ನನ್ನ ಅಭಿವೃದ್ಧಿ ಕಾರ್ಯ ನೋಡಿ ಮತ ನೀಡಿ: ಮೊಯ್ದಿನ್ ಬಾವಾ
ಸುರತ್ಕಲ್: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ಸಲದ ಬಜೆಟ್ನಲ್ಲಿ ಮೀನುಗಾರ ಸಮುದಾಯದ ಅರ್ಥಿಕ ಸಬಲೀಕರಣಕ್ಕೆ ಯೋಜನೆ ಆರಂಭಿಸುವ ಮೂಲಕ ಸರ್ವ ಸಮುದಾಯಕ್ಕೂ ಸಮಾನ ನ್ಯಾಯದ ಪರಿಪಾಲನೆ ಮಾಡಿದ್ದಾರೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಮೊದಿನ್ ಬಾವಾ ಹೇಳಿದರು.
ಮಂಗಳೂರು ಉತ್ತರ ಕ್ಷೇತ್ರದ ಸುರತ್ಕಲ್ ನಲ್ಲಿ ಅಲ್ಪ ಸಂಖ್ಯಾತ ವಿಭಾಗದ ಸಭೆಯಲ್ಲಿ ಮಾತನಾಡಿದರು.
ಮತ ಪ್ರಚಾರ ನಡೆಸಿದ ಅವರು ಸರಕಾರದ ಅಭಿವೃದ್ಧಿ ಸಾಧನೆಗಳ ಕುರಿತು ಮಾಹಿತಿ ನೀಡಿದರು. ಹಿಂದಿನ ಬಜೆಟ್ ನಲ್ಲಿ ಡೀಸೆಲ್ ಸಬ್ಸಿಡಿ, ಸೀಮೆ ಎಣ್ಣೆ ಸಬ್ಸಿಡಿ ಒದಗಿಸಲಾಗಿತ್ತು. ಈ ಬಾರಿ ಬೆಸ್ತರ ಏಳಿಗೆಗಾಗಿ ಅಭಿವೃದ್ಧಿ ನಿಗಮ ಸ್ಥಾಪಿಸಿದರು. ಇದು ಕರಾವಳಿ ಭಾಗದ ಮೀನುಗಾರ ಸಮುದಾಯಕ್ಕೆ ಸಹಕಾರವಾಗುತ್ತಿದೆ ಎಂದರು.
ಗಲ್ಫ್ ಉದ್ಯೋಗಿಗಳಿಗೆ ಸಹಾಯ ಹಸ್ತ: ಗಲ್ಫ್ ರಾಷ್ಟ್ರಗಳಲ್ಲಿ ಸಮಸ್ಯೆಯಾಗಿ ಹಿಂದಿರುಗುವ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗದ ನೆರವಿಗೆ ಮುಖ್ಯಮಂತ್ರಿಗಳ ಗಮನ ಸೆಳೆಯುವಲ್ಲಿ ತಾನು ಯಶಸ್ವಿಯಾಗಿದ್ದು,ಸರಕಾರ ಯೋಜನೆ ರೂಪಿಸಿದ್ದು ಕೇರಳ ಮಾದರಿ ಕಾರ್ಯಾರಂಭ ಮಾಡಿದೆ. ಹಿಂದುಳಿದ ವರ್ಗಗಳ ,ಅಲ್ಪ ಸಂಖ್ಯಾತರ ಕಲ್ಯಾಣಕ್ಕೆ ಸ್ವ ಉದ್ಯೋಗಕ್ಕೆ ನಮ್ಮ ಸರಕಾರ ದಾಖಲೆ ಅನುದಾನ ನೀಡಿದೆ ಎಂದರು.
ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷ ಮಂಗಳೂರು ಬಾವಾ ,ಹಂಗಾಮಿ ಅಧ್ಯಕ್ಷ ದೀಪಕ್ ಪೂಜಾರಿ, ಶಶಿಧರ ಹೆಗ್ಡೆ, ಸದಾಶಿವ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.