ನೇತಾಜಿ 1948ರ ವರೆಗೆ ಚೀನಾದಲ್ಲಿ ಬದುಕಿದ್ದರು!

Spread the love

ಕೊಲ್ಕತ್ತಾ: ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು 1948ರ ವರೆಗೆ ಚೀನಾದ ಮಂಚೂರಿಯಾ ಎಂಬ ಪ್ರದೇಶದಲ್ಲಿ ವಾಸವಾಗಿದ್ದರು. ಹೀಗಂತ ನೇತಾಜಿಯ ಆಪ್ತ ದೇಬ್ ನಾಥ್ ದಾಸ್ ಹೇಳಿರುವ ಬಗ್ಗೆ ನೇತಾಜಿ ಕಡತಗಳಲ್ಲಿ ದಾಖಲೆಗಳು ಸಿಕ್ಕಿವೆ.

netaji-bose

ಪಶ್ಚಿಮ ಬಂಗಾಳ ಬಿಡುಗಡೆ ಮಾಡಿದ ನೇತಾಜಿ ದಾಖಲೆಗಳಲ್ಲಿ ಕಡತ ನಂಬರ್ 22ರಲ್ಲಿ ಈ ವಿಚಾರವನ್ನು ಉಲ್ಲೇಖಿಸಲಾಗಿದೆ.

ದಾಖಲೆಯಲ್ಲಿ ಉಲ್ಲೇಖಿಸಿದ ವಿಷಯ: ದಿನಾಂಕ ಆಗಸ್ಟ್ 9, 1948.  ಕಾಂಗ್ರೆಸ್ ವಿರುದ್ಧ ಸಿದ್ಧಾಂತ ಹೊಂದಿರುವ, ಐಎನ್ಎ ಮಾಜಿ ನಾಯಕ  ದೇಬ್ ನಾಥ್ ದಾಸ್ ಎಂಬವರು  ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಚೀನಾದ ಮಂಚೂರಿಯಾ ಎಂಬ್ ಪ್ರದೇಶದ ಎಲ್ಲೋ ಒಂದು ಕಡೆ ವಾಸವಾಗಿದ್ದಾರೆ ಎಂಬ ವಿಷಯವನ್ನು ರಾಜಕೀಯ ವಲಯದಲ್ಲಿ ಹೇಳಿದ್ದಾರೆ.

ವಿಮಾನ ಅಪಘಾತಕ್ಕೆ ಮುನ್ನ ನೇತಾಜಿ ಅವರು ಎರಡನೇ ಮಹಾಯುದ್ಧದ ನಂತರ ಮೂರನೇ ಮಹಾಯುದ್ಧವಾಗುವ ಸಾಧ್ಯತೆ ಇದೆ ಎಂದು ದಾಸ್ ಅವರಲ್ಲಿ ಹೇಳಿದ್ದಾರೆ .

ಬೋಸ್ ಜಪಾನ್ಗೆ ಪ್ರಯಾಣಿಸುತ್ತಿದ್ದ ವೇಳೆ  ಫೊರ್ಮೋಸಾ (ಈಗಿನ ಥೈವಾನ್) ಎಂಬಲ್ಲಿ ಆಗಸ್ಟ್ 18, 1945ರಂದು ಸಂಭವಿಸಿದ ವಿಮಾನ ಅಪಘಾತದಲ್ಲಿ ನೇತಾಜಿ ಸತ್ತಿದ್ದಾರೆ ಎಂದು ಆಗಸ್ಟ್  22, 1945ರಂದು ಟೋಕಿಯೋ ರೇಡಿಯೋಸುದ್ದಿ ಬಿತ್ತರಿಸಿತ್ತು.

ಆದರೆ ಬೋಸ್ ಬೆಂಬಲಿಗರು ಅಪಘಾತದಲ್ಲಿ ಬೋಸ್ ಸತ್ತಿರುವ ವಿಷಯವನ್ನು ಒಪ್ಪುತ್ತಿರಲಿಲ್ಲ. ಬೋಸ್ ಕೆಲ ಕಾಲ ಅಜ್ಞಾತವಾಸದಲ್ಲಿದ್ದರು ಎಂಬುದು ಬೆಂಬಲಿಗರ ವಾದ. ಈ ವಾದಕ್ಕೆ ಪುಷ್ಠಿ ನೀಡುವಂತಿದೆ ದಾಸ್ ಹೇಳಿಕೆಗಳು. ದಾಸ್ ಹೇಳುವ ಪ್ರಕಾರ ಬೋಸ್ ಅವರು 1948ರ ವರೆಗೆ ಬದುಕಿದ್ದು, ದೇಶದ ಆಗುಹೋಗುಗಳ ಬಗ್ಗೆ ತಿಳಿಯುತ್ತಿದ್ದರು ಎಂದು ದಾಸ್ ಹೇಳಿರುವುದಾಗಿ ದಾಖಲೆಗಳಲ್ಲಿ ಉಲ್ಲೇಖವಿದೆ.


Spread the love