ನವಜಾತ ಶಿಶು ಸಾವಿನ ಪ್ರಕರಣ: ಜಿಲ್ಲಾಧಿಕಾರಿ ಭರವಸೆ ಬಳಿಕ ಅಹೋರಾತ್ರಿ ಧರಣಿ ತಾತ್ಕಾಲಿಕ ಅಂತ್ಯ
ಕುಂದಾಪುರ: ಇಲ್ಲಿನ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ನವಜಾತ ಶಿಶು ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿದ್ದ ಅಹೋರಾತ್ರಿ ಪ್ರತಿಭಟನೆ ಮಂಗಳವಾರ ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ.
ಮಂಗಳವಾರ ಬೆಳಿಗ್ಗೆ ಆಸ್ಪತ್ರೆ ಎದುರು ಜಮಾಯಿಸತೊಡಗಿದ ಪ್ರತಿಭಟನಾಕಾರರು ವೈದ್ಯರ ಅಮಾನತಿಗೆ ಆಗ್ರಹಿಸಿದರು. ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ, ಪ್ರತಿಭಟನಾ ನಿರತರ ಮನವೊಲಿಸುವ ಪ್ರಯತ್ನ ನಡೆಸಿದರು. ಈ ವೇಳೆ ಪ್ರತಿಭಟನಾನಿರತರು ಹಾಗೂ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ಶೀಘ್ರವೇ ತಂಡ ರಚಿಸಿ ವಾರದೊಳಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನಾನಿರತರು ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆದರು.
ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಯಶವಂತ ಗಂಗೊಳ್ಳಿ, ಕರುಳಬಳ್ಳಿ ಸುತ್ತಿಕೊಂಡು ಮಗು ಸಾವನ್ನಪ್ಪಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ನಾವು ಪ್ರಕರಣ ದಾಖಲಿಸುತ್ತೇವೆ ಎಂದರೆ ಮುಂದೆ ನಿಮಗೆ ತೊಂದರೆಯಾಗುತ್ತದೆ ಎಂದು ನಮ್ಮನ್ನು ಬೆದರಿಸುವ ಪ್ರಯತ್ನ ನಡೆಸಿದ್ದಾರೆ. ಹಿಂದೆಯೂ ಅನೇಕ ಪ್ರಕರಣಗಳಾದಾಗ ಅವರನ್ನು ಬೆದರಿಸಿ ಪ್ರಕರಣ ದಾಖಲಾಗದಂತೆ ನೋಡಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಹಿಂದೆಯೂ ಈ ರೀತಿಯ ಪ್ರಕರಗಳು ನಡೆದಾಗ ನ್ಯಾಯ ಸಿಕ್ಕಿಲ್ಲ. ಜಿಲ್ಲಾಧಿಕಾರಿ, ಎಸ್ಪಿ, ಡಿಎಚ್ಓ ಭರವಸೆ ಕೊಟ್ಟಿದ್ದಾರೆ. ಹೀಗಾಗಿ ಒಂದು ವಾರದ ಮಟ್ಟಿಗೆ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆದಿದ್ದೇವೆ. ಮಾತು ಉಳಿಸಿಕೊಂಡಿಲ್ಲ ಎಂದರೆ ಮತ್ತೆ ಹೋರಾಟ ಕೈಗೆತ್ತಿಕೊಳ್ಳುತ್ತೇವೆ. ಒಂದು ವರ್ಷದಲ್ಲಿ ಹೀಗೆಯೇ ಬೆಳಕಿಗೆ ಬಾರದ ಸಾಕಷ್ಟು ಪ್ರಕರಣಗಳಿವೆ. ಅವೆಲ್ಲವನ್ನೂ ತನಿಖೆ ನಡೆಸಿ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಮಗುವಿನ ತಂದೆ ಶ್ರೀನಿವಾಸ್ ಮಾತನಾಡಿ, ನವೆಂಬರ್ 16 ರಂದು ಪರೀಕ್ಷೆಗಾಗಿ ಆಸ್ಪತ್ರೆಗೆ ಬಂದಿದ್ದೇವೆ. ಪರೀಕ್ಷಿಸಿದ ವೈದ್ಯರು ಸಮಸ್ಯೆ ಇಲ್ಲ ಎಂದು ವಾಪಾಸ್ ಕಳುಹಿಸಿದ್ದರು. ಮಾರನೆ ದಿನ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ಬಂದು ದಾಖಲಾದೆವು. ಸಮಸ್ಯೆಯ ಬಗ್ಗೆ ಏನೂ ಹೇಳಿಲ್ಲ. ಸ್ಕ್ಯಾನಿಂಗ್ ಮಾಡಿ ಎಂದರೂ ಈಗ ಬೇಡ ಎಂದರು. ಎರಡು ದಿನ ಅದೇ ನೋವಿನಲ್ಲಿ ಒಡ್ಡಾಡಿದರೂ ಏನೂ ಚಿಕಿತ್ಸೆ ನೀಡಿಲ್ಲ. ನವೆಂಬರ್ 20 ರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಹೆರಿಗೆ ಮಾಡಿ ಕರುಳ ಬಳ್ಳಿ ಸುತ್ತಿಕೊಂಡಿದ್ದರಿಂದ ಮಗು ಸತ್ತಿದೆ ಎಂದು ಹೇಳಿದ್ದಾರೆ. ಮದುವೆಯಾಗಿ ನಾಲ್ಕು ವರ್ಷದ ಬಳಿಕ ನಮಗೆ ಮೊದಲ ಮಗು ಹುಟ್ಟುವ ಸಂತಸದಲ್ಲಿದ್ದೆವು. ನೂರಾರು ಆಸೆಗಳನ್ನು ಇಟ್ಟುಕೊಂಡಿದ್ದೇವೆ. ಆದರೆ ವೈದ್ಯರ ನಿರ್ಲಕ್ಷದಿಂದ ಎಲ್ಲಾ ಆಸೆಗಳು ನುಚ್ಚುನೂರಾಗಿದೆ ಎಂದು ನೋವು ಹೇಳಿಕೊಂಡರು.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಮಗು ಸಾವಿನ ಪ್ರಕರಣದಲ್ಲಿ ವೈದ್ಯರ ನಿರ್ಲಕ್ಷ ಇದ್ದರೆ ತಂಡ ರಚಿಸಿಕೊಂಡು ತನಿಖೆ ನಡೆಸಿ ಕ್ರಮಕೈಗೊಳ್ಳುತ್ತೇವೆ. ಸ್ತ್ರೀತಜÐರ ಸಂಖ್ಯೆ ವಿರಳ ಇದೆ. ಯಾವುದೇ ಒಬ್ಬ ವೈದ್ಯರ ಮೇಲೆ ಕ್ರಮಕೈಗೊಳ್ಳಬೇಕಾದರೆ ನಿಯಮಾನುಸಾರ ಕ್ರಮಕೈಗೊಳ್ಳಬೇಕು. ತನಿಖೆ ನಡೆಸಿ ಸರ್ಕಾರದ ಗಮನಕ್ಕೆ ತರುತ್ತೇವೆ. ತಾತ್ಕಾಲಿಕವಾಗಿ ವೈದ್ಯರನ್ನು ಬೇರೆಡೆಗೆ ವರ್ಗಾಯಿಸುತ್ತೇವೆ. ಇಲ್ಲಿ ಬೇರೆ ವೈದ್ಯ ನೇಮಕ ಮಾಡುತ್ತೇವೆ. ಬೇರೆ ಜಿಲ್ಲೆಗೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿ ತಾಯಿ, ಶಿಶುವಿನ ಮರಣ ಸಂಖ್ಯೆ ಕಡಿಮೆ ಇದೆ. ಆಗಬಾರದ ಘಟನೆ ಆಗಿ ಹೋಗಿದೆ. ನಿಯಮಾನುಸಾರ ಕ್ರಮ ಜರಗಿಸುತ್ತೇವೆ ಎಂದರು.
