ನಿರ್ದೇಶಕರಲ್ಲದೆ ಬಡವಾದ ಪಿಯು ಬೋರ್ಡ್, ಸಚಿವರಿಲ್ಲದೆ ಕಂಗೆಟ್ಟ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯನ್ನು ಶೀಘ್ರ ಸರಿಪಡಿಸಲು ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

Spread the love

ಮಂಗಳೂರು: ನಿರ್ದೇಶಕರಲ್ಲದೆ ಬಡವಾದ ಪಿಯು ಬೋರ್ಡ್, ಸಚಿವರಿಲ್ಲದೆ ಕಂಗೆಟ್ಟ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯನ್ನು ಶೀಘ್ರ ಸರಿಪಡಿಸಲು ರಾಜ್ಯ ಸರ್ಕಾರವನ್ನು ಆಗ್ರಹಿಸಿ ದಿನಾಂಕ 07.12.2018 ರಂದು ಮಂಗಳೂರಿನಲ್ಲಿ  ಹೋರಾಟ

ಇಂದು ಮಣ್ಣಗುಡ್ಡ ಸರ್ಕಲಿನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಾಯಿತು. ಆ ಪ್ರತಿಭಟನೆಯಲ್ಲಿ ಮಹಾನಗರ ಕಾರ್ಯಕಾರಿಣಿ ಸದಸ್ಯರಾದ ಗಿರೀಶ್ ನಾಯಕ್ ರವರು ಈ ಕೆಳಗಿನಂತೆ ಮಾತನಾಡಿದರು ಮತ್ತು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟರು.

ವಿದ್ಯಾರ್ಥಿ ಜೀವನದ ಮುಖ್ಯ ಘಟಕಗಳು ಎಂದರೆ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ. ಈ ಪರೀಕ್ಷೆಗಳನ್ನು ಸಮರ್ಪಕವಾಗಿ ನಡೆಸುವುದು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ. ವಿಪರ್ಯಾಸವೆಂದರೆ ಸರ್ಕಾರದ ಒಳಜಗಳಗಳಿಂದ ತೆರವಾದ ಮಂತ್ರಿ ಸ್ಥಾನವನ್ನು ಇಲ್ಲಿವರೆಗೆ ಭರ್ತಿ ಮಾಡದೆ ಈ ರಾಜ್ಯ ಸರ್ಕಾರ ನಿರ್ಲಕ್ಷ್ಯ ತಾಳಿದೆ. ಕಳೆದ 2 ವರ್ಷಗಳ ಹಿಂದೆ ಪಿಯು ಬೋರ್ಡ್, ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ತೀವ್ರ ಮುಖಭಂಗ ಅನುಭವಿಸಿತ್ತಲ್ಲದೇ ಲಕ್ಷಾಂತರ ವಿದ್ಯಾರ್ಥಿಗಳ ಮದ್ಯೆ ಗೊಂದಲ ಸೃಷ್ಟಿಸಿತ್ತು. ಇನ್ನೇನು ದ್ವಿತಿಯ ಪಿಯುಸಿ ಪರೀಕ್ಷೆಗೆ ಕೆಲವೇ ತಿಂಗಳುಗಳು ಬಾಕಿ ಇದ್ದು ಇಲ್ಲಿಯವರೆಗೂ ನಿರ್ದೇಶಕರನ್ನು ನೇಮಕ ಮಾಡದೇ ಸರ್ಕಾರ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಸಿದೆ. ಒಟ್ಟಿನಲ್ಲಿ ಸಾರಥಿಯೇ ಇಲ್ಲದ ರಥದಂತೆ ನಮ್ಮ ಶಿಕ್ಷಣ ಇಲಾಖೆ ನಡೆದುಕೊಂಡು ಹೋಗುತ್ತಿರುವುದು ಖಂಡನೀಯ. ಸರ್ಕಾರ ಎಚ್ಚೆತ್ತು ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಎಬಿವಿಪಿ ಆಗ್ರಹಿಸುತ್ತದೆ.

ಕಿಂಗ್‍ಪಿನ್ ಶಿವಕುಮಾರನಿಗಿಲ್ಲ್ಲ ಶಿಕ್ಷೆ?

