ನ್ಯಾಯಿಕ ಪರಿಕಲ್ಪನೆ ಇರುವ ವ್ಯಕ್ತಿಗಳ ಸಾಲಿನಲ್ಲಿ ಬಸ್ರೂರು ಅಪ್ಪಣ್ಣ ಹೆಗ್ಡೆಯವರದು ಎತ್ತರದ ಸ್ಥಾನ: ಡಾ. ಎಮ್ ಮೋಹನ್ ಆಳ್ವ

Spread the love

ನ್ಯಾಯಿಕ ಪರಿಕಲ್ಪನೆ ಇರುವ ವ್ಯಕ್ತಿಗಳ ಸಾಲಿನಲ್ಲಿ ಬಸ್ರೂರು ಅಪ್ಪಣ್ಣ ಹೆಗ್ಡೆಯವರದು ಎತ್ತರದ ಸ್ಥಾನ: ಡಾ. ಎಮ್ ಮೋಹನ್ ಆಳ್ವ

ಕುಂದಾಪುರ: ಅಪ್ಪಣ್ಣ ಹೆಗ್ಡೆಯವರು ನಡೆದಾಡುವ ಜ್ಞಾನಭಂಡಾರವಿದ್ದಂತೆ. ಅವರ ಸಾಮಾಜಿಕ ಬದುಕೇ ಒಂದು ಪಠ್ಯ ಶಾಲೆ. ವಿಶಾಲ ಮನೋಧರ್ಮ, ತ್ಯಾಗ, ನಾಯಕತ್ವ, ನ್ಯಾಯಿಕ ಪರಿಕಲ್ಪನೆ ಇರುವ ವ್ಯಕ್ತಿಗಳ ಸಾಲಿನಲ್ಲಿ ಬಸ್ರೂರು ಅಪ್ಪಣ್ಣ ಹೆಗ್ಡೆಯವರದು ಎತ್ತರದ ಸ್ಥಾನ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ, ಬಿ. ಅಪ್ಪಣ್ಣ ಹೆಗ್ಡೆ ಜನ್ಮ ದಿನೋತ್ಸವ ಸಮಿತಿಯ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ ಹೇಳಿದರು.

ವಕ್ವಾಡಿ ಗುರುಕುಲ‌ ಪಬ್ಲಿಕ್ ಸ್ಕೂಲ್ ನಲ್ಲಿ ಬುಧವಾರ ನಡೆದ ‘ಅಪ್ಪಣ್ಣ ಹೆಗ್ಡೆ-90’ ಕಾರ್ಯಕ್ರಮದ ಕಾರ್ಯಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿರಿಯರಾದ ಬಸ್ರೂರು ಅಪ್ಪಣ್ಣ ಹೆಗ್ಡೆಯವರದು ಜಾತಿ, ಮತ, ಊರನ್ನು ಮೀರಿದ ವ್ಯಕ್ತಿತ್ವ. ಅವರ ಜನ್ಮ ದಿನವನ್ನು ಮಾದರಿ ಕಾರ್ಯಕ್ರಮವಾಗಿಸುವ ಮೂಲಕ ಸಂಭ್ರಮಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಡಿಸೆಂಬರ್ 24 ರಂದು ನಡೆಯುವ‌ 90ರ ಜನ್ಮದಿನೋತ್ಸವದ ಪೂರ್ವಭಾವಿಯಾಗಿ ಆರೋಗ್ಯ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಕನ್ನಡ ಶಾಲೆಗೆ ರಂಗಮಂದಿರ ನಿರ್ಮಿಸುವ ಗುರಿಯನ್ನು ಇರಿಸಿಕೊಳ್ಳಲಾಗಿದೆ. ದಣಿವರಿಯದ ವ್ಯಕ್ತಿಯ ವ್ಯಕ್ತಿತ್ವವನ್ನು ಊರಿಗೆ ಊರೇ ಸಂಭ್ರಮಿಸುವ ಮಾದರಿ ಕಾರ್ಯಕ್ರಮ ಇದಾಗಬೇಕು. ರಾಜಕೀಯ‌ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರೂ ಆ ಕ್ಷೇತ್ರಕ್ಕೆ ಅಪಥ್ಯ ಎನ್ನುವಂತೆ ಬದುಕನ್ನು ರೂಪಿಸಿಕೊಂಡವರು ಅವರು. ಪ್ರಾಮಾಣಿಕತೆ, ಸತ್ಯ ಸಂದೋಹ ಹಾಗೂ ನಿತ್ಯ ಕಾಯಕಗಳಲ್ಲಿ ಇತರರಿಗೆ ಮೇಲ್ಪಂಕ್ತಿಯಾಗುವ ವ್ಯಕ್ತಿತ್ವ ಹೆಗ್ಡೆಯವರದು ಎಂದರು.

