“ನೋಟ್ ಬ್ಯಾನ್ ಮಹಾ ಮೋಸದ ಬಗ್ಗೆ ಮೋದಿ ಕ್ಷಮೆ ಕೋರಲಿ”-ಮೊಯಿನುದ್ದೀನ್ ಖಮರ್
ಮಂಗಳೂರು: ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರಕಾರವು ಕಳೆದ ನವೆಂಬರ್ 8ರಂದು ಅಚಾನಕ್ಕಾಗಿ ನೋಟು ಅಪಮೌಲೀಕರಣಗೊಳಿಸಿದ ಮಹಾ ಮೋಸದ ವಿರುದ್ಧ ವೆಲ್‍ಫೇರ್ ಪಾರ್ಟಿ ಆಫ್ ಇಂಡಿಯಾ, ದಕ್ಷಿಣ ಕನ್ನಡ ಜಿಲ್ಲಾ ಘಟಕವು ಇಂದು ನಗರದ ಡಿ.ಸಿ.ಕಚೇರಿ ಮುಂಭಾಗದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು.
ಪ್ರತಿಭಟನೆಯನ್ನುದ್ದೇಶಿಸಿ ಪಕ್ಷದ ದ.ಕ. ಜಿಲ್ಲಾಧ್ಯಕ್ಷ ಮೊಯಿನುದ್ದೀನ್ ಖಮರ್ ಮಾತಾಡುತ್ತಾ, “ಮೋದಿ ಸರಕಾರವು ಏಕಾಏಕಿ ನೋಟ್‍ಬಂದಿ ಮಾಡಿದನ್ನು, ಈ ದೇಶದ ಹಿರಿಯ ಆರ್ಥಿಕ ತಜ್ಞರೇ ವಿರೋಧಿಸಿದ್ದಾರೆ. ಇದೊಂದು ಸಾಮೂಹಿಕ ಲೂಟಿ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡಾ ಧ್ವನಿ ಎತ್ತಿದ್ದಾರೆ. ಅಲ್ಲದೆ, ದೇಶದ ಆರ್ಥಿಕತೆ ಅತ್ಯಂತ ಕೆಳಮಟ್ಟಕ್ಕೆ ಹೋಗಿರುವುದು, ಜಿಡಿಪಿ. ಸೂಚ್ಯಂಕ ತಳಮಟ್ಟಕ್ಕೆ ತಲುಪಿರುವುದು- ಇದೆಲ್ಲಾ ಮೋದಿ ದೇಶವನ್ನು 25 ವರ್ಷ ಹಿಂದೆ ತಳ್ಳಿರುವುದರ ಸೂಚನೆಯಾಗಿದೆ. ಸಾಮಾನ್ಯ ಜನರಿಗೆ ಅತ್ಯಂತ ಪ್ರಯಾಸವಾಗಿ ಪರಿಣಮಿಸಿದ ಈ ನೋಟ್‍ಬಂದಿಯ ಪ್ರಯೋಜನ, ಮೋದಿ ಮತ್ತು ಬಿಜೆಪಿಯ ಆಪ್ತರಿಗಷ್ಟೇ ಆಗಿರುವುದು ಮಾಧ್ಯಮಗಳಲ್ಲೇ ಬಂದಿದೆ. ಆದ್ದರಿಂದ ಮೋದಿ ನೇತೃತ್ವದ ಎನ್.ಡಿ.ಎ.ಸರಕಾರ ದೇಶದ ಜನರಲ್ಲಿ ಕ್ಷಮೆಯನ್ನು ಕೇಳಲಿ” ಎಂದರು.
ಬಳಿಕ ಪ್ರತಿಭಟನೆಯನ್ನುದ್ದೇಶಿಸಿ, ಪಕ್ಷದ ಮಂಗಳೂರು ದಕ್ಷಿಣ ವಿಭಾಗದ ಅಧ್ಯಕ್ಷರಾದ ಸರ್ಫರಾಝ್ ಅಡ್ವೋಕೇಟ್ ಮಾತಾಡಿದರು. ಜಿಲ್ಲೆಯ ಸಮಾಜ ಸೇವಕ ಇರ್ಷಾದ್ ವೇಣೂರು ಕೂಡಾ ಈ ಸಂದರ್ಭದಲ್ಲಿ ಮಾತನಾಡಿದರು.