ಪಟಾಕಿ ತುಂಬಿದ್ದ ಅನಾನಸು ನೀಡಿದ ಕಿಡಿಗೇಡಿಗಳು: ಸ್ಫೋಟದಿಂದ ಗಾಯಗೊಂಡು ನದಿ ನೀರಲ್ಲೇ ಅಸುನೀಗಿದ ಗರ್ಭಿಣಿ ಆನೆ
ಕೊಚ್ಚಿ ( ವಾಭಾ): ಸ್ಥಳೀಯ ಜನರು ಪಟಾಕಿಗಳು ತುಂಬಿದ್ದ ಅನಾನಸನ್ನು ಗರ್ಭಿಣಿ ಆನೆಯೊಂದಕ್ಕೆ ನೀಡಿದ್ದು, ಅದು ಸ್ಫೋಟಗೊಂಡ ಪರಿಣಾಮ ಗರ್ಭಿಣಿ ಆನೆ ಮೃತಪಟ್ಟ ಘಟನೆ ಕೇರಳದಲ್ಲಿ ನಡೆದಿದೆ. ಆನೆ ಅನಾನಸು ತಿನ್ನುತ್ತಿದ್ದಾಗ ಪಟಾಕಿ ಸ್ಫೋಟಗೊಂಡಿದ್ದು, ಗಂಭೀರ ಗಾಯಗಳಾಗಿತ್ತು ಎಂದು ತಿಳಿದುಬಂದಿದೆ.
ಮಲಪ್ಪುರಂ ಜಿಲ್ಲೆಯ ಅರಣ್ಯಾಧಿಕಾರಿಯೊಬ್ಬರು ಈ ಬಗ್ಗೆ ಫೇಸ್ ಬುಕ್ ಪೋಸ್ಟ್ ಹಾಕಿದ ನಂತರ ಘಟನೆ ಬೆಳಕಿಗೆ ಬಂದಿದೆ.
ಆಹಾರ ಅರಸಿ ಕಾಡಿನಿಂದ ಬಂದಿದ್ದ ಗರ್ಭಿಣಿ ಆನೆ ಸ್ಥಳೀಯ ಗ್ರಾಮಕ್ಕೆ ಬಂದಿತ್ತು. ಅದು ಗ್ರಾಮದ ಬೀದಿಯಲ್ಲಿ ನಡೆಯುತ್ತಿರುವಾಗ ಕೆಲ ಕಿಡಿಗೇಡಿಗಳು ಪಟಾಕಿ ತುಂಬಿದ್ದ ಅನಾನಸು ನೀಡಿದ್ದರು.
‘ಆಕೆ ಎಲ್ಲರನ್ನೂ ನಂಬಿದ್ದಳು. ಆಕೆ ಅನಾನಸು ತಿಂದಾಗ ಅದು ಸ್ಫೋಟಗೊಂಡಿತ್ತು. ಆಕೆ ತನ್ನ ಬಗ್ಗೆ ಯೋಚಿಸಿ ಆಘಾತಗೊಂಡಿರಲಿಕ್ಕಿಲ್ಲ. ಆದರೆ ಜನ್ಮ ನೀಡಬೇಕಿದ್ದ 18 -20 ತಿಂಗಳ ಮಗುವನ್ನು ನೆನೆದು ಆಘಾತಗೊಂಡಿರಬಹುದು’ ಎಂದು ಅರಣ್ಯಾಧಿಕಾರಿ ಮೋಹನ್ ಕೃಷ್ಣನ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಸ್ಫೋಟದ ತೀವ್ರತೆಗೆ ಆನೆಯ ಬಾಯಿ ಮತ್ತು ನಾಲಗೆಗೆ ಗಂಭೀರ ಗಾಯಗಳಾಗಿತ್ತು. ಹಸಿವು ಮತ್ತು ನೋವಿನಿಂದ ಆನೆ ಗ್ರಾಮವಿಡೀ ನಡೆದಿತ್ತು. ಗಂಭೀರ ಗಾಯಗಳ ಕಾರಣ ಏನನ್ನೂ ತಿನ್ನಲು ಕೂಡ ಸಾಧ್ಯವಾಗುತ್ತಿರಲಿಲ್ಲ.
‘ನೋವಿನಿಂದ ಚಡಪಡಿಸಿ ಆಕೆ ಗ್ರಾಮವಿಡೀ ಓಡಿದರೂ ಯಾರಿಗೂ ಹಾನಿ ಮಾಡಿಲ್ಲ. ಯಾವುದೇ ಮನೆಗಳ ಮೇಲೆ ದಾಳಿ ಮಾಡಿಲ್ಲ’ ಎಂದವರು ಹೇಳಿದ್ದಾರೆ.
ನಂತರ ವೆಲ್ಲಿಯಾರ್ ನದಿಗಿಳಿದ ಆನೆ ನೀರಿನಲ್ಲಿ ನಿಂತಿದ್ದು, ಅದರ ಫೋಟೊಗಳು ವೈರಲ್ ಆಗಿವೆ. ನೋವಿನಿಂದ ಸ್ವಲ್ಪವಾದರೂ ಮುಕ್ತಿ ಪಡೆಯಲು ಆನೆ ಈ ರೀತಿ ಮಾಡಿರಬಹುದು ಎನ್ನಲಾಗಿದೆ. ಗಾಯಗಳ ಮೇಲೆ ಕ್ರಿಮಿ, ಕೀಟಗಳ ದಾಳಿಯಿಂದ ಪಾರಾಗಲು ಈ ರೀತಿ ಮಾಡಿದೆ ಎಂದು ಅರಣ್ಯಾಧಿಕಾರಿ ಹೇಳುತ್ತಾರೆ.
ನದಿ ನೀರಿನಿಂದ ಆನೆಯನ್ನು ಹೊರತರಲು ಇನ್ನೆರಡು ಆನೆಗಳನ್ನು ಸ್ಥಳಕ್ಕೆ ಕರೆತರಲಾಯಿತು. ಆದರೆ ಏನನ್ನೂ ಮಾಡಲು ಗಾಯಾಳು ಆನೆ ಬಿಡಲಿಲ್ಲ. ಹಲವು ಗಂಟೆಗಳ ಕಾರ್ಯಾಚರಣೆ ನಡೆಸಿದರೂ ಮೇ 27ರಂದು ಸಂಜೆ 4 ಗಂಟೆಗೆ ಗರ್ಭಿಣಿ ಆನೆ ನದಿ ನೀರಲ್ಲಿ ನಿಂತಲ್ಲೇ ಪ್ರಾಣ ಕಳೆದುಕೊಂಡಿತು.
ನಂತರ ಆನೆಯ ಮೃತದೇಹವನ್ನು ಟ್ರಕ್ ನಲ್ಲಿ ಸಾಗಿಸಿ ಅಂತ್ಯಕ್ರಿಯೆ ನಡೆಸಲಾಗಿದೆ.
ವಾರ್ತಾಭಾರತಿ