 

Spread the love

ನದಿ ಹೂಳಿನ ಸಮಸ್ಯೆ : ಆ.20 ಕ್ಕೆ ಶಾಸಕ ನೇತ್ರತ್ವದಲ್ಲಿ ಸಭೆ 

ಕುಂದಾಪುರ: ಇಲ್ಲಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಳಾವರ, ಕೆದೂರು, ಬೇಳೂರು, ತೆಕ್ಕಟ್ಟೆ, ಕೋಟ, ಬಾರ್ಕೂರು ಮತ್ತು ವಡ್ಡರ್ಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹರಿಯುವ ನದಿಗಳಲ್ಲಿ ತುಂಬಿರುವ ಹೂಳುಗಳಿಂದ ಕೃತಕ ನೆರೆ ಉಂಟಾಗುತ್ತಿದ್ದು, ಇದನ್ನು ತಡೆಯಲು ಮುಂದಿನ ಕ್ರಮದ ಬಗ್ಗೆ ಚರ್ಚಿಸಲು ಆ.20 ರಂದು ಬೆಳಿಗ್ಗೆ 10.30 ಕ್ಕೆ ಶಾಸಕ ಕಿರಣ್‌ಕುಮಾರ ಕೊಡ್ಗಿ ಅವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಪಂಚಾಯತಿಯ ಡಾ.ವಿ.ಎಸ್‌.ಆಚಾರ್ಯ ಸಭಾಂಗಣದಲ್ಲಿ ಸಭೆ ಕರೆಯಲಾಗಿದೆ.

ಆ ಸಭೆಯಲ್ಲಿ ಕುಂದಾಪುರ ಹಾಗೂ ಬ್ರಹ್ಮಾವರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು, ಕಾಳಾವರ, ಕೆದೂರು, ಬೇಳೂರು, ತೆಕ್ಕಟ್ಟೆ, ಕೋಟ, ಬಾರ್ಕೂರು ಮತ್ತು ವಡ್ಡರ್ಸೆ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಭಾಗವಹಿಸಲು ಸಭೆಯ ನೋಟಿಸಿನಲ್ಲಿ ಸೂಚಿಸಲಾಗಿದೆ.

ತೆಕ್ಕಟ್ಟೆ ಮಲ್ಯಾಡಿಯಿಂದ ಚಿತ್ರಪಾಡಿಯ ತನಕ ಹರಿಯುವ ಸೊಲಡ್ಪು ನದಿಯಲ್ಲಿ ತುಂಬಿರುವ ಹೂಳಿನಿಂದಾಗಿ ನದಿಯಲ್ಲಿ ನೀರಿನ ಸರಾಗ ಹರಿಯುವಿಕೆಗೆ ತೊಂದರೆಯುಂಟಾಗಿ ಪ್ರತಿ ಮಳೆಗಾಲದ ವೇಳೆಯಲ್ಲಿಯೂ ಕೃತಕ ನೆರೆಯುಂಟಾಗಿ ಪರಿಸರದ ಕೃಷಿ ಗದ್ದೆಗಳಿಗೆ ಹಾನಿಯುಂಟಾಗುತ್ತಿತ್ತು. ಇತ್ತೀಚೆಗೆ ಜೋರಾಗಿ ಸುರಿದ ಮಳೆಯಿಂದಾಗಿ ಗಿಳಿಯಾರು, ಬೇಳೂರು ಪರಿಸರದಲ್ಲಿ ಕೃಷಿ ಗದ್ದೆಗಳಲ್ಲಿ ಕೃತಕ ನೀರು ತುಂಬಿ ನೂರಾರು ಎಕ್ರೆ ಕೃಷಿ ಭೂಮಿಗಳಿಗೆ ಹಾನಿಯಾಗಿದ್ದ ಹಿನ್ನೆಲೆಯಲ್ಲಿ ಮೂಡು ಗಿಳಿಯಾರು ಜನಸೇವಾ ಟ್ರಸ್ಟ್‌ ನೇತ್ರತ್ವದಲ್ಲಿ ಕೋಟ ಮಾಂಗಲ್ಯ ಮಂದಿರದಲ್ಲಿ ಜು.21 ರಂದು ನಡೆದ ರೈತರ ಹಾಗೂ ಸ್ಥಳೀಯರ ಸಭೆಯಲ್ಲಿ 90 ದಿನಗಳ ಒಳಗೆ ಸಂಬಂಧಿಸಿದ ವಿಚಾರದ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲು ಶಾಸಕರನ್ನು ಕೋರವುದು, ನಿರೀಕ್ಷಿತ ಸಮಯದಲ್ಲಿ ಅಭಿವೃದ್ಧಿಯ ಕೆಲಸಗಳು ನಡೆಯದೆ ಇದ್ದಲ್ಲಿ ಜನಸೇವಾ ಟ್ರಸ್ಟ್ ನೇತ್ರತ್ವದಲ್ಲಿ ಸಮಾನ ಮನಸ್ಕರೊಂದಿಗೆ ಪ್ರತಿಭಟನೆ ನಡೆಸುವ ಕುರಿತು ನಿರ್ಣಯಿಸಲಾಗಿತ್ತು, ಈ ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಎ.ಕಿರಣ್‌ಕುಮಾರ ಕೊಡ್ಗಿಯವರು, ಕೂಡಲೇ ಅಧಿಕಾರಿಗಳ ಸಭೆ ಕರೆದು ಸಮಸ್ಯೆಯ ಪರಿಹಾರದ ಕುರಿತು ವಿಚಾರ ವಿಮರ್ಶೆ ಮಾಡುವ ಭರವಸೆಯನ್ನು ವ್ಯಕ್ತಪಡಿಸಿದ್ದರು.

