ನವೆಂಬರ್ 24 ರಿಂದ ಮೂರು ದಿನ ಉಡುಪಿಯಲ್ಲಿ ಧರ್ಮ ಸಂಸತ್ತು; 2500 ಕ್ಕೂ ಹೆಚ್ಚು ಸಂತರು ಭಾಗಿ
ಉಡುಪಿ: ನವೆಂಬರ್ 24 – 26 ರ ವರೆಗೆ ಧರ್ಮ ಸಂಸತ್ತಿನ ಅಧಿವೇಶನ ಉಡುಪಿಯಲ್ಲಿ ನಡೆಯಲಿದ್ದು ಸುಮಾರು 2500 ಕ್ಕೂ ಹೆಚ್ಚು ಸ್ವಾಮೀಜಿಗಳು, ಸಂತರು ಭಾಗವಹಿಸಲಿದ್ದಾರೆ ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.
ಅವರು ಶನಿವಾರ ಧರ್ಮ ಸಂಸತ್ತಿನ ಅಧಿವೇಶನದ ಸ್ವಾಗತ ಸಮಿತಿಯ ಅಧ್ಯಕ್ಷತೆ ಮತ್ತು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಲಿರುವವರ ಪೂರ್ವಭಾವಿ ಸಭೆಯ ಬಳಿಕ ಮಾಧ್ಯಮ ಘೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು.
ಹಿಂದೂ ಸಮಾಜದಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ವಿಶಿಷ್ಟವಾದ ಸಮ್ಮೇಳನ ಇದಾಗಿದ್ದು, ಹಿಂದೂ ಧರ್ಮದ ಅಭಿವೃದ್ಧಿಗಾಗಿ ಹಾಗೂ ಏಕತೆಗಾಗಿ ಹಲವಾರು ನಿರ್ಣಯಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ತಮ್ಮ ಮೂರನೇ ಪರ್ಯಾಯದ ಅವಧಿಯಲ್ಲಿ ಕೂಡ ಧರ್ಮ ಸಂಸತ್ತು ಉಡುಪಿಯಲ್ಲಿ ನಡೆದಿದ್ದು ಅಯೋಧ್ಯೆಯ ರಾಮಮಂದಿರದ ಬೀಗ ತೆರೆಯುವ ನಿರ್ಣಯ ಕೈಗೊಳ್ಳಲಾಗಿತ್ತು. ನಿರ್ಣಯ ಕೈಗೊಂಡ ಕೆಲವೇ ದಿನಗಳಲ್ಲಿ ಅಂದಿನ ಪ್ರಧಾನಿಗಳು ಆ ಬೀಗ ತೆರೆದುಕೊಡುವ ಮೂಲಕ ನಮ್ಮ ನಿರ್ಣಯಕ್ಕೆ ಜಯ ಲಭಿಸಿತ್ತು. ಅಂತೇಯೇ ಈ ಸಮ್ಮೆಳನದಲ್ಲಿ ರಾಮ ಮಂದಿರ ನಿರ್ಮಾಣದ ಕುರಿತು ನಿರ್ಣಯ ಆಗಬೇಕು ಎಂಬ ಅಪೇಕ್ಷೆಯನ್ನು ಹೊಂದಿದ್ದು, ಸಮ್ಮೇಳನದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕಾರಿ ಸಮಿತಿ ತನ್ನ ತೀರ್ಮಾನವನ್ನು ಕೈಗೊಳ್ಳಲಿದೆ. ಡಿಸೆಂಬರ್ ತಿಂಗಳಿನಲ್ಲಿ ಅಯೋಧ್ಯೆ ವಿಷಯ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆಗೆ ಬರಲಿದ್ದು ನಮಗೆ ಪೂರಕವಾದ ನಿರ್ಣಯ ಬರುವ ನಿರೀಕ್ಷೆ ಇದೆ ಎಂದರು.
ಪ್ರೋ. ಎಂ ಬಿ ಪುರಾಣಿಕ್ ಮಾತನಾಡಿ, ಕಾರ್ಯಕ್ರಮದಲ್ಲಿ ಆರ್ ಎಸ್ ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಮೊದಲ ದಿನದ ಇಡೀ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಎರಡನೇ ಹಾಗೂ ಮೂರನೇ ದಿನದ ಕಾರ್ಯಕ್ರಮದ ನೇತ್ರತ್ವವನ್ನು ಪೇಜಾವರ ಸ್ವಾಮೀಜಿ ಹಾಗೂ ವಿರೇಂಧ್ರ ಹೆಗ್ಡೆಯವರು ನೇತೃತ್ವ ವಹಿಸಲಿದ್ದಾರೆ. ಕೊನೆಯ ದಿನ ನವೆಂಬರ್ 26 ರಂದು ಭವ್ಯ ಮೆರವಣಿಗೆ ಜರುಗಲಿದ್ದು, ಅದರ ಬಳಿಕ ಸಾರ್ವಜನಿಕ ಸಭೆ ಜರುಗಲಿದೆ. ಸಾರ್ವಜನಿಕ ಸಭೆಗೆ ಒಂದು ಲಕ್ಷ ಜನರು ಭಾಗವಹಿಸಿಲಿದ್ದಾರೆ ಎಂದರು.
