ನನಸಾದ ದಶಕಗಳ ಕನಸು ; ಮಾ18 ರಂದು ಮಲ್ಪೆ-ಪಡುಕೆರೆ ಸೇತುವೆ ಲೋಕಾರ್ಪಣೆ
ಉಡುಪಿ: ಮಲ್ಪೆ-ಪಡುಕೆರೆ ಭಾಗದ ದಶಕಗಳ ಪ್ರಮುಖ ಬೇಡಿಕೆಯಲ್ಲಿ ಒಂದಾದ ಸಂಪರ್ಕ ಸೇತುವೆ ಕನಸು ಕೊನೆಗೂ ನನಸುಗೊಂಡು ಉದ್ಘಾಟನೆಗೆ ಸಜ್ಜಾಗಿ ನಿಂತಿದೆ. ಇದೇ ಮಾರ್ಚ್ 18 ರಂದು ಸಂಜೆ 5 ಗಂಟೆಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ನೇತೃತ್ವದಲ್ಲಿ ಸೇತುವೆಯ ಉದ್ಘಾಟನೆಗೊಳ್ಳಲಿದೆ.
ದ್ವೀಪ ಪ್ರದೇಶವಾದ ಪಡುಕೆರೆಯಿಂದ ಮಲ್ಪೆಗೆ ಇರುವ ದೂರ ಕೇವಲ 800 ಮೀಟರ್ ಆದರೆ ಮಲ್ಪೆಯಿಂದ ಕಾಪು ಕೈಪುಂಜಾಲು ವರೆಗೆ ಉದ್ದಕ್ಕೆ ಹರಡಿರುವ ದ್ವೀಪ ಪ್ರದೇಶದ ಜನರಿಗೆ ದೋಣಿ ಬಿಟ್ಟರೆ ಹೊರಗೆ ಹೋಗಲು 10 ಕಿಮಿ ದೂರ ದಾರಿಯನ್ನು ಸುತ್ತುವರಿದು ಹೋಗಬೇಕಾದ ಪರಿಸ್ಥಿತಿ. ಮೀನುಗಾರಿಕೆಯನ್ನೇ ನೆಚ್ಚಿಕೊಂಡಿರುವ ಇಲ್ಲಿ ಜನರು ಪ್ರತಿನಿತ್ಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದರು. ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ನಿತ್ಯ ಕೆಲಸಕ್ಕೆ ತೆರಳುವ ಮಂದಿ ನದಿ ದಾಟಲು ದೋಣಿಯನ್ನೇ ಅವಲಂಬಿಸಬೇಕಾಗಿತ್ತು. ತಮ್ಮ ಭಾಗಕ್ಕೆ ಸೇತುವೆಯನ್ನು ಪಡೆಯುವುದಕ್ಕೆ ಈ ಭಾಗದ ಜನ ಸಾಕಷ್ಟು ಹೋರಾಟವನ್ನು ನಡೆಸಿದ್ದರು.
