ಪಣಜಿ: ಮುಂಬೈ ಎರ್ನಾಕುಲಂ ತುರಂತೋ ಎಕ್ಸ್ಪ್ರೆಸ್ (12223) ರೈಲಿನ 10 ಬೋಗಿಗಳು ಗೋವಾದ ಮಡಗಾವ್ ಬಳಿ ಭಾನುವಾರ ಬೆಳಗ್ಗೆ 6.15ರ ಸುಮಾರಿಗೆ ಹಳಿ ತಪ್ಪಿವೆ.
ಮಡಗಾವ್ ಸ್ಟೇಷನ್ನಿಂದ ಹೊರಟ 10 ನಿಮಿಷಗಳಲ್ಲಿ ಅಪಘಾತ ಸಂಭವಿಸಿದ್ದು, ಬಾಲಿ ಸ್ಟೇಷನ್ ಬಳಿ ರೈಲು ಹಳಿ ತಪ್ಪಿದೆ. ರೈಲು ಹಳಿ ತಪ್ಪಿ ಹಳಿ ಪಕ್ಕ ನಿಂತಿದ್ದು ಬೋಗಿಗಳು ಮುಗುಚಿಗೊಳ್ಳದ ಕಾರಣ ಹೆಚ್ಚಿನ ಅನಾಹುತ ಸಂಭವಿಸಿಲ್ಲ ಹಾಗೂ ಇದುವರೆಗೂ ಅಪಘಾತದಲ್ಲಿ ಗಾಯಗೊಂಡವರ ವರದಿ ಬಂದಿಲ್ಲ ಎಂದು ಕೊಂಕಣ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಕೊಣಕಣ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಅಪಘಾತದಿಂದಾಗಿ ಕೊಂಕಣ ರೈಲ್ವೆ ಮಾರ್ಗದಲ್ಲಿ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ. ಹಲವು ರೈಲುಗಳ ಮಾರ್ಗ ಬದಲಿಸಲಾಗುವುದು. ಹಳಿ ತಪ್ಪಿರುವ ರೈಲಿನ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 022-27587939ಗೆ ಸಂರ್ಪಸಬಹುದು.