ಸುದ್ದಿಗೋಷ್ಟಿಯ ಮೊದಲು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ವಿರೇಂಧ್ರ ಹೆಗ್ಗಡೆಯವರು ಹಿಂದೂ ಸಮಾಜದಲ್ಲಿ ಅಶ್ಪಶ್ರ್ಯತೆಯನ್ನು ತೊಡೆದು ಹಾಕುವ ಉದ್ದೇಶದಿಂದ ಹೆಚ್ಚು ಕಾರ್ಯಪ್ರವೃತ್ತರಾಗಬೇಕಾಗಿದೆ. ಹಿಂದೂ ಸಮಾಜದ ಐಕ್ಯತೆ ಮತ್ತು ಒಗ್ಗಟ್ಟನ್ನು ಬಲಗೊಳಿಸಲು ಧರ್ಮ ಸಂಸತ್ತು ಅಧೀವೇಶನ ಸಹಕಾರಿಯಾಗಲಿದೆ ಇದರೊಂದಿಗೆ ನಮ್ಮಲ್ಲಿನ ವ್ಯತ್ಯಾಸಗಳನ್ನು ಮರೆತು ಹಿಂದೂಗಳು ಒಂದು ಎಂಬ ಭಾವನೆ ಪ್ರತಿಯೊಬ್ಬರಲ್ಲಿ ಮೂಡಬೇಕಾಗಿದೆ ಎಂದರು.
ಸಮಿತಿಯ ಕೋಶಾಧಿಕಾರಿ ವಿಲಾಸ್ ನಾಯಕ್ ಆಯವ್ಯದ ಕುರಿತು ಆಯವ್ಯಯ ವರದಿ ನೀಡಿದರು ಇಡೀ ಮೂರು ದಿನದ ಕಾರ್ಯಕ್ರಮಕ್ಕೆ ರೂ ಐದು ಕೋಟಿ ಅಂದಾಜು ವೆಚ್ಚ ತಗಲುವ ನಿರೀಕ್ಷೆ ಇದೆ ಎಂದರು.
ಸ್ವಾಗತ ಸಮಿತಿಯ ಅಧ್ಯಕ್ಷತೆಯನ್ನು ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದರು ವಹಿಸಿಕೊಳ್ಳಿದ್ದಾರೆ. ಕಾರ್ಯಾಧ್ಯಕ್ಷರಾಗಿ ಪೂಜ್ಯ ಧರ್ಮಾಧಿಕಾರಿಗಳು ಡಾ. ವೀರೇಂದ್ರ ಹೆಗ್ಡೆ ಅವರು ಮಾರ್ಗದರ್ಶನ ಮಾಡಲಿದ್ದಾರೆ.
ಧರ್ಮ ಸಂಸತ್ತಿನ ಸ್ಮರಣ ಸಂಚಿಕೆಯ ಪ್ರಧಾನ ಸಂಪಾದಕರಾಗಿ ಡಾ.ಸಂಧ್ಯಾ ಪೈ ಅವರುಕಾರ್ಯನಿರ್ವಹಿಸಲಿದ್ದಾರೆ.
ಸ್ವಾಗತ ಸಮಿತಿಯ ಪ್ರಮುಖ ಪದಾಧಿಕಾರಿಗಳ ಘೋಷಣೆಯನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದಚಂಪತ್ ರಾಯ್ ಮತ್ತು ಎಂ.ಬಿ.ಪುರಾಣಿಕ್ ಅವರು ನಡೆಸಿಕೊಟ್ಟರು.
ವಿಶ್ವೇಶ ತೀರ್ಥ ಶ್ರೀ ಪಾದರು ಧರ್ಮ ಸಂಸತ್ತಿನ ಲಾಂಛನವನ್ನು ಅನಾವರಣಗೊಳಿಸಿದರು
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮೋಹನ್ ಆಳ್ವ, ಗೋಪಾಲ್ ಹೊಸೂರು, ಏರ್ಯ ಲಕ್ಷ್ಮೀ ನಾರಾಯಣ ಆಳ್ವಾ, ವಿಜಯ ಸಂಕೇಶ್ವರ, ಡಾ. ರಾಮನ ಗೌಡರ್, ಡಾ. ಸಂಧ್ಯಾ ಪೈ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.ಅಧಿವೇಶನದ ಸಂದರ್ಭದಲ್ಲೆ ಹಿಂದೂ ವಿವಿಧ ಸಮಾಜದ ಮುಖಂಡರ ಒಂದು ದಿನದ ಸಮಾವೇಶವೂನಡೆಯಲಿದೆ.