Home Mangalorean News Kannada News ನವೆಂಬರ್ 14; ಮಹಾನಗರಪಾಲಿಕೆ ಚುನಾವಣಾ ಮತ ಎಣಿಕೆ : ಸಿದ್ಧತೆ ಪೂರ್ಣ – ಸುತ್ತಮುತ್ತ ನಿಷೇಧಾಜ್ಞೆ  

ನವೆಂಬರ್ 14; ಮಹಾನಗರಪಾಲಿಕೆ ಚುನಾವಣಾ ಮತ ಎಣಿಕೆ : ಸಿದ್ಧತೆ ಪೂರ್ಣ – ಸುತ್ತಮುತ್ತ ನಿಷೇಧಾಜ್ಞೆ  

Spread the love

ನವೆಂಬರ್ 14; ಮಹಾನಗರಪಾಲಿಕೆ ಚುನಾವಣಾ ಮತ ಎಣಿಕೆ : ಸಿದ್ಧತೆ ಪೂರ್ಣ – ಸುತ್ತಮುತ್ತ ನಿಷೇಧಾಜ್ಞೆ  

ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ಚುನಾವಣಾ ಮತ ಎಣಿಕೆ ಗುರುವಾರ ನಡೆಯಲಿದ್ದು, ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ.

ನಗರದ ರೊಸಾರಿಯೋ ಶಾಲೆಯಲ್ಲಿ ಮತ ಎಣಿಕೆ ನಡೆಯಲಿದ್ದು, ಬುಧವಾರ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರು ಭೇಟಿ ನೀಡಿ ಅಂತಿಮ ಹಂತದ ಸಿದ್ಧತೆಗಳನ್ನು ಪರಿಶೀಲಿಸಿದರು.

ತಲಾ 5 ವಾರ್ಡ್‍ಗೆ ಒಬ್ಬರಂತೆ ಒಟ್ಟು 12 ಚುನಾವಣಾಧಿಕಾರಿಗಳು 12 ಕೊಠಡಿಗಳಲ್ಲಿ ಮತ ಎಣಿಕೆ ನಡೆಸಲಿದ್ದಾರೆ. ಆಯಾ ಚುನಾವಣಾಧಿಕಾರಿಗಳು ಪ್ರತಿಯೊಂದು ವಾರ್ಡ್ ಮತ ಎಣಿಕೆ ಪೂರ್ಣಗೊಂಡ ನಂತರ ಇನ್ನೊಂದು ವಾರ್ಡ್‍ನ ಮತ ಎಣಿಕೆ ಕೈಗೊಳ್ಳಲಿದ್ದಾರೆ. ಒಂದು ಸುತ್ತಿನಲ್ಲಿ 4 ಮತಗಟ್ಟೆಗಳ ಮತ ಎಣಿಕೆ ನಡೆಯಲಿದೆ.

ಮತ ಎಣಿಕೆ ಕೇಂದ್ರ ಸುತ್ತಮುತ್ತ ತೀವ್ರ ಭದ್ರತೆ ಕೈಗೊಳ್ಳಲಾಗಿದೆ. ಬುಧವಾರ ಡಿಸಿಪಿ ಅರುಣಾಂಶು ಗಿರಿ ಅವರ ನೇತೃತ್ವದಲ್ಲಿ ಭದ್ರತಾ ರಿಹರ್ಸಲ್ ನಡೆಯಿತು.

ನಿಷೇಧಾಜ್ಞೆ : ಮತ ಎಣಿಕೆ ಸಂಬಂಧ ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ರೀತಿಯ ಧಕ್ಕೆ ಬರುವಂತಹ ಘಟನೆಗಳು ನಡೆಯದಂತೆ ತಡೆಗಟ್ಟುವ ಉದ್ದೇಶದಿಂದ ನವೆಂಬರ್ 14 ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪಾಂಡೇಶ್ವರ ರೋಸಾರಿಯೋ ಶಾಲೆಯ ಮತ ಎಣಿಕೆ ಕೇಂದ್ರದ ಸುತ್ತ ಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆಯ ಕಲಂ : 144 ರ ಅನ್ವಯ ನಿರ್ಬಂಧಕ ಆಜ್ಞೆಯನ್ನು ವಿಧಿಸಿ ಮಂಗಳೂರು ಪೊಲೀಸು ಆಯುಕ್ತರು ಹಾಗೂ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಡಾ. ಹರ್ಷಾ ಪಿ.ಎಸ್. ಆದೇಶಿಸಿರುತ್ತಾರೆ.

