ನಮ್ಮ ವಿಭಜನೆಯಿಂದ ರಾಜಕಾರಣಿಗಳ ಅಸ್ತಿತ್ವ ಗಟ್ಟಿಗೊಳ್ಳುತ್ತದೆ – ಡಾ| ಪಿ.ವಿ.ಭಂಡಾರಿ

Spread the love

ನಮ್ಮ ವಿಭಜನೆಯಿಂದ ರಾಜಕಾರಣಿಗಳ ಅಸ್ತಿತ್ವ ಗಟ್ಟಿಗೊಳ್ಳುತ್ತದೆ – ಡಾ| ಪಿ.ವಿ.ಭಂಡಾರಿ

ಉಡುಪಿ: ಇಂದು ಧರ್ಮ ಧರ್ಮಗಳ ನಡುವೆ ದ್ವೇಷ ಬಿತ್ತಿ ವಿಭಜಿಸುವ ಪ್ರಯತ್ನ ಮಾಡಲಾಗುತ್ತದೆ ಇದರ ಹಿಂದೆ ರಾಜಕೀಯ ವ್ಯಕ್ತಿಗಳ ಹಿತಾಸಕ್ತಿ ಅಡಗಿದೆ. ನಾವು ವಿಭಜನೆಗೊಂಡಾಗ ರಾಜಕಾರಣಿಗಳ ಅಸ್ತಿತ್ವಗಟ್ಟಿಗೊಳ್ಳುತ್ತದೆಂದು ಖ್ಯಾತ ಮನರೋಗ ತಜ್ಞ ಡಾ.ಪಿ.ವಿ ಭಂಡಾರಿ ಜಮಾಅತೇ ಇಸ್ಲಾಮಿ ಹಿಂದ್ ಹೂಡೆ ಹಾಗೂ ಸಾಲಿಹಾತ್ ಸಮೂಹ ಸಂಸ್ಥೆ ಜಂಟಿಯಾಗಿ ಆಯೋಜಿಸಿದ್ದ ಈದ್ ಸೌಹರ್ದ ಕೂಟವನ್ನುದ್ದೇಶಿಸಿ ಮಾತನಾಡಿದರು.

ನಮ್ಮ ಜಗಳಗಳಿಂದ ತೊಂದರೆಗೊಳಪಡುವವರು ನಾವೇ ಹೊರತು ಬೇರೆಯವರಲ್ಲ. ರಾಜಕಾರಣಿಗಳಿಗೆ ಇದರಿಂದ ಲಾಭವಾಗುತ್ತದೆ. ನಮ್ಮ ನಡುವೆ ಆಚಾರ ವಿಚಾರಗಳ ಭಿನ್ನತೆಯಿದ್ದರೂ, ಗೌರವಿಸಿ ಬದುಕುವವರು ನಾವಾಗಬೇಕೆಂದ ಅವರು, ಸೌಹರ್ದತೆಯ ಜೀವನಕ್ಕೆ ಹಾಜಿ ಅಬ್ದುಲ್ಲಾ ಅವರು ಸ್ಪೂರ್ತಿ ಅವರ ವಿಚಾರಗಳನ್ನು ಮೈಗೂಡಿಸಿಕೊಂಡು ಬದುಕುವವರು ನಾವಾಗಬೇಕೆಂದರು.

ಪ್ರೊ.ಸಿರಿಲ್ ಮಥಾಯಿಸ್ ಮಾತನಾಡಿ, ಸೌಹರ್ದ ಸೇತುವೆಗಳನ್ನು ಕಟ್ಟುವ, ಮನಸ್ಸನ್ನು ಜೋಡಿಸುವ ಕೆಲಸಗಳನ್ನು ಮಾಡುತ್ತ ಮನಸ್ಸಿನ ಹಣತೆಗಳನ್ನು ಬೆಳಗಿಸುವವರು ನಾವಾಗಬೇಕೆಂದರು.

ಕೆಮ್ಮಣ್ಣು ಚರ್ಚಿನ ಧರ್ಮಗುರುಗಳಾದ ಫಾ.ಹೆರಾಲ್ಡ್‌ ಪಿರೇರಾ ಮಾತನಾಡುತ್ತಾ, ಬೇರೆಯವರಿಂದ ಒಳಿತನ್ನು ಆಶಿಸುವ ಬದಲು ಸ್ವತಃ ನಾವೇ ನಮ್ಮ ಜೀವನದಲ್ಲಿ ಒಳಿತನ್ನು ಪಾಲಿಸುವಂತವರಾಗಬೇಕೆಂದರು.

ಕೊನೆಯಲ್ಲಿ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞ ಮಾತನಾಡಿ, ಜಗತ್ತನ್ನು ನಿಯಂತ್ರಿಸಲು ಯಂತ್ರಗಳನ್ನು ತಯಾರು ಮಾಡಿದ ಮಾನವ, ತನ್ನನ್ನು ನಿಯಂತ್ರಿಸುವಲ್ಲಿ ಸೋತು ಹೋಗಿದ್ದಾನೆ. ಆ ಕಾರಣಕ್ಕಾಗಿ ಮನುಷ್ಯ ಹಲವಾರು ಸಮಸ್ಯೆಗಳಲ್ಲಿ ಸಿಲುಕಿ ಹಾಕಿಕೊಂಡಿದ್ದಾನೆ. ಆದ್ದರಿಂದ ನಮ್ಮನ್ನು ನಿಯಂತ್ರಿಸುವ ತರಬೇತಿಗಾಗಿ ರಂಝಾನ್ ಉಪವಾಸ ಆಚರಿಸಲಾಗುತ್ತದೆ. ಉಪವಾಸ ವಿವೇಕವನ್ನು ಕಲಿಸುತ್ತದೆ. ಇಂದು ಎಲ್ಲ ಕ್ಷೇತ್ರಗಳು ಅವಿವೇಕಿಗಳಿಂದ ತುಂಬಿ ಹೋಗಿದೆ. ಆದ್ದರಿಂದ ವಿವೇಕದ ಮಹತ್ವ ತುಂಬಾ ಇದೆ ಎಂದ ಅವರು. ಇವತ್ತು ಧರ್ಮ ಗ್ರಂಥಗಳ ಹೆಸರಿನಲ್ಲಿ ಅಶಾಂತಿ ಹರಡಲಾಗುತ್ತದೆ. ಗೂಂಡಾಗಳು, ಅಪರಾಧಿಕ ಹಿನ್ನಲೆಯವರು ಧರ್ಮ ರಕ್ಷಣೆಯ ಹೆಸರಿನಲ್ಲಿ ಅಶಾಂತಿ ಹುಟ್ಟು ಹಾಕುತ್ತಿದ್ದಾರೆ. ಆದ್ದರಿಂದ ನಾವು ಮೂಲ ಧರ್ಮ ಗ್ರಂಥಗಳನ್ನು ಅಧ್ಯಯನ ಮಾಡಿ ಧರ್ಮಗಳನ್ನು ಅರ್ಥೈಸಿ ಅದರ ಸಂದೇಶದಂತೆ ಪರಸ್ಪರ ಅರಿತು ಬಾಳುವವರಾಗಬೇಕೆಂದರು. ಮನುಷ್ಯ ಮಾನವೀಯತೆಯನ್ನು ಮರೆತು ಮೃಗಗಳಂತೆ ವರ್ತಿಸುತ್ತಿದ್ದಾನೆ. ಅರಣ್ಯದಲ್ಲಿ ಪ್ರಾಣಿಗಳು ಇನ್ನೊಂದು ಪ್ರಾಣಿಯನ್ನು ಯಾವುದೇ ಕಾರಣವಿಲ್ಲದೆ ಕೊಲ್ಲುವಂತೆ ಮನುಷ್ಯ ಮನುಷ್ಯನನ್ನು ನಿರ್ದಯವಾಗಿ ಹತ್ಯೆ ಮಾಡುತ್ತಿದ್ದಾನೆ. ಆದ್ದರಿಂದ ಮಾನವೀಯತೆ ಪರಿಪಾಠವನ್ನು ವ್ಯಾಪಕಗೊಳಿಸಿ ಯುವ ಸಮುದಾಯವನ್ನು ಕ್ರೂರತೆಯಿಂದ ರಕ್ಷಿಸಬೇಕೆಂದರು.

ಈ ಸಂಧರ್ಭದಲ್ಲಿ ಜಮಾಅತೆ ಇಸ್ಲಾಮಿನ ವಲಯ ಸಂಚಾಲಕರಾದ ಅಕ್ಬರ್ ಅಲಿ ಉಡುಪಿ, ಸ್ಥಾನೀಯ ಅಧ್ಯಕ್ಷರಾದ ಅಬ್ದುಲ್ ಕಾದೀರ್ ಮೊಯ್ದಿನ್, ಸಾಲಿಹಾತ್ ಸಮೂಹ ಸಂಸ್ಥೆಯ ಆಡಾಳಿತಾಧಿಕಾರಿ ಅಸ್ಲಮ್ ಹೈಕಾಡಿ ಉಪಸ್ಥಿತರಿದ್ದರು. ಆರಂಭದಲ್ಲಿ ಫಾಕರುಲ್ ಇಸ್ಲಾಮ್ ಕುರಾನ್ ಪಠಿಸಿದರು.ಇದ್ರಿಸ್ ಹೂಡೆ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಜಿ.ಎಮ್ ಶರೀಫ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.


Spread the love