ನರ್ಮ್ ಬಸ್ಸುಗಳಿಗೆ ತಡೆ ಹಿಂದೆ ಬಿಜೆಪಿ ಕುಮ್ಮಕ್ಕು ಯೂತ್ ಕಾಂಗ್ರೆಸ್ ಹೇಳಿಕೆ ಹಾಸ್ಯಾಸ್ಪದ: ಅಕ್ಷಿತ್ ಶೆಟ್ಟಿ ಹೆರ್ಗ
ಉಡುಪಿ: ನರ್ಮ್ ಬಸ್ಸುಗಳ ಸಂಚಾರಕ್ಕೆ ಹೈಕೋರ್ಟ್ ನೀಡಿರುವ ತಡೆಯಾಜ್ಞೆಯ ಹಿಂದೆ ಬಿಜೆಪಿ ಕುಮ್ಮಕ್ಕು ಇದೆ ಎಂದು ಯುವ ಕಾಂಗ್ರೆಸ್ ಮಾಡಿರುವ ಆರೋಪ ಹಾಸ್ಯಸ್ಪದ ನಗರ ಯುವ ಮೋರ್ಚಾ ಅಧ್ಯಕ್ಷ ಅಕ್ಷಿತ್ ಶೆಟ್ಟಿ ಹೆರ್ಗ ಹೇಳಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅಕ್ಷಿತ್ ಶೆಟ್ಟಿಯವರು ಚುನಾವಣೆ ಹತ್ತಿರ ಬರುತ್ತಿದ್ದಂತೆ ಜನರನ್ನು ದಿಕ್ಕು ತಪ್ಪಿಸಲು ಕಾಂಗ್ರೆಸ್ ಕಪೋಲಕಲ್ಪಿತ ಆರೋಪಗಳನ್ನು ಮಾಡುತ್ತಿದ್ದು, ಕಾಂಗ್ರೆಸ್ ನಿನ್ನೆ ನಡೆಸಿದ ಪ್ರತಿಭಟನೆ ಯಾರ ವಿರುದ್ಧ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಸರಕಾರಿ ನರ್ಮ್ ಬಸ್ಸುಗಳ ಸಂಚಾರಕ್ಕೆ ತಡೆ ನೀಡಬೇಕು ಎಂದು ನ್ಯಾಯಾಲಯದ ಮೊರೆ ಹೋದವರು ಖಾಸಗಿ ಬಸ್ ಮಾಲಕರು. ಇವರ ಪೈಕಿ ಹೆಚ್ಚಿನ ಮಾಲಕರು ಕಾಂಗ್ರೆಸ್ಸಿಗರಾಗಿದ್ದಾರೆ. ಕಾಂಗ್ರೆಸಿನ ಜಿಲ್ಲಾ ಸಮಿತಿಯಲ್ಲಿರುವ ಕೆಲವು ಪ್ರಮುಖರು ಖಾಸಗಿ ಬಸ್ ಮಾಲಿಕರಾಗಿದ್ದಾರೆ. ಇವರನ್ನು ಕರೆದು ಸಮಾಧಾನ ಪಡಿಸಲು ವಿಫಲರಾಗಿರುವ ಪ್ರಚಾರ ಪ್ರಿಯ ಉಸ್ತುವಾರಿ ಸಚಿವರು ಯೂಥ್ ಕಾಂಗ್ರೇಸನ್ನು ಬೀದಿಗಿಳಿಸಿ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿರುವುದು ಯಾವ ಪುರುಷಾರ್ಥಕ್ಕಾಗಿ ಎಂದು ನಗರ ಯುವ ಮೋರ್ಚಾ ಪ್ರಶ್ನಿಸಿದೆ.
ಅಭಿವೃದ್ಧಿಯ ಪರಿಕಲ್ಪನೆಯನ್ನು ಉಡುಪಿಯ ಜನತೆಯ ಮುಂದೆ ಸಾಕಾರಗೊಳಿಸಿದವರು ಸನ್ಮಾನ್ಯ ಡಾ| ವಿ ಎಸ್ ಆಚಾರ್ಯ ಅವರು. ಅವರ ಅವಧಿಯಲ್ಲಿ ಮೊತ್ತ ಮೊದಲ ಬಾರಿಗೆ ಸರಕಾರಿ ಹವಾನಿಯಂತ್ರಿತ ಬಸ್ಸುಗಳು ಕರಾವಳಿ ಜಿಲ್ಲೆಗಳಲ್ಲಿ ಓಡಾಡಿ ಜನರಿಗೆ ಅಗ್ಗದ ಬೆಲೆಯಲ್ಲಿ ಉತ್ತಮ ಸೇವೆಯನ್ನು ಒದಗಿಸಿದ್ದವು. ಕಾಂಗ್ರೇಸಿಗರಿಂದ ಅಭಿವೃದ್ಧಿ ಪಾಠ ಹೇಳಿಸಿಕೊಳ್ಳಬೇಕಾದ ದುಸ್ಥಿತಿ ಬಿಜೆಪಿಗೆ ಬಂದಿಲ್ಲ. ಬಿಜೆಪಿ ಎಂದಿಗೂ ಅಭಿವೃಧ್ದಿಪರವಾಗಿದೆ.
