ನೇತ್ರಾವತಿ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ತಂದೆ ಮಗನ ಮೃತ ದೇಹ ಪತ್ತೆ
ಉಡುಪಿ: ದಕ್ಷಿಣ ಕನ್ನಡದ ಉಳ್ಳಾಲದಲ್ಲಿ ನದಿಗೆ ಹಾರಿದ್ದ ತಂದೆ -ಮಗ ಶವ ಸುಮಾರು ಐವತ್ತು ಕಿ.ಮೀ ದೂರದ ಉಡುಪಿ ಜಿಲ್ಲೆಯ ಕಟಪಾಡಿ ಮಟ್ಟು ಸಮುದ್ರ ಕಿನಾರೆ ಬಳಿ ಪತ್ತೆಯಾಗಿದೆ.
ಫೆಬ್ರವರಿ 16 ರ ಮುಂಜಾನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ತಂದೆ ಹಾಗೂ ಆರು ವರ್ಷದ ಪುತ್ರ ರಾಷ್ಟ್ರೀಯ ಹೆದ್ದಾರಿ 66 ರ ನೇತ್ರಾವತಿ ಸೇತುವೆ ಬಳಿ ನಾಪತ್ತೆಯಾಗಿದ್ದರು.
ನಾಪತ್ತೆಯಾದವರನ್ನು ಬಂಟ್ವಾಳದ ಬಾಳ್ತಿಲ ಶಂಭೂರು ಚರ್ಚ್ ಬಳಿಯ ನಿವಾಸಿ ಗೋಪಾಲಕೃಷ್ಣ ರೈ(45), ಹಾಗೂ ಅವರ ಪುತ್ರ ಅನೀಶ್ ರೈ(6) ಎಂದು ಗುರುತಿಸಲಾಗಿತ್ತು.
ಪ್ರಸ್ತುತ ಮುಂಬೈಯಲ್ಲಿ ನೆಲೆಸಿರುವ ಗೋಪಾಲಕೃಷ್ಣ ರೈ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಎರಡು ದಿನಗಳ ಹಿಂದೆ ಮುಂಬಯಿಯಿಂದ ಕೊಣಾಜೆಯ ಪಾವೂರಿಗೆ ಸಂಬಂಧಿಕರ ಮನೆಗೆ ನೇಮಕ್ಕೆ ಬಂದಿದ್ದರು. ಭಾನುವಾರ ನಸುಕಿನ ಜಾವ 4.30 ರ ವೇಳೆ ಮಗ ಅನೀಶ್ ರೈ ಯೊಂದಿಗೆ ಗೋಪಾಕೃಷ್ಣ ರೈ ಅವರು ಕಾರು ಚಲಾಯಿಸಿ ಮನೆಯಿಂದ ಹೊರಗೆ ಹೊರಟಿದ್ದರು. ಈ ಕಾರು ಫೆಬ್ರವರಿ ಹದಿನಾರರಂದು ಭಾನುವಾರ ಬೆಳಗ್ಗಿನ ಜಾವ ಉಳ್ಳಾಲ ನೇತ್ರಾವತಿ ಸೇತುವೆ ಬಳಿ ಪತ್ತೆಯಾಗಿತ್ತು.ನೇತ್ರಾವತಿ ಸೇತುವೆಯಲ್ಲಿ ಕಾರು ನಿಂತಿದ್ದು ವಾಹನದಲ್ಲಿ ಯಾರೂ ಇಲ್ಲದ್ದು ನೋಡಿ ಸಾರ್ವಜನಿಕರು ಪೋಲಿಸರಿಗೆ ಮಾಹಿತಿ ನೀಡಿದ್ದರು.
‘ತನಗೆ ಒಂದು ವಾರದಿಂದ ನಿದ್ರೆ ಬರುತ್ತಿಲ್ಲ. ನಾನೊಬ್ಬ ಮಗನನ್ನು ಕೊಲ್ಲುವ ಮಹಾ ಪಾಪಿ. ಇದಕ್ಕಾಗಿ ನನ್ನ ಕ್ಷಮಿಸಿರಿ.ಪತ್ನಿ ಅಶ್ವಿನಿ ರೈ….. ನಿನ್ನ ಬಿಟ್ಟು ಇಬ್ಬರೂ ದೂರ ಹೋಗುತ್ತಿರುವುದಾಗಿ’ ಡೆತ್ ನೋಟ್ ಬರೆದಿಟ್ಟದ್ದೂ ಪತ್ತೆಯಾಗಿತ್ತು.
ಮಂಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹಕ್ಕಾಗಿ ರಾತ್ರಿ ಹಗಲು ಶೋಧಕಾರ್ಯ ನಡೆಸಿದ್ದರು.
ಆದರೂ ಯಾವುದೇ ಕುರುಹುಗಳು ಪತ್ತೆಯಾಗಿರಲಿಲ್ಲ. ಶುಕ್ರವಾರ ಕಟಪಾಡಿ ಸಮೀಪ ತಂದೆ ಮಗನ ಶವ ಕೊಳೆಯ ಸ್ಥಿತಿಯಲ್ಲಿ ಒಟ್ಟಿಗೇ ಸಿಕ್ಕಿದ್ದು ಶನಿವಾರ ಬೆಳಿಗ್ಗೆ ಗೋಪಾಲಕೃಷ್ಣ ರೈ ಅವರ ಕುಟುಂಬಿಕರು ಉಡುಪಿಗೆ ಆಗಮಿಸಿ ಶವದ ಗುರುತನ್ನು ಪತ್ತೆಹಚ್ಚಿದ್ದಾರೆ.
ಉಡುಪಿಯ ಅಜ್ಜರಕಾಡು ಶವಾಗಾರದಲ್ಲಿ ಶವಗಳ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಕುಟುಂಬಿಕರಿಗೆ ಹಸ್ತಾಂತರಿಸಲಾಗಿದೆ.
ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.