ಸಮಾಜಕ್ಕೆ ಬದುಕನ್ನು ಮೀಸಲಿಟ್ಟ ವ್ಯಕ್ತಿಗಳ ನೆನಪನ್ನು‌ ಮತ್ತೆ-ಮತ್ತೆ ನೆನಪು ಮಾಡಿಕೊಳ್ಳುವುದರಿಂದ ಸಮಾಜದ ಗೌರವ ಹೆಚ್ಚಾಗುತ್ತದೆ ಈ ನಿಟ್ಟಿನಲ್ಲಿ ಬಸ್ರೂರು ಅಪ್ಪಣ್ಣ ಹೆಗ್ಡೆಯವರ ವ್ಯಕ್ತಿತ್ವ ಹಾಗೂ ಸಾಮಾಜಿಕ ಬದುಕು ಆದರ್ಶಪ್ರಾಯವಾಗಿದೆ ಎಂದು ಅವರು ಹೇಳಿದರು.

ಕೋಟ ಗೀತಾನಂದ ಫೌಂಡೇಶನ್‌ನ ಪ್ರವರ್ತಕ ಆನಂದ ಸಿ. ಕುಂದರ್ ಮಾತನಾಡಿ, ಅನೇಕ ಶಿಕ್ಷಣ ಸಂಸ್ಥೆಗಳ ಹಾಗೂ ದೇವಸ್ಥಾನಗಳ ನಿರ್ಮಾಣದ ಬಗೀರಥರಂತೆ ಸೇವೆ ಸಲ್ಲಿಸಿದ ಬಸ್ರೂರು ಅಪ್ಪಣ್ಣ ಹೆಗ್ಡೆಯವರು ಸಮಾಜಕ್ಕೆ ಉಪಯೋಗವಾಗುವ ಎಲ್ಲಾ ಕ್ಷೇತ್ರಗಳಲ್ಲೂ ಸೈ ಎನಿಸಿಕೊಂಡಿದ್ದಾರೆ. ನಾಗಮಂಡಲ ಸೇರಿದಂತೆ ಅಪ್ಪಣ್ಣ ಹೆಗ್ಡೆಯವರು ಭಾಗಿಯಾಗಿಲ್ಲ ಎಂದರೆ ಅದೊಂದು ಕಾರ್ಯಕ್ರಮವೇ ಅಲ್ಲಾ ಎನ್ನುವ ಅನ್ವರ್ಥಕಗಳನ್ನು ಪಡೆದುಕೊಂಡಿದ್ದಾರೆ. ಅವರ 90 ವರ್ಷದ ಹುಟ್ಟುಹಬ್ಬದ ಕಾರ್ಯಕ್ರಮ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಅಪ್ಪಣ್ಣ ಹೆಗ್ಡೆಯವರ ಹೆಸರನ್ನು ಚಿರಸ್ಥಾಯಿಯನ್ನಾಗಿಸುವ ಗುರಿಯಲ್ಲಿ‌ ನಾವೆಲ್ಲಾ ಮುನ್ನಡೆಯಬೇಕು. ಸಮಾಜಕ್ಕಾಗಿ ಬದುಕಿ ಬಾಳುತ್ತಿರುವವರ ಋಣವನ್ನು ಕಿಂಚಿತ್ತಾದರೂ ತೀರಿಸುವ ಬದ್ದತೆಯನ್ನು ಇರಿಸಿಕೊಳ್ಳೋಣ ಎಂದರು.

ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ರಾಮ್‌ರತನ್ ಹೆಗ್ಡೆ, ರಾಮ್ ಕಿಶನ್ ಹೆಗ್ಡೆ, ಅನುಪಮಾ ಎಸ್ ಶೆಟ್ಟಿ, ಪ್ರೀತಮ್ ಎಸ್ ರೈ, ಸುಶಾಂತ್ ರೈ, ಗುರುಕುಲ ವಿದ್ಯಾಸಂಸ್ಥೆಯ ಜಂಟಿ ಕಾರ್‍ಯನಿರ್ವಾಹಕರಾದ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ, ಉದ್ಯಮಿ ಕಾಪು ಕಿಶೋರ್ ಶೆಟ್ಟಿ, ಉದಯ್ ಕುಮಾರ್ ಶೆಟ್ಟಿ ಪಡುಕೆರೆ, ಪತ್ರಕರ್ತ ಯು.ಎಸ್ ಶೆಣೈ ಇದ್ದರು.

ಅಪ್ಪಣ್ಣ ಹೆಗ್ಡೆ ಜನ್ಮ ದಿನೋತ್ಸವ ಸಮಿತಿಯ ವಸಂತ್ ಗಿಳಿಯಾರ್ ಸ್ವಾಗತಿಸಿದರು. ಶ್ರೀಕಾಂತ ಹೆಮ್ಮಾಡಿ ವಂದಿಸಿದರು. ಗುರುಕುಲ ವಿದ್ಯಾಸಂಸ್ಥೆಯ ವಿಶಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


Spread the love