ನೆಲ್ಯಾಡಿ: ಡಿವೈಡರ್‌ಗೆ ಕಾರು ಢಿಕ್ಕಿ; ಓರ್ವ ಸ್ಥಳದಲ್ಲೇ ಮೃತ್ಯು
ನೆಲ್ಯಾಡಿ: ಮಣ್ಣಗುಂಡಿಯಲ್ಲಿ ಕಾರೊಂದು ಡಿವೈಡರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಪ್ರಯಾಣಿಕರೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ನ.17ರಂದು ಸಂಜೆ ನಡೆದಿದೆ.
ಮೃತರನ್ನು ಅರಿಯಡ್ಕ ನಿವಾಸಿ, ಕೂಲಿಕಾರ್ಮಿಕ ರಾಮಣ್ಣ ಪೂಜಾರಿ ಎಂಬವರ ಪುತ್ರ ಜಗದೀಶ್ (26) ಎಂದು ಗುರುತಿಸಲಾಗಿದೆ.
ಅವರ ಸ್ನೇಹಿತ ಕಾರು ಚಾಲಕ ಸಚಿನ್ ಎಂಬವರು ಗಾಯಗೊಂಡಿದ್ದಾರೆ.
ಜಗದೀಶ್ ಹಾಗೂ ಅವರ ಸ್ನೇಹಿತರು ನಾಲ್ಕೈದು ಕಾರಿನಲ್ಲಿ ಶಿರಾಡಿ ಗ್ರಾಮದ ಗುಂಡ್ಯ ಸಮೀಪದ ಗಡಿ ದೇವಸ್ಥಾನಕ್ಕೆ ಹೋದವರು ಅಲ್ಲಿಂದ ಹಿಂತಿರುಗಿ ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಸಚಿನ್ ಚಲಾಯಿಸುತ್ತಿದ್ದ ಕಾರಿನಲ್ಲಿ ಜಗದೀಶ್ ಮಾತ್ರ ಇದ್ದರು ಎನ್ನಲಾಗಿದ್ದು, ವೇಗವಾಗಿ ಬಂದ ಕಾರು ಮಣ್ಣಗುಂಡಿಯಲ್ಲಿ ಡಿವೈಡರ್‍ಗೆ ಢಿಕ್ಕಿಯಾಗಿ ಡಿವೈಡರ್ ಮೇಲೆ ಏರಿ ನಿಂತಿದೆ.
ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.