ನಿಸರ್ಗ ಚಂಡಮಾರುತದ ಎಫೆಕ್ಟ್ ; ಗೋವಾದಲ್ಲಿ ಉಡುಪಿಯ ಮೀನುಗಾರಿಕಾ ಬೋಟ್ ಮುಳುಗಡೆ
ಉಡುಪಿ: ನಿಸರ್ಗ ಚಂಡಮಾರುತದ ಎಫೆಕ್ಟ್ ಉಡುಪಿಯ ಮೀನುಗಾರರಿಗೂ ತಟ್ಟಿದೆ. ಆಳ ಸಮುದ್ರ ಮೀನುಗಾರಿಕೆಗೆ ತೆರೆಳಿದ್ದ ಮಲ್ಪೆಯ ಬೋಟೊಂದು ಮಂಗಳವಾರ ಮಧ್ಯಾಹ್ನ ಗೋವಾ ಸಮೀಪದ ಸಮುದ್ರ ದಲ್ಲಿ ಮುಳುಗಡೆಗೊಂಡಿದ್ದು, ಇದರಲ್ಲಿದ್ದ ಏಳು ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.
ಮಲ್ಪೆ ವಡಭಾಂಡೇಶ್ವರದ ದೀಪಿಕಾ ಎಂಬವರ ಮಾಲಕತ್ವದ ಶ್ರೀದುರ್ಗಾ ಹನುಮ ಆಳಸಮುದ್ರ ಬೋಟ್ ಮೇ 23ರಂದು ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು.
ಮಹಾರಾಷ್ಟ್ರದಲ್ಲಿ ಮೀನುಗಾರಿಕೆ ನಡೆಸಿ ವಾಪಾಸು ಬರುವಾಗ ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಗೋವಾ ಸಮೀಪದ ರೆಡ್ ಹೌಸ್ ಬಳಿ ಸುಮಾರು 27 ನಾಟಿಕಲ್ ಮೈಲು ದೂರದಲ್ಲಿರುವಾಗ, ಗಾಳಿಯ ರಭಸಕ್ಕೆ ಬೋಟಿನ ಪೈಬರ್ ಒಡೆದು ನೀರು ಬೋಟಿನ ಒಳನುಗ್ಗಲು ಆರಂಭವಾಯಿತು.
ಕೂಡಲೇ ಆಗಮಿಸಿದ ಸಮೀಪದಲ್ಲಿದ್ದ ಶಿವಬೈರವ ಬೋಟಿನವರು, ಮುಳುಗುತ್ತಿದ್ದ ಬೋಟಿನಲ್ಲಿದ್ದ ಉತ್ತರ ಕನ್ನಡ ಜಿಲ್ಲೆಯ ಕೇಶವ ಮಾದೇವ ಮೊಗೇರ, ನಾಗರಾಜ್ ಈಶ್ವರ ಮೊಗೇರ, ರಾಮಚಂದ್ರ ನಾರಾಯಣ ನಾಯ್ಕಿ, ಈಶ್ವರ ವೆಂಕಟರಮಣ ಹರಿಕಾಂತ್ರ, ದಿನೇಶ್ ಜಟ್ಟ ಮೊಗೇರ, ಗುರುರಾಜ್ ಮಂಜುನಾಥ ಮೊಗೇರ ಅವರನ್ನು ರಕ್ಷಿಸಿದ್ದಾರೆ ಈ ದುರಂತದಿಂದ ಬೋಟ್ ಮಾಲೀಕರಿಗೆ ಸುಮಾರು 60 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.