ನನ್ನ ಪೌರತ್ವವನ್ನು ಸಾಬೀತುಗೊಳಿಸಲು ದಾಖಲೆ ಸಲ್ಲಿಸದೆ ಎನ್.ಆರ್.ಸಿ ವಿರೋಧಿಸುತ್ತೇನೆ : ಸಸಿಕಾಂತ್ ಸೆಂಥಿಲ್
ಬೆಂಗಳೂರು: ಪೌರತ್ವ (ತಿದ್ದುಪಡಿ) ಮಸೂದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ)ಯನ್ನು ವಿರೋಧಿಸಿ ಕಾನೂನು ಅಸಹಕಾರ ಚಳವಳಿಯನ್ನು ಆರಂಭಿಸುವಂತೆ ಹಲವಾರು ಮಾನವ ಹಕ್ಕು ಕಾರ್ಯಕರ್ತರು ಭಾರತೀಯರನ್ನು ಆಗ್ರಹಿಸಿದ್ದಾರೆ. ಸೋಮವಾರ ಏಳು ಗಂಟೆಗಳ ಸುದೀರ್ಘ ಚರ್ಚೆಯ ಬಳಿಕ ಲೋಕಸಭೆಯಲ್ಲಿ ಅಂಗೀಕಾರಗೊಂಡಿರುವ ಪೌರತ್ವ ಮಸೂದೆಯನ್ನು ಬುಧವಾರ ರಾಜ್ಯಸಭೆಯಲ್ಲಿ ಮಂಡಿಸುವ ನಿರೀಕ್ಷೆಯಿದೆ.
‘ಮಸೂದೆಯು ಸಂಸತ್ತಿನಲ್ಲಿ ಅಂಗೀಕಾರಗೊಂಡರೆ ನಾನು ಅಧಿಕೃತವಾಗಿ ಮುಸ್ಲಿಮ್ ಎಂದು ನೋಂದಾಯಿಸಿಕೊಳ್ಳುತ್ತೇನೆ, ಬಳಿಕ ಎನ್ಆರ್ಸಿಗೆ ಯಾವುದೇ ದಾಖಲೆಗಳನ್ನು ನೀಡಲು ನಿರಾಕರಿಸುತ್ತೇನೆ. ಅಂತಿಮವಾಗಿ ದಾಖಲೆಗಳಿಲ್ಲದ ಯಾವುದೇ ಮುಸ್ಲಿಮ್ ವ್ಯಕ್ತಿಗೆ ನೀಡುವ ಶಿಕ್ಷೆಯನ್ನೇ (ಬಂಧನ ಕೇಂದ್ರಕ್ಕೆ ರವಾನೆ ಮತ್ತು ಪೌರತ್ವ ರದ್ದು) ನನಗೂ ನೀಡುವಂತೆ ಆಗ್ರಹಿಸುತ್ತೇನೆ. ಈ ಕಾನೂನು ಅಸಹಕಾರ ಚಳವಳಿಯಲ್ಲಿ ಭಾಗಿಯಾಗಿ ‘ಎಂದು ಮಾಜಿ ಐಎಎಸ್ ಅಧಿಕಾರಿಯೂ ಆಗಿರುವ ಸಸಿಕಾಂತ್ ಸೆಂಥಿಲ್ ಅವರು ಟ್ವೀಟಿಸಿದ್ದಾರೆ.
ಗೃಹಸಚಿವ ಅಮಿತ್ ಶಾ ಅವರಿಗೆ ಪತ್ರವೊಂದನ್ನು ಬರೆದಿರುವ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಅವರು,ಪೌರತ್ವ ತಿದ್ದುಪಡಿ ಮಸೂದೆಯ ಅಂಗೀಕಾರವು ಆಧುನಿಕ ಭಾರತದ ಇತಿಹಾಸದಲ್ಲಿ ಅತ್ಯಂತ ಕರಾಳ ದಿನವಾಗಿದೆ. ಪೌರತ್ವ ಮಸೂದೆಯ ಸ್ಥಿತಿಗತಿ ಏನೇ ಇದ್ದರೂ,ರಾಷ್ಟ್ರಮಟ್ಟದಲ್ಲಿ ಎನ್ಆರ್ಸಿ ಪರಿಕಲ್ಪನೆಯು ಅಮಾನವೀಯಗೊಳಿಸುವ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.
‘ನನ್ನ ಪೌರತ್ವವನ್ನು ಸಾಬೀತುಗೊಳಿಸಲು ಅಗತ್ಯ ದಾಖಲೆಗಳನ್ನು ಸಲ್ಲಿಸದಿರುವ ಮೂಲಕ ಎನ್ಆರ್ಸಿ ಪ್ರಕ್ರಿಯೆಯನ್ನು ಒಪ್ಪಿಕೊಳ್ಳಲು ನಾನು ನಿರಾಕರಿಸುತ್ತೇನೆ ಮತ್ತು ನನ್ನ ಅವಿಧೇಯತೆಗಾಗಿ ಸರಕಾರವು ತೆಗೆದುಕೊಳ್ಳುವ ಕ್ರಮವನ್ನು ಸ್ವೀಕರಿಸಲು ಸಿದ್ಧನಿದ್ದೇನೆ. ಸರಕಾರವು ನಾನು ಭಾರತೀಯ ಪ್ರಜೆಯಲ್ಲ ಎಂದು ಘೋಷಿಸಿದರೆ ನೀವು ದೇಶಾದ್ಯಂತ ಸ್ಥಾಪಿಸುತ್ತಿರುವ ಹಲವಾರು ಬಂಧನ ಕೇಂದ್ರಗಳಿಗೆ ಸಂತಸದಿಂದಲೇ ದಾಖಲಾಗುತ್ತೇನೆ. ಕೋಮುವಾದಿ ದಾಖಲೀಕರಣ ಮತ್ತು ನನ್ನ ಸಹ ಮಾನವಜೀವಿಗಳಿಗೆ ಹಕ್ಕು ವಂಚನೆಯನ್ನು ನೇಪಥ್ಯದಿಂದ ಮೂಕಪ್ರೇಕ್ಷಕನಾಗಿ ವೀಕ್ಷಿಸುವುದಕ್ಕಿಂತ ಬಂಧನವನ್ನು ನಾನು ಸ್ವಾಗತಿಸುತ್ತೇನೆ’ ಎಂದೂ ಅವರು ಹೇಳಿದ್ದಾರೆ.