ಪಡಿತರ ಚೀಟಿಯನ್ನು ಪಡೆಯಲು ಇರುವ ತಾಂತ್ರಿಕ ಸಮಸ್ಯೆಯನ್ನು ಕೂಡಲೇ ಪರಿಹರಿಸಿ – ಅಶೋಕ್ ಕುಮಾರ್ ಕೊಡವೂರು
ಉಡುಪಿ: ಪಡಿತರ ಚೀಟಿಯನ್ನು ಪಡೆಯಲು ಇರುವ ತಾಂತ್ರಿಕ ಸಮಸ್ಯೆಯನ್ನು ಕೂಡಲೇ ಪರಿಹರಿಸುವಂತೆ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಆಗ್ರಹಿಸಿದ್ದಾರೆ.
ಕಳೆದ ಒಂದು ತಿಂಗಳಿಂದ ರಾಜ್ಯದಾದ್ಯಂತ ಅಂತರ್ಜಾಲ ಸಮಸ್ಯೆಯಿಂದ ಜನರು ಪಡಿತರ ಚೀಟಿ ಪಡೆಯಲು, ಹೊಸ ಆಧಾರ್ ಕಾರ್ಡ್ ಪಡೆಯಲು, ಸರಕಾರಿ ಕೆಲಸಗಳನ್ನು ಮಾಡಲು ಆಗದೆ ತೊಂದರೆಗೆ ಒಳಗಾಗಿದ್ದಾರೆ. ಫೆಬ್ರವರಿ ತಿಂಗಳ 15,16,17,18 ಸತತವಾಗಿ ಸರ್ವರ್ ಇಲ್ಲದೆ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸೋಮವಾರ 17.02.2020ರಂದು ಇಡೀ ರಾಜ್ಯದಲ್ಲಿ ಸರ್ವರ್ ತೊಂದರೆಯಿಂದ “ಭೂಮಿ”ಯ ನೊಂದಣೆ ಕಾರ್ಯ ನಡೆಯದೆ ಸರಕಾರಕ್ಕೆ ಬರುವ ಕಂದಾಯದ ಕೋಟ್ಯಾಂತರ ರೂಪಾಯಿ ಆದಾಯ ನಷ್ಟವಾಗಿದೆ. ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯ ಸರಕಾರಕ್ಕೆ ಇದೊಂದು ಮಾರಕ ಹೊಡೆತ ಎಂದರೆ ತಪ್ಪಾಗಲಾರದು. ಅಂತರ್ಜಾಲದ ಮಿತಿ ಮೀರಿದ ಬಳಕೆ ನಿಮಿತ್ತ ಸರ್ವರ್ ಇಲ್ಲ ಆಗಿದೆಯೇ ? ಇದಕ್ಕೆ ಏನು ಕಾರಣ ಎಂದು ರಾಜ್ಯದ ಮಾಹಿತಿ ತಂತ್ರಜ್ಞಾನ ಸಚಿವರು ಕೂಡಲೇ ಪತ್ರಿಕಾ ಹೇಳಿಕೆ ಕೊಟ್ಟು ತಾಂತ್ರಿಕ ಸಮಸ್ಯೆಯನ್ನು ತಕ್ಷಣ ಸರಿಪಡಿಸಲು ಸರ್ವ ಪ್ರಯತ್ನ ಮಾಡಬೇಕು, ಇಲ್ಲದಿದ್ದಲ್ಲಿ ತಾಲೂಕು ಕಛೇರಿ ಮುಂದೆ ನಾಗರೀಕರೊಂದಿಗೆ ಧರಣಿ ಮಾಡುವುದು ಖಂಡಿತ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