Home Mangalorean News Kannada News ನೀವು ಬಿದ್ದ ಮರವಲ್ಲ, ಬಿತ್ತಿದ ಬೀಜ – ಸಂತೋಷ್ ಬಜಾಲ್

ನೀವು ಬಿದ್ದ ಮರವಲ್ಲ, ಬಿತ್ತಿದ ಬೀಜ – ಸಂತೋಷ್ ಬಜಾಲ್

Spread the love

ನೀವು ಬಿದ್ದ ಮರವಲ್ಲ, ಬಿತ್ತಿದ ಬೀಜ – ಸಂತೋಷ್ ಬಜಾಲ್

ಜಿಲ್ಲೆಯಲ್ಲಿ ಯುವಜನ ಚಳುವಳಿ ಕಟ್ಟಲು ನೇತೃತ್ವ ವಹಿಸಿದ ಡಿವೈಎಫ್‍ಐನ ನಾಯಕ ಶ್ರೀನಿವಾಸ್ ಬಜಾಲ್‍ರವರ 14ನೇ ವರ್ಷದ ಹುತಾತ್ಮ ದಿನಾಚರಣೆಯನ್ನು ಜೂನ್ 24ರಂದು ಬಜಾಲ್ ಪಕ್ಕಲಡ್ಕದಲ್ಲಿ ಆಚರಿಸಲಾಯಿತು.

dyfi-foundation-day

ಈ ವೇಳೆ ಮಾತನಾಡಿದ ಡಿವೈಎಫ್‍ಐನ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಸಂಗಾತಿ ಶ್ರೀನಿವಾಸ್ ಬಜಾಲ್ ಡಿವೈಎಫ್‍ಐನ ಸಂಘಟನೆಯಲ್ಲಿ ಗುರುತಿಸಿಕೊಂಡು ಭಗತ್‍ಸಿಂಗ್‍ನ ಆದರ್ಶ ತತ್ವಗಳನ್ನು ಮೈಗೂಡಿಸಿ ಸಮಾಜದಲ್ಲಿ ನಡೆಯುತ್ತಿರುವಂತಹ ಅನ್ಯಾಯ ದಬ್ಬಾಳಿಕೆ ದೌರ್ಜನ್ಯಗಳಿಗೆದುರಾಗಿ ಯುವಜನ ವಿದ್ಯಾರ್ಥಿಗಳನ್ನು ಸಂಘಟಿಸಿ ಅವರ ನೋವು-ನಲಿವುಗಳಿಗೆ, ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅವರ ಸ್ಫೂರ್ತಿಯ ಚಿಲುಮೆಯಾಗಿದ್ದರು. ಶ್ರೀನಿವಾಸರು ಅವರಿಗಾಗಿ ಬದುಕಲಿಲ್ಲ. ಇತರರಿಗಾಗಿ ಬದುಕಿದರು. ಇಂತವರ ಏಳಿಗೆಯನ್ನು ಸಹಿಸದ ಕೋಮುವಾದಿಗಳು ಇವರನ್ನು ಹತ್ಯೆಗೈದರೆ ಎಡಪಂಥೀಯ ಪ್ರಗತಿಪರ ಚಳುವಳಿಯನ್ನು ನಾಶಪಡಿಸಬಹುದೆಂಬ ಅವರ ಉದ್ದೇಶ ಹುಸಿಯಾಗಿದೆ. ಕ್ರಾಂತಿಕಾರಿಗಳಿಗೆ ಹುಟ್ಟು ಮಾತ್ರ ಇದೆ ಅವರೆಂದು ಸಾಯುವುದಿಲ್ಲ. ಅವರ ಆದರ್ಶಗಳನ್ನು ಹೊತ್ತ ಸಾವಿರಾರು ಶ್ರೀನಿವಾಸರು ಹುಟ್ಟಿ ಬರಲಿದ್ದಾರೆ. ಈ ಸಮಾಜವನ್ನು ಆವರಿಸಿದ ಜಾತಿ, ಮತ, ಧರ್ಮಗಳ ಗೋಡೆಯನ್ನು ಕೆಡವಿ ಸಮಾಜವಾದ ವ್ಯವಸ್ಥೆಯನ್ನು ಜಾರಿಗೊಳಿಸಲು ಮುಂದಾಗಲಿದ್ದಾರೆ. ಜಿಲ್ಲೆಯಲ್ಲಿ ಒಂದು ಬಲಿಷ್ಠ ಯುವಜನ ಚಳುವಳಿಯನ್ನು ಕಟ್ಟಲು ನಾವು ಈ ಹೊತ್ತಲಿ ಪಣತೊಡಬೇಕಾಗಿದೆ.

ಈ ಸಂದರ್ಭದಲ್ಲಿ ಸ್ಥಳೀಯ ಡಿವೈಎಫ್‍ಐ ಮುಖಂಡರಾದ ಉದಯ ಕುಂಟಲಗುಡ್ಡೆ ಧ್ವಜಾರೋಹಣ ಮಾಡಿ ಮಾತನಾಡಿದರು. ಸಿಪಿಐ(ಎಂ) ಮುಖಂಡರಾದ ಅಶೋಕ್ ಸಾಲ್ಯಾನ್, ಸುರೇಶ್ ಬಜಾಲ್ ಸ್ಥಳೀಯ ಡಿವೈಎಫ್‍ಐ ಮುಖಂಡರಾದ ಧಿರಾಜ್, ಪ್ರಶಾಂತ್ ಕುಡ್ತಡ್ಕ, ಕೌಶಿಕ್, ಪ್ರಕಾಶ್ ಶೆಟ್ಟಿ, ದೀಕ್ಷಿತ್, ಸೋನಿಲ್, ಮಧುವಂತ್ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಮುನ್ನ ಶ್ರೀನಿವಾಸ್ ಬಜಾಲ್ ಹುತಾತ್ಮರಾದ ಸ್ಥಳದಿಂದ ಪಕ್ಕಲಡ್ಕ ಬಸ್‍ಸ್ಟ್ಯಾಂಡ್ ವರೆಗೆ ಘೋಷಣೆ ಕೂಗುವ ಮೂಲಕ ಮೆರವಣಿಗೆ ನಡೆಸಲಾಯಿತು.

ಡಿವೈಎಫ್‍ಐ ಪಕ್ಕಲಡ್ಕ ಘಟಕದ ಕಾರ್ಯದರ್ಶಿ ರಿತೇಶ್ ಪಕ್ಕಲಡ್ಕ ಸ್ವಾಗತಿಸಿ, ವರಪ್ರಸಾದ್ ವಂದಿಸಿದರು.


Spread the love

Exit mobile version