ಉಸ್ತುವಾರಿ ಸಚಿವರ ಆಪ್ತರೇ ಮರಳುಗಾರಿಕೆಯನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋಗಿ ಇಲ್ಲದ ಆವಾಂತರ ಸೃಷ್ಟಿಸಿದರು. ಈ ಉಸ್ತುವಾರಿ ಸಚಿವರಿಗೆ ಅದನ್ನೂ ಬಗೆಹರಿಸಲು ಸಾಧ್ಯವಾಗಲಿಲ್ಲ. ಇದೇ ಉಸ್ತುವಾರಿ ಸಚಿವರ ಬಲಗೈ ಬಂಟರು ನಗರಸಭೆಯಲ್ಲಿ ಓರ್ವ ನಾಗರೀಕ ಮತ್ತು ಮತ್ತೋರ್ವ ನಗರಸಭಾ ಮಹಿಳಾ ಸದಸ್ಯೆಗೆ ದೈಹಿಕ ಹಲ್ಲೆ ನಡೆಸಿ ಇಡೀ ಉಡುಪಿಯ ಜನತೆ ತಲೆ ತಗ್ಗಿಸುವಂತೆ ಮಾಡಿದರು. ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲೂ ಈ ಸಚಿವರಿಂದ ಸಾಧ್ಯವಾಗಲಿಲ್ಲ. ಈ ಗೂಂಡಗಳನ್ನು ಮುಂದಿಟ್ಟುಕೊಂಡು ಬಿಜೆಪಿ ವಿರುದ್ದ ಪ್ರತಿಭಟನೆ ನಡೆಸಿರುವುದು ಕಾಂಗ್ರೆಸಿನ ನೈತಿಕ ಅಧಃಪತನಕ್ಕೆ ಸಾಕ್ಷಿಯಾಗಿದೆ. ಇದೀಗ ತನ್ನದೇ ಪಕ್ಷದ ಕೆಲವು ಪ್ರಭಾವಿಗಳ ಖಾಸಗಿ ಲಾಭಿಯನ್ನು ಎದುರಿಸಲಾಗದೆ ಬಿಜೆಪಿಯ ಮೇಲೆ ಗೂಬೆ ಕೂರಿಸಿ ಜನರ ಅನುಕಂಪಗಳಿಸುವುದಕ್ಕೆ ತಮ್ಮ ವೈಫಲ್ಯವನ್ನು ಮುಚ್ಚಿ ಹಾಕಲು ಜಿಲ್ಲಾ ಕಾಂಗ್ರೆಸ್ ಮುಂದಾಗಿದೆ.
ಉಸ್ತುವಾರಿ ಸಚಿವರು ತನ್ನ ಸರಕಾರವಿದ್ದೂ ಖಾಸಗಿ ಬಸ್ಸುಗಳಿಂದ ಸಮಸ್ಯೆಗಳಿದ್ದರೆ ಆ ಸಮಸ್ಯಗೆಳನ್ನು ಸರಿಪಡಿಸುವಂತೆ ಯಾಕೆ ತನ್ನ ಸಾರಿಗೆ ಅಧಿಕಾರಿಗಳಿಗೆ ಆಗ್ರಹಿಸುತ್ತಿಲ್ಲ.? ಶಿಸ್ತು ಮೀರಿ ವರ್ತಿಸುವ ಖಾಸಗಿ ಬಸ್ಸುಗಳ ಪರವಾನಗಿಯನ್ನು ರದ್ದು ಪಡಿಸಬಹುದಲ್ಲವೇ? ಇದೆಲ್ಲವನ್ನು ಬಿಟ್ಟು ಬಿಜೆಪಿಯನ್ನು ದೂರುತ್ತಿರುವ ಹಿಂದಿನ ಮರ್ಮವೇನು ಎಂದು ನಗರ ಯುವ ಮೋರ್ಚಾ ಪ್ರಶ್ನಿಸಿದೆ.
ಉಸ್ತುವಾರಿ ಸಚಿವರು ಮೌಲ್ಯಯುತ ರಾಜಕಾರಣವನ್ನು ಮಾಡುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ದುಡಿಯಲಿ ಅದಲ್ಲದೆ ಈ ರೀತಿಯ ಅರ್ಥವಿಲ್ಲದ ದ್ವೇಷಪೂರಿತ ರಾಜಕಾರಣ ಮಾಡುತ್ತಾ ಜನರಿಗೆ ತಪ್ಪು ಸಂದೇಶ ನೀಡಿದರೆ ಮುಂದಿನ ದಿನಗಳಲ್ಲಿ ಜನರೇ ನಿಮಗೆ ಸೂಕ್ತ ಪಾಠ ಕಲಿಸಲಿದ್ದಾರೆ ಎಂದು ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅಕ್ಷಿತ್ ಶೆಟ್ಟಿ ಹೆರ್ಗ, ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.