ನೆರೆ ಪರಿಹಾರದ ಹಣ ಒದಗಿಸಲು ಸರ್ಕಾರ ಸಿದ್ದ: ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ

Spread the love

ನೆರೆ ಪರಿಹಾರದ ಹಣ ಒದಗಿಸಲು ಸರ್ಕಾರ ಸಿದ್ದ: ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ

ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪಗಳಿಂದಾಗಿ ಸುಮಾರು ನೂರು ಕೋಟಿ ರೂ. ನಷ್ಟು ನಷ್ಟ ಸಂಭವಿಸಿದೆ ಎಂದು ಜಿಲ್ಲಾಡಳಿತ ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ತಾತ್ಕಾಲಿಕ ಪರಿಹಾರಕ್ಕೆ ಹಣ ಭರಿಸಲು ಸರ್ಕಾರ ಸಿದ್ದವಿದೆ. ಪರಿಹಾರ ಹಣದ ಬಗ್ಗೆ ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡಿ ರಾಜ್ಯ ಸರ್ಕಾರದಿಂದ ಸಿಗಬೇಕಿದ್ದ ಪಾಲನ್ನು ಕೊಡಿಸಲು ಜಿಲ್ಲಾಡಳಿತದೊಂದಿಗೆ ಕೈಜೋಡಿಸುತ್ತೇನೆ ಎಂದು ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು.

ಕುಂದಾಪುರ ಹಾಗೂ ಬೈಂದೂರು ಕ್ಷೇತ್ರಗಳ ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ನಗರದ ಶರೋನ್ ಹೋಟೇಲ್ ನಲ್ಲಿ ಬುಧವಾರ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೈಂದೂರು ಸೋಮೇಶ್ವರ ಬೀಚ್ ಬಳಿಯಲ್ಲಿನ ಗುಡ್ಡ ಕುಸಿತ ಸ್ಥಳಕ್ಕೆ ಭೇಟಿ ನೀಡಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಖಾಸಗಿ ಜಾಗದವರ ಸ್ವಯಂಕೃತ ಅಪರಾಧದಿಂದ ಗುಡ್ಡ ಜರಿದಿದೆ. ಈಗಾಗಲೇ ಈ ಬಗ್ಗೆ ಕ್ರಮ ಕೈಗೊಂಡಿರುವ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದರು.

ನರೇಂದ್ರ ಮೋದಿಯವರು ಚುನಾವಣೆಯ ಪೂರ್ವ ರಾಹುಲ್ ಗಾಂಧಿಯವರನ್ನು ರಾಜಕೀಯವಾಗಿ ಮುಗಿಸಲು ನಾನಾ ಕಸರತ್ತುಗಳನ್ನು ಮಾಡಿದ್ದರು. ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷಗಳಂತೆ ಅಷ್ಟೇ ಪ್ರಭಲವಾದ ವಿರೋಧ ಪಕ್ಷಗಳು ಇರಬೇಕು. ಆಗ ಮಾತ್ರ ದೇಶ ಅಭಿವೃದ್ದಿ ಆಗುತ್ತದೆ. ಪ್ರಥಮ ಬಾರಿ ನಾಯಕನನ್ನು ಲೋಕಸಭೆಯಿಂದ ಹೊರಗೆ ಕಳುಹಿಸಿದ್ದು, ಪ್ರಜಾಪ್ರಭುತ್ವದ ದೌರ್ಭಾಗ್ಯ. ನಮ್ಮನ್ನು ಬಿಟ್ಟು ಯಾರೂ ಅಧಿಕಾರ ನಡೆಸಬಾರದು ಎನ್ನುವ ಮನೋಭಾವ ಬಿಜೆಪಿ ಕೇಂದ್ರ ನಾಯಕರದ್ದು. ಅಧಿಕಾರ ಇದೆ ಎಂದು ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ವಿರೋಧಪಕ್ಷವನ್ನು ಸಂಪೂರ್ಣವಾಗಿ ಕಟ್ಟಿಹಾಕಲು ಕೀಳು ಮಟ್ಟಕ್ಕೆ ಇಳಿದ ಪ್ರಧಾನಿ ಮೋದಿಯವರಿಗೆ ಈ ಬಾರಿ ಚುನಾವಣೆಯಲ್ಲಿ ಜನ ಉತ್ತರಿಸಿದ್ದಾರೆ ಎಂದರು.