ಹಿಂದಿನ ಬಿಜೆಪಿ ಸರಕಾರ ಇದ್ದ ಸಂದರ್ಭದಲ್ಲಿ ಅಂದಿನ ಉಡುಪಿ ಶಾಸಕ ರಘುಪತಿ ಭಟ್ ಅವರ ಅವಿರತ ಶ್ರಮದಿಂದ ಸೇತುವೆಯನ್ನು ಮಂಜೂರುಗೊಳಿಸಿ ಟೆಂಡರ್ ಕರೆದು 2013 ರ ಫೆಬ್ರವರಿ 10 ರಂದು ಶಿಲನ್ಯಾಸ ಕೂಡ ನಡೆಸಿದ್ದರು. ಯೋಜನೆಯ ಗುತ್ತಿಗೆಯನ್ನು ಯೋಜಕ ಸಂಸ್ಥೆಗೆ ನೀಡಿದ್ದು, ನಂತರದ ದಿನಗಳಲ್ಲಿ ಚುನಾವಣೆ ಬಂದು ಸರಕಾರ ಬದಲಾಯಿತು. ತಾಂತ್ರಿಕ ಕಾರಣಗಳಿಂದ ಉದ್ದೇಶಿತ ಯೋಜನೆ ಕೊಂಚ ಹಿನ್ನಡೆ ಕಾಣಬೇಕಾಗಿ ಬಂತು. ಮೊದಲಿನ ಸರಕಾರದ ಅವಧಿಯಲ್ಲಿ ರೂ 13.50 ಕೋಟಿ ಮೊತ್ತಕ್ಕೆ ಟೆಂಡರ್ ಆಗಿದ್ದು, ಬಳಿಕ ಸೇತುವೆಯ ಅಗಲ ಮತ್ತು ಎತ್ತರವನ್ನು ವಿಸ್ತರಿಸಲಾಯಿತು. ಸೇತುವೆಯ ವಿನ್ಯಾಸವನ್ನು ಬದಲಾಯಿಸಿದ ಪರಿಣಾಮ ವೆಚ್ಚ ರೂ 16.91 ಕೋಟಿಗೆ ಏರಿತು.
ಮೀನುಗಾರಿಕಾ ಸಚಿವ ಹಾಗೂ ಶಾಸಕ ಪ್ರಮೋದ್ ಮಧ್ವರಾಜ್ ಈ ಸೇತುವೆಯ ನಿರ್ಮಾಣದಲ್ಲಿ ಹೆಚ್ಚಿನ ಕಾಳಜಿಯನ್ನು ವಹಿಸಿ ಹೆಚ್ಚುವರಿ ಅನುದಾನವನ್ನು ಮಂಜೂರು ಮಾಡಿ ಸುಂದರ ಸೇತುವೆ ನಿರ್ಮಿಸುವಲ್ಲಿ ಸಫಲಾದರು.
ಸೇತುವೆಗೆ ವಿವಿಧ ಮೂಲಗಳಿಂದ ಅನುದಾನವನ್ನು ಹೊಂದಿಸಿದ್ದು, ನಗರೋತ್ಥಾನದಿಂದ ರೂ 8 ಕೋಟಿ, ನಗರಸಭೆಯ ಅಮೃತಮಹೋತ್ಸವ ನಿಧಿಯಿಂದ ರೂ 5.5 ಕೋಟಿ, ಶಾಸಕರ ವಿಶೇಷ ನಿಧಿಯಿಂದ ರೂ 50 ಲಕ್ಷ, ನಗರಸಭೆಯಿಂದ 2 ಕೋಟಿ, ಅಮೃತ ಮಹೋತ್ಸವದ ಬಡ್ಡಿಯಿಂದ ರೂ 90 ಲಕ್ಷ ಹೀಗೆ ಒಟ್ಟಾಗಿ ರೂ 16.91 ಕೋಟಿ ವೆಚ್ಚದಲ್ಲಿ ಒಟ್ಟು 9 ಪಿಲ್ಲರುಗಳನ್ನು ಒಳಗೊಂಡ ಸೇತುವೆಯನ್ನು ನಿರ್ಮಿಸಲಾಗಿದೆ.
ಸೇತುವೆಯ ನಿರ್ಮಾಣದಿಂದ ಪಡುಕೆರೆ ಬೀಚನ್ನು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸಲು ಉತ್ತಮ ಅವಕಾಶವಿದ್ದು, ಪಡುಕೆರೆ ಬೀಚನ್ನು ಮಲ್ಪೇ ಬೀಚ್ ಅಭಿವೃದ್ಧಿ ಸಮಿತಿಯ ಅಧಿನಕ್ಕೆ ತರಲು ಈಗಾಗಲೇ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದು, ಪಡುಕೆರೆ ಬೀಚನ್ನು ಮಲ್ಪೆ ಬೀಚಿನಂತೆಯೇ ಉತ್ತಮ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸುವ ಚಿಂತನೆಯನ್ನು ಸಚಿವ ಮಧ್ವರಾಜ್ ಹೊಂದಿದ್ದಾರೆ.