ನಿರ್ಗತಿಕರಿಗೆ ಕಂಬಳಿ ವಿತರಿಸಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ವಿಶ್ವಾಸ್ ಅಮೀನ್
ಉಡುಪಿ: ಸಾರ್ವಜನಿಕ ಸ್ಥಳಗಳಲ್ಲಿ ಮಲಗುತ್ತಿದ್ದ ನಿರ್ಗತಿಕರಿಗೆ ಚಳಿಯಿಂದ ರಕ್ಷಣೆ ಪಡೆಯಲು ಕಂಬಳಿ ವಿತರಣೆ ಮಾಡುವುದರ ಮೂಲಕ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್ ಅವರು 74 ನೇ ಸ್ವಾತಂತ್ರ್ಯ ದಿನವನ್ನು ವಿಶಿಷ್ಟವಾಗಿ ಆಚರಿಸಿದರು.
ಉಡುಪಿಯಲ್ಲಿ ಕಳೆದ ಕೆಲವಾರು ದಿನಗಳಿಂದ ಎಡೆಬಿಡದೇ ನಿರಂತರವಾಗಿ ಸುರಿಯುತ್ತಿರುವ ಮಳೆಯು ನಿರ್ಗತಿಕರ ಬದುಕನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ. ತಮ್ಮವರು ಎಂದು ಹೇಳಿಕೊಳ್ಳಲು ಯಾರೂ ಇಲ್ಲದೆ, ಉಳಿದುಕೊಳ್ಳಲು ಸ್ವಂತಕ್ಕೊಂದು ಮನೆಯಿಲ್ಲದೇ ದಿನವಿಡಿ ಬಿಕ್ಷೆ ಬೇಡುತ್ತಾ ನಗರವಿಡೀ ಅಲೆದಾಡಿ ಸಂಜೆಯಾಗುತ್ತಲೆ ಉಡುಪಿ ನಗರದ ಅಂಗಡಿ ಮುಂಗಟ್ಟುಗಳ, ಬಸ್ಟ್ಯಾಂಡ್ ಬದಿಯನ್ನೇ ಉಳಿದುಕೊಳ್ಳುವ ತಾಣವಾಗಿ ಆಶ್ರಯಿಸಿರುವ ಅನೇಕ ಅನಾಥರು ಈ ಸುರಿಯುವ ಮಳೆಯಿಂದ ಚಳಿಗಾಳಿಯಿಂದ ರಕ್ಷಣೆ ಪಡೆದುಕೊಳ್ಳಲು ಹೆಣಗಾಡುತ್ತಿದ್ದು ಅಂತಹವರ ದಯನೀಯ ಪರಿಸ್ಥಿತಿಯನ್ನು ಕಂಡು ಮನಕರಗಿದ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್.ವಿ.ಅಮೀನ್ ಸ್ವಾತಂತ್ರ್ಯ ದಿನದಂದು ಉಡುಪಿ ನಗರದಲ್ಲಿ ಆಶ್ರಯ ಪಡೆದಿರುವ ಈ ಎಲ್ಲಾ ಅನಾಥರಿಗೂ ಚಳಿಯಿಂದ ರಕ್ಷಣೆ ಪಡೆಯಲು ಹೊದಿಕೆಗಳನ್ನು ನೀಡಿದರು.
ಈ ವೇಳೆ ಮಾತನಾಡಿದ ಅವರು ರಾಷ್ಟ್ರಪಿತ ಮಹಾತ್ಮ ಗಾಂಧಿಜಿಯವರು ಕಂಡ ರಾಮ ರಾಜ್ಯದ ಕನಸು ಕನಸಾಗಿಯೆ ಉಳಿದಿದೆ. ಭಾರತದ ಪ್ರತಿಯೊಬ್ಬ ಪ್ರಜೆಯೂ ಉಳಿದುಕೊಳ್ಳಲು ಸೂರು, ಉಣ್ಣಲು ಅನ್ನ, ಉಟ್ಟುಕೊಳ್ಳಲು ಬಟ್ಟೆ ಈ ಮೂರು ಮೂಲಭೂತ ಆದ್ಯತೆಯಿಂದ ವಂಚಿತರಾಗಬಾರದು ಎನ್ನುವ ಸಂವಿಧಾನದ ಆಶಯವಿದ್ದರೂ ಅನೇಕ ನಿರ್ಗತಿಕರು ಇನ್ನೂ ಅನಾಥವಾಗಿಯೆ ನಮ್ಮ ನಡುವೆ ಇದ್ದಾರೆ, ಇಂತವರಿಗೆ ನಮ್ಮ ಕೈಲಾಗುವ ಸೇವೆಯನ್ನು ಮಾಡಬೇಕು ಎನ್ನುವ ಉದ್ದೇಶದಿಂದ ಇದನ್ನು ಮಾಡಲಾಗಿದೆ ಎಂದರು