ಊರುಗೋಲಿನ ಸಹಾಯದಲ್ಲಿ ನಿಂತಿರುವ ಸರ್ಕಾರ!:
ಚುನಾವಣೆಯ ಪೂರ್ವದಲ್ಲಿ ನಿತೀಶ್ ಕುಮಾರ್ ಹಾಗೂ ಚಂದ್ರ ಬಾಬು ನಾಯ್ಡು ಅವರ ವಿರುದ್ದ ಮಾತನಾಡಿದವರು ಇಂದು ಅವರನ್ನೇ ಸೇರಿಸಿಕೊಂಡು ಕೇಂದ್ರದಲ್ಲಿ ಸರ್ಕಾರ ರಚಿಸಿಕೊಂಡಿದ್ದು, ಈ ಸರ್ಕಾರ ಸಂಪೂರ್ಣ ಊರುಗೋಲಿನ ಸಹಾಯದಲ್ಲಿ ನಿಂತಿದೆ. ಈ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಮಂಜುನಾಥ ಭಂಡಾರಿ ವ್ಯಂಗ್ಯವಾಡಿದರು.

ಬಿಜೆಪಿಯ ಪಾದಯಾತ್ರೆ ಕವಲೊಡೆದಿದೆ:
ಬಿಜೆಪಿಗರು ಹಗರಣಗಳನ್ನಿಟ್ಟು ಪಾದಯಾತ್ರೆ ನಡೆಸಲು ಸಿದ್ದರಾಗಿದ್ದಾರೆ. ಹಗರಣಗಳ ವಿರುದ್ದ ಮಾತನಾಡುವ ಭ್ರಷ್ಟ ಬಿಜೆಪಿ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಪಾದಯಾತ್ರೆಯ ಆರಂಭದ ಮೊದಲೇ ಕವಲೊಡೆದು ಹೋಗಿದೆ. ಜೆಡಿಎಸ್-ಬಿಜೆಪಿ ಮಧ್ಯೆ ಜಗಳ ಪ್ರಾರಂಭಗೊಂಡಿದ್ದು, ಈ ಮೈತ್ರಿ ಬಹಳ ದಿನ ಉಳಿಯೋದಿಲ್ಲ. ರಾಜಕಾರಣವನ್ನು ಚುನಾವಣಾ ಸಮಯದಲ್ಲಿ ಮಾಡಬೇಕು. ಆದರೆ ಸರ್ಕಾರ ರಚನೆಗೊಂಡ ಬಳಿಕ ರಾಜಕಾರಣ ಮಾಡುವುದು ಸರಿಯಲ್ಲ. ಕೇಂದ್ರ ತಾಯಿ ಸ್ಥಾನದಲ್ಲಿದೆ. ತಾಯಿ ಮಕ್ಕಳನ್ನು ಒಂದೇ ರೀತಿ ನೋಡಿಕೊಳ್ಳಬೇಕು. ಆದರೆ ಕೇಂದ್ರ ಸರ್ಕಾರ ಕರ್ನಾಟಕವನ್ನು ಸಂಪೂರ್ಣ ಕಡೆಗಣಿಸಿದೆ. ಕೇಂದ್ರದ ಬಜೆಟ್ ಆಂಧ್ರ ಪ್ರದೇಶ ಹಾಗೂ ಬಿಹಾರ ಎರಡು ರಾಜ್ಯಗಳಿಗೆ ಮಾತ್ರ ಸೀಮಿತವಾಗಿದೆ. ಇದು ಸಾರ್ವಜನಿಕವಾದ ಬಜೆಟ್ ಅಲ್ಲ. ಕರ್ನಾಟಕ ತೆರಿಗೆ ಕಟ್ಟರುವುದರಲ್ಲಿ ಎರಡನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕಿದೆ ಎನ್ನುವ ಒಂದೇ ಕಾರಣಕ್ಕೆ ಕೇಂದ್ರ ಬಜೆಟ್ ನಲ್ಲಿ ಕರ್ನಾಟಕವನ್ನು ತಿರಸ್ಕರಿಸಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರು ಅವರ ಕ್ಷೇತ್ರದ ಸಮಸ್ಯೆಗಳನ್ನು ಆಲಿಸಬೇಕು. ಅಲ್ಲಿಯೂ ಮಳೆ ಇದೆ. ಇನ್ನೆರಡು ದಿನಗಳಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಉಡುಪಿ ಜಿಲ್ಲೆಯ ಪ್ರವಾಸ ಕೈಗೊಳ್ಳುತ್ತಾರೆ ಎಂದರು.

