ನಮ್ಮ ಇಡೀ ಕುಟುಂಬ ಕಾಂಗ್ರೆಸ್ ಪಕ್ಷಕ್ಕೆ ನಿಷ್ಟೆ ಹೊಂದಿದೆ : ಯು ಟಿ ಖಾದರ್
ಮಂಗಳೂರು: ನನ್ನ ಇಡೀ ಕುಟುಂಬ ಕಾಂಗ್ರೆಸ್ ಪಕ್ಷಕ್ಕೆ ನಿಷ್ಟೆಯನ್ನು ಹೊಂದಿದ್ದು, ನನ್ನ ಸಹೋದರ ಆಗಲಿ ಇತರ ಯಾರೇ ನಮ್ಮ ಹಿರಿಯರಿಂದ ಹೊಂದಿದ ಮನೆತನದ ಹೆಸರನ್ನು ಕೆಡಿಸಲು ಪ್ರಯತ್ನ ಪಡುವುದಿಲ್ಲ ಅಲ್ಲದೆ ನನ್ನ ಸಹೋದರ ಇಫ್ತಿಕಾರ್ ಆಲಿ ಯಾವುದೇ ಕಾರಣಕ್ಕೂ ಬೇರೆ ಯಾವುದೇ ಪಕ್ಷಕ್ಕೂ ಸೇರುತ್ತಿಲ್ಲ . ನಮ್ಮ ಕುಟುಂಬ ಸಮಾಜದಲ್ಲಿ ಗುರುತಿಸಿಕೊಂಡಿದೆ ಎಂದರೆ ಅದು ಕಾಂಗ್ರೆಸ್ ಪಕ್ಷದಿಂದ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಯು ಟಿ ಖಾದರ್ ಸ್ಪಷ್ಟಪಡಿಸಿದರು.
ಅವರು ಸೋಮವಾರ ನಗರದ ಸರ್ಕಿಟ್ ಹೌಸಿನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ನನ್ನ ಕುಟುಂಬದ ಪರವಾಗಿ ಈ ವಿಷಯಕ್ಕೆ ತಾನು ಸ್ಪಷ್ಟಿಕರಣ ನೀಡುತ್ತಿದ್ದು ನಾವು ಬೇಕಾದರೆ ರಾಜಕೀಯದಿಂದ ದೂರ ಇರುತ್ತೇವೆ ಅದಕ್ಕೆ ಬದಲಾಗಿ ನಮ್ಮ ಹಿರಿಯರ ಇಚ್ಛೆಯ ವಿರುದ್ದವಾಗಿ ಎಂದೂ ಕೂಡ ಹೋಗುವುದಿಲ್ಲ. ನಮ್ಮ ಇಡೀ ಕುಟುಂಬ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿದ್ದು, ನಮ್ಮ ತಂದೆಯವರು ಪಕ್ಷದಿಂದ ಗಳಿಸಿದ ಹೆಸರನ್ನು ಉಳಿಸುವುದು ನಮ್ಮ ಕರ್ತವ್ಯ ಎಂದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಅಲ್ಪಸಂಖ್ಯಾತ ಸಮುದಾಯದವರ ಮೇಲೆ ನಿರಂತರ ಧಾಳಿಗಳು ನಡೆಯುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಕಾಂಗ್ರೆಸ್ ಪಕ್ಷ ಸಂಪೂರ್ಣ ಜಾತ್ಯಾತೀತ ನಿಲುವನ್ನು ಹೊಂದಿದ್ದು, ಯಾವುದೇ ಅಸಹಾಯಕ ವ್ಯಕ್ತಿಗೆ ತೊಂದರೆಯಾದರೂ ಸರಕಾರ ಕ್ರಮ ಕೈಗೊಳ್ಳಲಿದೆ. ಕಾಂಗ್ರೆಸ್ ಪಕ್ಷ ಸದಾ ಅಲ್ಪಸಂಖ್ಯಾತರ, ದಲಿತರ ಮತ್ತು ಹಿಂದುಳಿದವರ ಪರವಾಗಿದ್ದು, ಅವರ ಏಳಿಗೆಗೆ ಶ್ರಮಿಸುತ್ತದೆ. ಜನರು ಕೆಲವೊಂದು ವಿಷಯಗಳಿಗೆ ಗೊಂದಲಕ್ಕೆ ಒಳಪಡಬಾರದು. ಖುರೇಶಿ ಪ್ರಕರಣವನ್ನು ಸರಕಾರ ಈಗಾಗಲೇ ಸಿಒಡಿಗೆ ಒಪ್ಪಿಸಿದ್ದು, ತನಿಖಾ ವರದಿಗಾಗಿ ಕಾಯುತ್ತಿದ್ದೇವೆ. ವರದಿಯ ಬಳಿಕ ತಪ್ಪಿತಸ್ಥರು ಯಾರೇ ಆಗಿದ್ದರೂ ಕೂಡ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಮಗೆ ಶಾಂತಿ ಸಮಾಧಾನ, ಸಹಬಾಳ್ವೆಯನ್ನು ಅಪೇಕ್ಷಿಸುತ್ತಿದ್ದು ಅದನ್ನೇ ಸರಕಾರ ಬಯಸುತ್ತಿದೆ ಎಂದರು.
ಅಶ್ರಫ್ ಅವರು ಪಕ್ಷದ ವಿರುದ್ದ ಕೆಲವೊಂದು ಸುದ್ದಿಗಳನ್ನು ಹರಡುತ್ತಿದ್ದು, ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಖಾದರ್ ಜನರು ಸಮಾಜ ವಿರೋಧಿ ಕೆಲಸಗಳಿಗೆ ಬೆಂಬಲಿಸಬಾರದು. ಸಮಾಜ ವಿರೋಧಿ ಕೆಲಸಗಳ ಕುರಿತು ಜಿಲ್ಲಾ ಕಾಂಗ್ರೆಸ್ ನಿರ್ಧರಿಸಲಿದೆ ಎಂದರು.