ಜನಸೇವಾ ಟ್ರಸ್ಟ್‌ ಸ್ವಾಗತ :
ಆ.20 ರಂದು ಸಮಸ್ಯೆಯ ವಿಚಾರ-ವಿಮರ್ಶೆಗಾಗಿ ಸಭೆ ನಿಗದಿಯಾಗಿರುವುದನ್ನು ಸ್ವಾಗತಿಸಿರುವ ಮೂಡು ಗಿಳಿಯಾರು ಜನಸೇವಾ ಟ್ರಸ್ಟ್‌ ಅಧ್ಯಕ್ಷ ವಸಂತ ಗಿಳಿಯಾರ್ ಅವರು, ಜು.21 ರಂದು ಕೋಟದಲ್ಲಿ ನಡೆದಿದ್ದ ಸಭೆಯಲ್ಲಿ, ಕೃತಕ ನೆರೆಗೆ ಹೊಳೆಯಲ್ಲಿ ತುಂಬಿರುವ ಹೂಳೆ ಕಾರಣ ಎನ್ನುವುದನ್ನು ಶಾಸಕರಿಗೆ ಮನವರಿಕೆ ಮಾಡಲಾಗಿತ್ತು. ಈ ಸಭೆಯಲ್ಲಿ ಮುಂದಿನ ಒಂದು ತಿಂಗಳ ಒಳಗೆ ಸಮಸ್ಯೆಯ ಪರಿಹಾರದ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸುವ ಕುರಿತು ಶಾಸಕ ಕಿರಣ್‌ ಕೊಡ್ಗಿಯವರು ಭರವಸೆ ನೀಡಿದ್ದರು. ಇದೀಗ ಆ.20 ರಂದು ಈ ವಿಚಾರದ ಕುರಿತು ಸಭೆ ನಿಗದಿಯಾಗುವ ಮೂಲಕ ಶಾಸಕರು, ತಾವು ಈ ಹಿಂದೆ ನೀಡಿದ್ದ ಭರವಸೆಯನ್ನು ಉಳಿಸಿಕೊಂಡಿದ್ದಾರೆ ಎಂದು ಗಿಳಿಯಾರ್ ಪ್ರತಿಕ್ರಿಯಿಸಿದ್ದಾರೆ.


Spread the love

Exit mobile version