ಜನಸ್ಪಂದನ ಸಭೆಯಲ್ಲಿ ಅಧಿಕಾರಿಗಳ ದರ್ಪದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ ಅವರು, ಜನಸ್ಪಂದನ ಸಭೆಯಲ್ಲಿ ನಡೆದ ಘಟನೆಗಳ ಕುರಿತು ವಿಡಿಯೋದಲ್ಲಿ ನೋಡಿದ್ದೇನೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿಯವರೊಂದಿಗೆ ಮಾತನಾಡುತ್ತೇನೆ ಎಂದರು.

ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲಿ ಜನಪರವಾಗಿರುವ ಅಧಿಕಾರಿಗಳನ್ನು ಎಗ್ಗಿಲ್ಲದೇ ವರ್ಗಾವಣೆ ಮಾಡುತ್ತಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ವರ್ಗಾವಣೆ ಎನ್ನುವುದು ನಿರಂತರವಾಗಿ ನಡೆಯುವ ಪ್ರಕ್ರಿಯೆ. ಎರಡು ವರ್ಷ ಕಳೆದ ಬಳಿಕ ಅಧಿಕಾರಿಗಳ ವರ್ಗಾವಣೆ ಮಾಡಲಾಗುತ್ತಿದೆ. ನನ್ನ ಬಳಿ ವರ್ಗಾವಣೆಗೆ ಬಂದಾಗ ಸ್ಥಳೀಯ ಮುಖಂಡರ ಪತ್ರವಿಲ್ಲದೇ ನಾನು ಶಿಫಾರಸ್ಸು ಮಾಡಿಲ್ಲ. ವರ್ಗಾವಣೆಗಾಗಿ ನನ್ನ ಬಳಿ ಬರುವುದು ಕಡಿಮೆ. ಶಾಸಕರಾಗಿದ್ದವರು ಅವರ ಕ್ಷೇತ್ರದಲ್ಲಿ ವರ್ಗಾವಣೆ ಮಾಡುತ್ತಾರೆ. ಅದರ ಬಗ್ಗೆ ಖಂಡಿತವಾಗಿಯೂ ಗಮನ ಹರಿಸುತ್ತೇನೆ ಎಂದರು.

ಪರಶುರಾಮ ಥೀಂ ಪಾರ್ಕ್ ಭ್ರಷ್ಟಾಚಾರದ ಕುರಿತಂತೆ ಉತ್ತರಿಸಿದ ಅವರು, ನಮ್ಮ ಪಕ್ಷ ಹಿಂದೆಯೂ ಇದರ ಬಗ್ಗೆ ಪ್ರತಿಭಟನೆ ನಡೆಸಿದೆ. ಖುದ್ದು ನಾನೇ ತನಿಖೆ ನಡೆಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಅಧೀವೇಶನದಲ್ಲಿಯೂ ಮಾತನಾಡಿರುವೆ. ಈ ಬಗ್ಗೆ ಕಾಂಗ್ರೆಸ್ ಮೃದು ಧೋರಣೆ ತೋರಿಲ್ಲ ಎಂದರು.

