ನರೇಶ್ ಶೆಣೈ ನ್ಯಾಯಾಲಯಕ್ಕೆ ಹಾಜರು
ಮಂಗಳೂರು: ನಗರದ ಕೊಡಿಯಾಲ್ಬೈಲ್ನಲ್ಲಿ ಮಾರ್ಚ್ 21ರಂದು ನಡೆದಿದ್ದ ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ಪ್ರಮುಖ ಆರೋಪಿ ಯುವ ಬ್ರಿಗೇಡ್ ಮುಖಂಡ ನರೇಶ್ ಶೆಣೈಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮೂರು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.
ವಿನಾಯಕ ಬಾಳಿಗ ಕೊಲೆ ನಡೆದ ದಿನದಿಂದಲೂ ನರೇಶ್ ಶೆಣೈ ತಲೆಮರೆಸಿಕೊಂಡಿದ್ದ. ಸತತ ಮೂರು ತಿಂಗಳಿನಿಂದ ಪೊಲೀಸರು ಆತನ ಪತ್ತೆಗೆ ಯತ್ನಿಸಿದ್ದು. ಭಾನುವಾರ ಹೆಜಮಾಡಿ ಸಮೀಪ ಇರುವ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಇನ್ಸ್ಪೆಕ್ಟರ್ ವೆಲೆಂಟೈನ್ ಡಿಸೋಜ ನೇತೃತ್ವದ ತಂಡ ಆತನನ್ನು ಸೆರೆ ಹಿಡಿದಿದ್ದರು.
ಮಂಗಳೂರಿನ ವಿ.ಟಿ. ರಸ್ತೆಯಲ್ಲಿ ವಿವೇಕ್ ಟ್ರೇಡರ್ಸ್ ಎಂಬ ಆಯುರ್ವೇದ ಔಷಧಿ ಅಂಗಡಿ ಹೊಂದಿರುವ ನರೇಶ್ ಈ ಕೊಲೆಯ ರೂವಾರಿ ಎನ್ನುವುದಕ್ಕೆ ಪೋಲಿಸರ ಬಳಿ ಪ್ರಬಲ ಸಾಕ್ಷ್ಯಗಳಿವೆ. ಇತರೆ ಆರೋಪಿಗಳ ಜತೆ ಸೇರಿ ಕೊಲೆಯ ಸಂಚು ನಡೆಸಿರುವುದು, ಕೊಲೆ ಮಾಡಿರುವ ಆರೋಪಿಗಳಿಗೆ ಹಣ ನೀಡಿರುವುದು ಮತ್ತು ಕೊಲೆಯ ಬಳಿಕ ತಲೆಮರೆಸಿಕೊಂಡು ಸಾಕ್ಷ್ಯ ನಾಶ ಮಾಡಿರುವುದು ತನಿಖೆಯ ವೇಳೆ ಗೊತ್ತಾಗಿದೆ.
ತನಿಖಾಧಿಕಾರಿಯಾಗಿರುವ ಎಸಿಪಿ ತಿಲಕ್ಚಂದ್ರ ನೇತೃತ್ವದ ತಂಡ ಸೋಮವಾರ ಬೆಳಿಗ್ಗೆ 11.30ರ ಸುಮಾರಿಗೆ ಆರೋಪಿಯನ್ನು ನಗರದ ಎರಡನೇ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿತು. ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಪ್ರಶ್ನಿಸಬೇಕಿರುವುದರಿಂದ ಆರೋಪಿಯನ್ನು ಒಂದು ವಾರಗಳ ಕಾಲ ವಶಕ್ಕೆ ನೀಡುವಂತೆ ಮನವಿಯನ್ನೂ ಸಲ್ಲಿಸಿತು. ಪೊಲೀಸರು ಮತ್ತು ಆರೋಪಿ ಪರ ವಕೀಲರ ವಾದ ಆಲಿಸಿದ ನ್ಯಾಯಾಧೀಶರು, ಆರೋಪಿಯನ್ನು ಮೂರು ದಿನಗಳ ಕಾಲ ತನಿಖಾ ತಂಡದ ವಶಕ್ಕೊಪ್ಪಿಸಿ ಆದೇಶ ಹೊರಡಿಸಿದರು.