2016ನೇ ಸಾಲಿನ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಬಂಧಿತನಾಗಿದ್ದ ಶಿವಕುಮಾರ್ ಲಕ್ಷಾಂತರ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡಿ, ರಾಜ್ಯದ ಮರ್ಯಾದೆಯನ್ನು, ಪಿಯು ಬೋರ್ಡನ ಮರ್ಯಾದೆಯನ್ನು ತೆಗೆದ ವ್ಯಕ್ತಿ ಆರಾಮವಾಗಿ ಮತ್ತೆ ಕಳೆದ ವಾರವಷ್ಟೇ ನಡೆದ ಕೆಎಸ್‍ಸಿಪಿ (ಪೊಲೀಸ್ ಕಾನ್ಸ್ಟೇಬಲ್) ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವಲ್ಲಿ ಬಂಧಿತನಾಗಿದ್ದಾನೆ.  ಈ ರೀತಿ ಶಿಕ್ಷಣದ ಪವಿತ್ರತೆಯನ್ನು ಹಾಳು ಮಾಡುತ್ತಿರುವ “ಉಗ್ರಗಾಮಿ” ರೀತಿಯ ಮನಸ್ಥಿತಿಯ ಶಿವಕುಮಾರನ ಬಗ್ಗೆ ಮೃದು ಧೋರಣೆ ತಾಳುತ್ತಿರುವುದು ತೀವ್ರ ಖಂಡನೀಯ. ರಾಜ್ಯ ಸರ್ಕಾರ ಕೂಡಲೇ ಗಂಭೀರ ಕ್ರಮ ಜರುಗಿಸಿ ಈ ರೀತಿ ಪ್ರಕರಣಗಳು ಮತ್ತೆ ಮರುಕಳಿಸದಂತೆ ಎಚ್ಚರ ವಹಿಸಬೇಕು.

ನಾರಾಯಣಗುರು ಕಾಲೇಜು ಮತ್ತು ಗೋಕರ್ಣನಾಥ ಪಿ.ಯು ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಈ ಪ್ರತಿಭಟನೆಯಲ್ಲಿ ಭರತ್, ಬಾಲರಾಜ್, ವರುಣ್, ಧನುಷ್, ವಲಯ ಕಾರ್ಯದರ್ಶಿ ಶ್ರೇಯಸ್, ಧನ್‍ರಾಜ್, ಪ್ರಶಾಂತ್, ಅಶ್ವತ್, ರೋಹಿಲ್ ಶೆಟ್ಟಿ, ಕಿರಣ್ ಬೇವಿನಹಳ್ಳಿ ಇನ್ನೂ ಅನೇಕರು ಸೇರಿದ್ದರು.

ಬೇಡಿಕೆಗಳು

  1. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಗೆ ಸಚಿವರನ್ನು ನೇಮಿಸಬೇಕು ಹಾಗೂ ಪಿಯುಸಿ ಬೋರ್ಡಗೆ ನಿರ್ದೇಶಕರನ್ನು ಕೂಡಲೇ ನೇಮಿಸಬೇಕು
  2. ಕಿಂಗ್‍ಪಿನ್ ಶಿವಕುಮಾರ್‍ಗೆ ಸೂಕ್ತ ಶಿಕ್ಷೆ ವಿಧಿಸಿ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಬೇಕು
  3. ಪಿಯುಸಿ ಪರೀಕ್ಷೆ ಸಮೀಪಿಸುತ್ತಿದ್ದಂತೆ ವಿದ್ಯಾರ್ಥಿಗಳು, ಪೋಷಕರು ಆತಂಕದಲ್ಲಿ ಪರೀಕ್ಷೆಯನ್ನು ಎದುರು ನೋಡುವುದನ್ನು ತಪ್ಪಿಸಿ, ಕಟ್ಟುನಿಟ್ಟಿನ ಕ್ರಮದೊಂದಿಗೆ ಪರೀಕ್ಷೆಯನ್ನು ನಡೆಸುವಂತೆ ಪಿಯು ಬೋರ್ಡ್ ಕ್ರಮ ತೆಗೆದುಕೊಳ್ಳಬೇಕು

Spread the love