ತಮ್ಮ ಮೇಲಿನ ಭ್ರಷ್ಟಾಚಾರ ಆರೋಪದ ಕುರಿತಂತೆ ಪ್ರಕರಣವನ್ನು ಸಿಬಿಐ ಗೆ ವಹಿಸಲು ಆಗ್ರಹಿಸಿದ ಕೋಟ ಶ್ರೀನಿವಾಸ ಪೂಜಾರಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿಬಿಐ ಗೆ ಕೊಟ್ಟರೆ ಅವರು ಏನು ಬೇಕಾದರೂ ಮಾಡಬಹುದು. ಸಿಬಿಐ ಯಾಕೆ ನಮ್ಮಲ್ಲಿಯೂ ತನಿಖಾ ಸಂಸ್ಥೆ ಇದೆ. ಎಸ್ಐಟಿ ಇದೆ. ಗಂಗಾಕಲ್ಯಾಣ ಹಗರಣ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಾರೆ. ತನಿಖೆ ಎಂದರೆ ಒಂದೇ ರಾತ್ರಿಯಲ್ಲಿ ಮುಗಿಯುವುದಿಲ್ಲ. ಅದಕ್ಕೆ ಬೇರೆ ಬೇರೆ ವಿಧಾನಗಳಿವೆ. ಅದಕ್ಕೆ ಸಾಕಷ್ಟು ಸಮಯವೂ ಬೇಕು ಎಂದರು.

ಕೊಲ್ಲೂರು ವ್ಯವಸ್ತಾಪನಾ ಸಮಿತಿಯ ಕುರಿತಂತೆ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಯಾವ ಬಣವೂ ಇಲ್ಲ. ಕೊಲ್ಲೂರು ವ್ಯವಸ್ಥಾಪನಾ ಸಮಿತಿಯ ಕುರಿತಂತೆ ನನ್ನಿಂದೇನು ಆಗಬೇಕು ಅವೆಲ್ಲವನ್ನೂ ರಾಜ್ಯ ನಾಯಕರಿಗೆ ತಿಳಿಸಿದ್ದೇನೆ. ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷನಾಗಿ ಬ್ಲಾಕ್ ಅಧ್ಯಕ್ಷರ, ಜಿಲ್ಲಾಧ್ಯಕ್ಷರ ಧ್ವನಿಯನ್ನು ರಾಜ್ಯ ನಾಯಕರಿಗೆ ಮುಟ್ಟಿಸಿದ್ದೇನೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಅಶೋಕ ಕುಮಾರ್ ಕೊಡವೂರು, ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ, ಮುಖಂಡರಾದ ಎಂ. ದಿನೇಶ್ ಹೆಗ್ಡೆ, ವಿಕಾಸ್ ಹೆಗ್ಡೆ, ಬ್ಲಾಕ್ ಅಧ್ಯಕ್ಷರುಗಳಾದ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಶಂಕರ್ ಕುಂದರ್, ಅರವಿಂದ ಪೂಜಾರಿ, ಪ್ರದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ರಾಜು ಪೂಜಾರಿ, ಮಲ್ಯಾಡಿ ಶಿವರಾಮ ಶೆಟ್ಟಿ, ವಿಶ್ವಾಸ್ ಅಮೀನ್, ಪ್ರಸನ್ನ ಕುಮಾರ್, ಉದಯ್ ಕುಮಾರ್ಶೆಟ್ಟಿ, ಚಂದ್ರ ಅಮೀನ್, ರಘುರಾಮ ಶೆಟ್ಟಿ, ಕೃಷ್ಣ ಪೂಜಾರಿ, ಇಚ್ಚಿತಾರ್ಥ ಶೆಟ್ಟಿ, ದೇವಕಿ ಸಣ್ಣಯ್ಯ, ಅಶೋಕ ಪೂಜಾರಿ ಬೀಜಾಡಿ, ವಿನೋದ ಕ್ರಾಸ್ತಾ ಇದ್ದರು.


Spread the love