ನ. 30: ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಚಾಲನೆ
ಉಡುಪಿ: ಭಾರತದಾದ್ಯಂತ ನವೆಂಬರ್ 15 ರಿಂದ ಜನವರಿ 26 ರವರೆಗೆ ನಡೆಯುತ್ತಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಉಡುಪಿಯಲ್ಲಿ ನವೆಂಬರ್ 30 ರಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರು ಚಾಲನೆ ನೀಡಲಿದ್ದಾರೆ.
ಉಡುಪಿಯ ಅಂಬಲಪಾಡಿ ಗ್ರಾಮ ಪಂಚಾಯತ್ ಆವರಣದಲ್ಲಿ ಬೆಳಗ್ಗೆ 10.00 ಕ್ಕೆ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೇರಪ್ರಸಾರದ ಮೂಲಕ ಸಮಾರಂಭವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಉಡುಪಿ ಜಿಲ್ಲೆಯ ಎಲ್ಲಾ ಶಾಸಕರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಕೇಂದ್ರ ಸರ್ಕಾರದ 70ಕ್ಕೂ ಹೆಚ್ಚು ಯೋಜನೆಗಳ ಪೈಕಿ 17 ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿಯನ್ನು ಒದಗಿಸುವುದು ಈ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮುಟ್ಟಿಸುವುದು, ಈವರೆಗೆ ಪ್ರಯೋಜನ ಪಡೆಯದ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಯೋಜನೆಗಳನ್ನು ತಲುಪಿಸುವುದು ಈ ಯಾತ್ರೆಯ ಉದ್ದೇಶವಾಗಿದೆ.
ಈ ಯಾತ್ರೆಯಲ್ಲಿ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ವಾಹನ ಉಡುಪಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸಂಚರಿಸಲಿದ್ದು, ಎಲ್ ಇ ಡಿ ಪರದೆಯ ಮೂಲಕ ಯೋಜನೆಗಳ ಮಾಹಿತಿಯನ್ನು ನೀಡಲಾಗುವುದು.
ಆಯುಷ್ಮಾನ್ ಭಾರತ್, ಪಿಎಂ ಉಜ್ವಲ ಯೋಜನೆ, ಪಿಎಂ ಕಿಸಾನ್ ಸಮ್ಮಾನ್, ಜನಧನ್ ಯೋಜನಾ, ಸುರಕ್ಷಾ ಬಿಮಾ ಯೋಜನೆಗಳು ಸೇರಿದಂತೆ 17 ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುವುದು.
ಬ್ಯಾಂಕ್ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡುವುದಲ್ಲದೇ ಸ್ಥಳದಲ್ಲೇ ಆಯ್ದ ಫಲಾನುಭವಿಗಳಿಗೆ ಆದೇಶ ಪತ್ರಗಳನ್ನು ನೀಡಲಾಗುವುದು.
ಈಗಾಗಲೇ ಪ್ರಯೋಜನ ಪಡೆದಿರುವ ಫಲಾನುಭವಿಗಳು ಮೇರಾ ಕಹಾನಿ ಮೇರಾ ಜುಬಾನಿ ಎನ್ನುವ ಕಾರ್ಯಕ್ರಮದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.
ಸಮಾರಂಭದಲ್ಲಿ ಸಾರ್ವಜನಿಕರು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕೇಂದ್ರ ಸರಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ಶಾಸಕ ಯಶ್ ಪಾಲ್ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.