ನಿಸರ್ಗ ಚಿಣ್ಣರ ಶಾಲೆಯ ವಾರ್ಷಿಕೋತ್ಸವ ಸಮಾರಂಭ
ಮಂಗಳೂರಿನ ಕೆಪಿಟಿ ಬಳಿಯಿರುವ ನಿಸರ್ಗ ಚಿಣ್ಣರ ಶಾಲೆಯ ಹದಿನೇಳನೆ ವಾರ್ಷಿಕೋತ್ಸವವು ಶನಿವಾರ ದಿನಾಂಕ 08 ಫೆಬ್ರವರಿ 2020ರಂದು ಶಾಲೆಯ ಆವರಣದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಎಕಾಮ್ ಸಂಸ್ಥೆಯ ಸಹಾಯಕ ಸ್ಥಾನೀಯ ಅಭಿಯಂತರ ಡಾ| ಬಿ ರಾಧೇಶ್ಯಾಮ್ ಮತ್ತು ಬೆಸೆಂಟ್ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಿಕೆ ಶ್ರೀಮತಿ ತ್ರಿವೇಣಿ ಶೆಟ್ಟಿಯವರು ಸಮಾರಂಭದ ಮುಖ್ಯ ಅತಿಥಿಗಳಾಗಿದ್ದರು.
ಒಬ್ಬ ಆದರ್ಶ ವ್ಯಕ್ತಿಯ ರೂಪುಗೊಳ್ಳುವಿಕೆಯಲ್ಲಿ ಮೂಲ ವಿದ್ಯಾಭ್ಯಾಸದ ಮಹತ್ತ್ವದ ಬಗ್ಗೆ ಡಾ| ಬಿ ರಾಧೇಶ್ಯಾಮ್ರವರು ವಿವರಿಸುತ್ತಾ, ನಿಸರ್ಗ ಶಾಲೆಯ ಆಡಳಿತ ಮತ್ತು ಸಿಬ್ಬಂದಿ ವರ್ಗದವರು ಚಿಣ್ಣರ ಬೆಳವಣಿಗೆಗೆ ಪೂರಕವಾದ ಆರೈಕೆ ಮತ್ತು ಗಮನದ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದರು. ಶಾಲೆಯ ಧ್ಯೇಯವಾಕ್ಯವಾದ “ಆಟದೊಂದಿಗೆ ಪಾಠ, ಪಾಠದೊಂದಿಗೆ ಆಟ”ವನ್ನು ಈ ವಿದ್ಯಾಸಂಸ್ಥೆಯಲ್ಲಿ ಅನುಸರಿಸುವುದರೊಂದಿಗೆ, ಚಿಣ್ಣರೂ ಈ ಶಾಲೆಗೆ ಬರಲು ಯಾವತ್ತೂ ಉತ್ಸುಕತೆ ತೋರುತ್ತಾರೆಂದು ತಿಳಿಸಿದರು. .
ಇನ್ನೋರ್ವ ಮುಖ್ಯ ಅತಿಥಿ ಶ್ರೀಮತಿ ತ್ರಿವೇಣಿ ಶೆಟ್ಟಿಯವರು ಮಾತನಾಡುತ್ತಾ, ಓರ್ವ ದುಡಿಯುವ ಮಹಿಳೆ ಹಾಗೂ ತಾಯಿಯಾಗಿ ಮಕ್ಕಳನ್ನು ಬೆಳೆಸುವ ಬೇಗುದಿಯನ್ನು ಮತ್ತು ಸವಾಲುಗಳನ್ನು ಸವಿರವಾಗಿ ಸಭೆಯ ಮುಂದಿಟ್ಟರು. ನಿಸರ್ಗ ಕುಟುಂಬ ಸದಸ್ಯರು ಮಕ್ಕಳಿಗೆ ತೋರುವ ಪ್ರೀತಿ ಮತ್ತು ಒಲುಮೆಯನ್ನು ಕೊಂಡಾಡಿದರು.
ಇದೇ ಸಂದರ್ಭದಲ್ಲಿ ವಿವಿಧ ವಿಷಯಗಳಲ್ಲಿ ಸಮುದಾಯಕ್ಕೆ ಸಹಾಯಹಸ್ತ ಚಾಚುತ್ತಿರುವ ಶ್ರೀಮತಿ ಕಸ್ತೂರಿ ಒಡೆಯರ್, ಶ್ರೀ ನಿರಂಜನ್ ಮತ್ತು ಶ್ರೀ ಬಷೀರ್ ಇವರುಗಳನ್ನು ಗೌರವಿಸಲಾಯಿತು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪ್ಯಾಟ್ಸಿ ಡಿ’ಸೋಜ ಸಮಾರಂಭಕ್ಕೆ ಆಗಮಿಸಿದವರನ್ನು ಸ್ವಾಗತಿಸಿ ಪ್ರಸ್ತುತ ವರ್ಷದ ಶಾಲಾ ಚಟುವಟಿಕೆಗಳ ವರದಿ ಮಂಡಿಸಿದರು. ಪ್ರಬಂಧಕರಾದ ಶ್ರೀ ವಿಕ್ಟರ್ ಡಿ’ಸೋಜಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪುಟಾಣಿಗಳಾದ ಸುಧನ್ವ ಬಿ ಆರ್ ಮತ್ತು ಚಕ್ಷಸ್ ರವರು ಅತಿಥಿಗಳನ್ನು ಪರಿಚಯಿಸಿದರು. ಪುಟಾಣಿ ಅಥರ್ವ ಯುಕೆಜಿ ವಿದ್ಯಾರ್ಥಿಗಳ ಗೌರವಿಸುವ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರೆ, ಪುಟಾಣಿ ತನ್ವಿ ವಂದನಾರ್ಪಣೆಯನ್ನಿತ್ತಳು. ಅನಂತರ ಶಾಲೆಯ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಭೆಯ ಮುಂದಿಟ್ಟರು.