ನಾನು ಸಾಂದರ್ಭಿಕ ಶಿಶುವಲ್ಲ, ಸುಸಂಸ್ಕೃತ ಕುಟುಂಬದಲ್ಲಿ ಜನಿಸಿದವನು- ಪ್ರಮೋದ್ ಮಧ್ವರಾಜ್
ನರಸಿಂಹರಾಜಪುರ: ‘ನಾನು ಮಲ್ಪೆ ಮಧ್ವರಾಜ್ ಹಾಗೂ ಮನೋರಮಾ ಮಧ್ವರಾಜ್ ಅವರ ಪುತ್ರನಾಗಿದ್ದು ಸುಸಂಸ್ಕೃತ ಕುಟುಂಬದಲ್ಲಿ ಜನಿಸಿದವನು. ನಾನು ಸಾಂದರ್ಭಿಕ ಶಿಶುವಲ್ಲ’ ಎಂದು ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರು ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಈ ರೀತಿ ಪ್ರತಿಕ್ರಿಯಿಸಿದರು.
ಪಟ್ಟಣದಲ್ಲಿ ಮೈತ್ರಿ ಪಕ್ಷದ ಚುನಾವಣಾ ಕಚೇರಿಯನ್ನು ಗುರುವಾರ ಉದ್ಘಾಟಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರು ನಾನು ಸಚಿವನಾಗಿದ್ದಾಗ ಉಡುಪಿ ಬಿಟ್ಟು ಬೇರೆಲ್ಲೂ ಹೋಗಿಲ್ಲ ಎಂದು ಹೇಳಿಕೆ ಕೊಡುತ್ತಾರೆ. ಮಂತ್ರಿಯಾದವರಿಗೆ ಎಲ್ಲಾ ಜಿಲ್ಲೆಗೂ ಹೋಗಲು ಸಾಧ್ಯವಿಲ್ಲ ಎಂಬ ಕನಿಷ್ಠ ಜ್ಞಾನವೂ ಸಂಸದರಿಗಿಲ್ಲವಾಗಿದೆ. ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಬೆಂಗಳೂರಿನ ಸ್ವಂತ ವಿಳಾಸವನ್ನು ನೀಡುತ್ತಾರೆ. ಈ ಲೋಕಸಭಾ ಕ್ಷೇತ್ರದ ಸಂಸದರಾಗಿ ಜನರ ಸಮಸ್ಯೆಗಳನ್ನು ಆಲಿಸಲು ಉಡುಪಿ ಅಥವಾ ಚಿಕ್ಕಮಗಳೂರಿನಲ್ಲಿ ಮನೆಯನ್ನು ಸಂಸದರು ಮಾಡಿಲ್ಲ’ ಎಂದು ದೂರಿದರು.
ಸಂಸದರು ತಮ್ಮ ವೈಫಲ್ಯವನ್ನು ಮುಚ್ಚಿಹಾಕಿಕೊಳ್ಳಲು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಗೆದ್ದರೆ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುವುದರ ಮೂಲಕ ಜನರ ಋಣ ತೀರಿಸುತ್ತೇನೆ’ ಎಂದರು.
ಪ್ರಮೋದ್ ಮದ್ವರಾಜ್ ಅವರು ಜರ್ಸಿ ಹಸು ಸಾಕುವುದರ ಬದಲು ಮಲೆನಾಡು ಗಿಡ್ಡ ತಳಿ ಸಾಕಣೆ ಮಾಡಲಿ ಎಂದು ಬಿಜೆಪಿ ಮುಖಂಡರ ಹೇಳಿಕೆಗೆ ಉತ್ತರಿಸಿದ ಅವರು, ‘ಬಿಜೆಪಿಯವರು ಸಮಾಜವನ್ನು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂದು ವಿಭಜಿಸುವ ಕೆಲಸ ಮಾಡಿದ್ದಾರೆ. ಈಗ ಗೋವುಗಳ ಮಧ್ಯೆಯೂ ಒಡೆದು ಆಳುವ ನೀತಿಯನ್ನು ಅನುಸರಿಸಿ ಹೋರಾಟ ಮಾಡುವ ಸಂಚು ರೂಪಿಸಿದ್ದಾರೆ’ ಎಂದು ಆರೋಪಿಸಿದರು. ‘ನನ್ನ ಗೋ ಶಾಲೆಯ ಬಗ್ಗೆ ಟೀಕಿಸುವವರು ಒಮ್ಮೆ ಬಂದು ನೋಡಲಿ’ ಎಂದು ಸಲಹೆ ನೀಡಿದರು.
ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಟಿ.ಡಿ.ರಾಜೇಗೌಡ ಮಾತನಾಡಿ, ‘ಬಿಜೆಪಿಯವರು 15 ವರ್ಷಗಳ ಕಾಲ ಕ್ಷೇತ್ರದಲ್ಲಿ ಆಡಳಿತ ಮಾಡಿದಾಗ ಯಾವುದೇ ಕಾಮಗಾರಿಗಳಿಗೆ ಅಡ್ಡಿಪಡಿಸುವ ಕೆಲಸ ಕಾಂಗ್ರೆಸ್, ಜೆಡಿಎಸ್ನವರು ಮಾಡಿಲ್ಲ. ಆದರೆ, ಪ್ರಸ್ತುತ ಕ್ಷೇತ್ರದಲ್ಲಾಗುತ್ತಿರುವ ಅಭಿವೃದ್ಧಿ ಕೆಲಸಗಳನ್ನು ಸಹಿಸಿಕೊಳ್ಳಲಾಗದೆ ಗುತ್ತಿಗೆದಾರರಿಗೆ ಬಿಜೆಪಿಯವರು ಬೆದರಿಸುವ ಕೆಲಸ ಮಾಡುತ್ತ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ’ ಎಂದು ದೂರಿದರು.
ಕಾಂಗ್ರೆಸ್ ಮುಖಂಡರಾದ ಮಂಜುನಾಥ್ ಭಂಡಾರಿ, ಡಾ.ಅಂಶುಮಂತ್, ಪಿ.ಆರ್.ಸದಾಶಿವ, ಜೆಡಿಎಸ್ ಮುಖಂಡರಾದ ಎಚ್.ಟಿ.ರಾಜೇಂದ್ರ, ಚಂದ್ರಶೇಖರ್ ಇದ್ದರು.