ಜಿಲ್ಲಾ ವರಿಷ್ಠಾಧಿಕಾರಿ ಡಾ. ಅರುಣ್ ಪ್ರತಿಕ್ರಿಯಿಸಿ, ಸಂತ್ರಸ್ತರು ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸುಪ್ರೀಂ ಕೋರ್ಟ್ ನಿಯಮದನ್ವರ ದೂರನ್ನು ವೈದ್ಯಕೀಯ ಮಂಡಳಿಗೆ ವರ್ಗಾಯಿಸಿ ಅಲ್ಲಿಂದ ವರದಿ ಬಂದ ಬಳಿಕ ಮುಂದಿನ ಕಾನೂನು ಕ್ರಮ ಜರುಗಿಸುತ್ತೇವೆ ಎಂದರು.
ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ, ಆರೋಗ್ಯ ಇಲಾಖೆ ವಿಭಾಗೀಯ ಜಂಟಿ ನಿರ್ದೇಶಕಿ ಡಾ. ರಾಜೇಶ್ವರಿ, ಜಿ.ಪಂ ಸಿಇಓ ಪ್ರಸನ್ನ ಕುಮಾರ್, ತಹಸೀಲ್ದಾರ್ ಶೋಭಾ ಲಕ್ಷ್ಮೀ ಎಚ್.ಎಸ್, ಟಿಎಚ್ಒ ಪ್ರೇಮಾನಂದ, ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ರಾಬರ್ಟ್ ರೊಬೆಲ್ಲೋ, ಡಿವೈಎಸ್ಪಿ ಬೆಳ್ಳಿಯಪ್ಪ, ಕುಂದಾಪುರ ನಗರ ಠಾಣಾ ನಿರೀಕ್ಷಕ ನಂದ ಕುಮಾರ್ ಇದ್ದರು.
ಈ ಸಂದರ್ಭದಲ್ಲಿ , ಗಂಗೊಳ್ಳಿ ಗ್ರಾ.ಪಂ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಉಪಾಧ್ಯಕ್ಷೆ ಪ್ರೇಮಾ ಪೂಜಾರಿ, ಸದಸ್ಯರಾದ ಬಸವ ಖಾರ್ವಿ, ನಿರ್ಮಲಾ ಪೂಜಾರಿ, ತಾ.ಪಂ ಮಾಜಿ ಸದಸ್ಯ ಸುರೇಂದ್ರ ಖಾರ್ವಿ, ಗಂಗೊಳ್ಳಿ ಭಾಗದ ಪ್ರಮುಖರಾದ ಯಶವಂತ್ ಗಂಗೊಳ್ಳಿ, ವಾಸುದೇವ ಗಂಗೊಳ್ಳಿ, ನವೀನ್ ಗಂಗೊಳ್ಳಿ, ಸದಾಶಿವ ಕಂಚುಗೋಡು, ಗೋಪಾಲ ಖಾರ್ವಿ ದಾವನಮನೆ, ದಿನೇಶ್ ಖಾರ್ವಿ, ರಾಘವೇಂದ್ರ ಗಾಣಿಗ, ಚಂದ್ರ ಖಾರ್ವಿ ಲೈಟ್ ಹೌಸ್, ಸೂರಜ್ ಖಾರ್ವಿ, ರಾಜು ಖಾರ್ವಿ ಮ್ಯಾಂಗನೀಸ್ ರಸ್ತೆ, ಕುಂದಾಪುರ ಪುರಸಭಾ ಸದಸ್ಯರಾದ ಸಂದೀಪ ಖಾರ್ವಿ, ಚಂದ್ರಶೇಖರ ಖಾರ್ವಿ, ಸಂತೋಷ್ ಶೆಟ್ಟಿ, ರಾಘವೇಂದ್ರ ಖಾರ್ವಿ, ಪ್ರಭಾಕರ ವಿ, ಪ್ರಮುಖರಾದ ಶಂಕರ್ ಅಂಕದಕಟ್ಟೆ, ರಾಜೇಶ್ ಕಾವೇರಿ, ಗಿರೀಶ್ ಕುಂದಾಪುರ, ಜಯಾನಂದ ಖಾರ್ವಿ, ಕೇಶವ ಭಟ್, ಪ್ರಕಾಶ್ ಖಾರ್ವಿ, ರತ್ನಾಕರ ಶೇರುಗಾರ್ ಉಪಸ್ಥಿತರಿದ್ದರು.