ನಿಷೇಧಾಜ್ಞೆ ಜಾರಿಯಲ್ಲಿರುವ ಸಮಯದಲ್ಲಿ ಶಸ್ತ್ರಗಳು, ದೊಣ್ಣೆಗಳು, ಕತ್ತಿಗಳು, ಈಟಿಗಳು, ಗದೆಗಳು, ಬಂದೂಕುಗಳು, ಚಾಕುಗಳು, ಕೋಲುಗಳು, ಲಾಠಿಗಳನ್ನು ಅಥವಾ ದೈಹಿಕ ಹಿಂಸೆಯನ್ನುಂಟುಮಾಡುವ ಇತರ ಯಾವುದೇ ವಸ್ತುಳನ್ನು ಸಾಗಿಸಬಾರದು. ಪಟಾಕಿ ಯಾವುದೇ ಕ್ಷಾರಕ ಪದಾರ್ಥ ಅಥವಾ ಸ್ಫೋಟಕಗಳನ್ನು ಸಿಡಿಸಬಾರದು. ವಿಜಯೋತ್ಸವ, ಸಾರ್ವಜನಿಕ ಮೆರವಣಿಗೆ, ಸಾರ್ವಜನಿಕ ರಾಜಕೀಯ ಸಭೆ ಸಮಾರಂಭಗಳನ್ನು ನಡೆಸಬಾರದು. ಕಲ್ಲುಗಳನ್ನು ಇತರ ಕ್ಷಿಪಣಿಗಳನ್ನು ಎಸೆಯುವ ಅಥವ ವೇಗದಿಂದ ಒಯ್ಯುವ ಸಾಧನ/ ಉಪಕರಣಗಳನ್ನು ಸರಬರಾಜು ಮಾಡುವುದು, ತಯಾರಿಸುವುದು ಶೇಖರಣೆ ಮಾಡುವುದನ್ನು ನಿಷೇಧಿಸಿದೆ. ವ್ಯಕ್ತಿಗಳ ಅಥವಾ ಅವರ ಶವಗಳ/ ಆಕೃತಿಗಳ / ಪ್ರತಿಕೃತಿಗಳ ಪ್ರದರ್ಶನ ಮಾಡಬಾರದು.

ಬಹಿರಂಗ ಘೋಷಣೆ ಮಾಡುವುದು, ಹಾಡುಗಳನ್ನು ಹಾಡುವುದು, ಸಂಗೀತ ನುಡಿಸುವುದು, ಆವೇಶಕಾರಿ ಭಾಷಣ ಮಾಡುವುದು, ಚಿತ್ರಗಳನ್ನು, ಸಂಕೇತಗಳನ್ನು, ಭಿತ್ತಿ ಪತ್ರಗಳನ್ನು ಅಥವ ಇತರೆ ಯಾವುದೇ ವಸ್ತು ಅಥವಾ ಪದಾರ್ಥಗಳನ್ನು ತಯಾರಿಸುವುದು, ಪ್ರದರ್ಶಿಸುವುದು ಅಥವಾ ಪ್ರಸಾರ ಮಾಡುವುದನ್ನು ನಿಷೇಧಿಸಿದೆ.
ಈ ನಿಷೇಧಾಜ್ಞೆ ಜಾರಿಯಲ್ಲಿರುವ ಪ್ರದೇಶದಲ್ಲಿ ಸರಕಾರದಿಂದ ಯಾ ಸರಕಾರದ ಆದೇಶದಂತೆ ನಡೆಸಲ್ಪಡುವ ಯಾವುದೇ ಕಾರ್ಯಕ್ರಮ, ಸಭೆ ಸಮಾರಂಭಗಳಿಗೆ ಅನ್ವಯವಾಗುವದಿಲ್ಲ. ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರ ಪ್ರಕಟಣೆ ತಿಳಿಸಿದೆ


Spread the love

Exit mobile version