ನೀತಿ ಸಂಹಿತೆ ಉಲ್ಲಂಘನೆ: ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧದ ಪ್ರಕರಣ ರದ್ದು
ಬೆಂಗಳೂರು: ಪ್ರಚೋದನಕಾರಿ ಭಾಷಣ ಮಾಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ತಮ್ಮ ವಿರುದ್ಧದ ಪ್ರಕರಣ ರದ್ದುಗೊಳಿಸುವಂತೆ ಕೋರಿ ಪ್ರಭಾಕರ ಭಟ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ಪ್ರಭಾಕರ ಭಟ್ ಪರ ವಕೀಲ ಎಂ.ಅರುಣ್ ಶ್ಯಾಮ್ ವಾದ ಮಂಡಿಸಿ, ಅರ್ಜಿದಾರರ ವಿರುದ್ಧ ಐಪಿಸಿ 153 (ಎ) ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಈ ಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸುವ ಮುನ್ನ ರಾಜ್ಯ ಇಲ್ಲವೇ ಕೇಂದ್ರ ಸರ್ಕಾರದಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯ.ಆದರೆ, ದೂರುದಾರರು ಈ ನಿಯಮ ಪಾಲಿಸಿಲ್ಲ ಎಂದರು.
2018 ಏ.6ರಂದು ಪುಣ್ಯಕೋಟಿ ನಗರ ಕೈರಂಗಳಕ್ಕೆ ಭೇಟಿ ಭೇಟಿ ನೀಡಿದ್ದ ವೇಳೆ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಪ್ರಚೋದನಕಾರಿ ಭಾಷಣ ಮಾಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಚುನಾವಣಾಧಿಕಾರಿ ಟಿ. ಯೋಗೀಶ್ ಏ.8ರಂದು ಕೋಣಾಜೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಬಂಟ್ವಾಳ ನ್ಯಾಯಾಲಯಕ್ಕೆ ಚಾಜ್೯ಶೀಟ್ ಸಲ್ಲಿಸಿದ್ದರು. ಇದನ್ನು ರದ್ದುಗೊಳಿಸುವಂತೆ ಕೋರಿ ಪ್ರಭಾಕರ್ ಭಟ್ಟರು ಹೈಕೋಟ್೯ಗೆ ಅರ್ಜಿ ಸಲ್ಲಿಸಿದ್ದರು.