Home Mangalorean News Kannada News ನೇತ್ರಾವತಿ ನದಿಗೆ ಯಾರೋ ಹಾರಿದ್ದನ್ನು ನೋಡಿದ್ದಾಗಿ ತಿಳಿಸಿದ ಪ್ರತ್ಯಕ್ಷದರ್ಶಿ – ಸೈಮನ್‌ ಡಿಸೋಜಾ

ನೇತ್ರಾವತಿ ನದಿಗೆ ಯಾರೋ ಹಾರಿದ್ದನ್ನು ನೋಡಿದ್ದಾಗಿ ತಿಳಿಸಿದ ಪ್ರತ್ಯಕ್ಷದರ್ಶಿ – ಸೈಮನ್‌ ಡಿಸೋಜಾ

Spread the love

ನೇತ್ರಾವತಿ ನದಿಗೆ ಯಾರೋ ಹಾರಿದ್ದನ್ನು ನೋಡಿದ್ದಾಗಿ ತಿಳಿಸಿದ ಪ್ರತ್ಯಕ್ಷದರ್ಶಿ – ಸೈಮನ್‌ ಡಿಸೋಜಾ

ಮಂಗಳೂರು: ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ್‌ ವ್ಯಾವಹಾರಿಕವಾಗಿ ನಷ್ಟ ಅನುಭವಿಸಿದ್ದರಿಂದ ನೊಂದು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತವಾಗಿರುವ ಬೆನ್ನಲ್ಲೇ ಸೋಮವಾರ ಉಳ್ಳಾಲದ ಸೇತುವೆಯ 8ನೇ ಪಿಲ್ಲರ್‌ ಮೇಲಿಂದ ವ್ಯಕ್ತಿಯೊಬ್ಬ ನದಿಗೆ ಹಾರಿದ್ದನ್ನು ಕಂಡಿರುವುದಾಗಿ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಈ ಕುರಿತು  ಮಾತನಾಡಿದ ಸೈಮನ್‌ ಡಿಸೋಜಾ ಎಂಬುವರು, 7 ಗಂಟೆ ಸುಮಾರಿಗೆ ವ್ಯಕ್ತಿಯೊಬ್ಬ ನದಿಗೆ ಹಾರಿದ್ದಾನೆ. 6 ನೇ ಪಿಲ್ಲರ್ ನ ಕೆಳಭಾಗದಲ್ಲಿ ಮೀನುಗಾರಿಕೆ ಮಾಡುವಾಗ ಸೇತುವೆಯ 8ನೇ ಪಿಲ್ಲರ್ ಮೇಲಿನಿಂದ ಹಾರಿದ್ದು ತಿಳಿಯಿತು. ರಕ್ಷಣೆ ಮಾಡುವ ಪ್ರಯತ್ನ ಮಾಡಿದ್ದೆ. ಆದರೆ ಅಷ್ಟರಲ್ಲೇ ವ್ಯಕ್ತಿ ನೀರಿನಲ್ಲಿ ಮುಳುಗಿಯಾಗಿತ್ತು. ಈ ವಿಚಾರವನ್ನು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.

ಮೊದಲೇ ನದಿಗೆ ಹಾರಿ ಪ್ರಾಣ ಬಿಟ್ಟಿರಬಹುದು ಎನ್ನುವ ಶಂಕೆ ಮೇರೆಗೆ ರಕ್ಷಣಾ ಕಾರ್ಯಾಚರಣೆಯು ಭರದಿಂದ ಸಾಗುತ್ತಿದ್ದು, ಇದುವರೆಗೂ ಸಿದ್ಧಾರ್ಥ್‌ ಸುಳಿವು ಪತ್ತೆಯಾಗಿಲ್ಲ.

ರಕ್ಷಣಾ ಕಾರ್ಯದಲ್ಲಿ ಕೋಸ್ಟ್ ಗಾರ್ಡ್, ಎನ್‌ಡಿಆರ್‌ಎಫ್, ಗೃಹರಕ್ಷಕದಳ, ಅಗ್ನಿಶಾಮಕದಳ ಸೇರಿದಂತೆ 100ಕ್ಕೂ ಅಧಿಕ ಮಂದಿ ಭಾಗಿಯಾಗಿದ್ದಾರೆ. ಕರಾವಳಿ ರಕ್ಷಣಾ ಪಡೆ ಮತ್ತು ನೌಕಪಡೆಯ ನೆರವು ಸಹ ಪಡೆಯಲಾಗುತ್ತಿದೆ. ಸ್ಥಳಕ್ಕೆ ಮುಳುಗುತಜ್ಞರು ಆಗಮಿಸಿದ್ದು, ಸ್ಥಳೀಯ ಮೀನುಗಾರರು ಸೇರಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ.


Spread the love

Exit mobile version