ಪತ್ರಿಕೆಯೊಂದರ ಹೆಸರನ್ನೊಳಗೊಂಡ ನಕಲಿ ಗುರುತಿನ ಚೀಟಿ ಅಂಟಿಸಿ ವಾಹನ ಚಾಲನೆ: ಆರೋಪಿ ಸೆರೆ
ಮಂಗಳೂರು: ನಕಲಿ ಗುರುತಿನ ಚೀಟಿಯನ್ನು ಅಂಟಿಸಿ ವಾಹನ ಚಲಾಯಿಸುತ್ತಿದ್ದ ಆರೋಪಿಯನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ರವಿವಾರ ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.
ರವಿವಾರ ಸಂಜೆ ಸುಮಾರು 6:45ಕ್ಕೆ ನಗರದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಇನೋವಾ ಕಾರನ್ನು ಸಂಚಾರ ದಕ್ಷಿಣ ಪೊಲೀಸ್ ಇನ್ಸ್ಪೆಕ್ಟರ್ ಪರಿಶೀಲಿಸಿದರು. ಈ ವೇಳೆ ಕಾರಿನ ಹಿಂದೆ ಮತ್ತು ಮುಂದಿನ ಗಾಜಿನಲ್ಲಿ ಇಂಗ್ಲಿಷ್ ಪತ್ರಿಕೆಯೊಂದರ ಹೆಸರನ್ನೊಳಗೊಂಡ ಪ್ರೆಸ್ ಎಂಬ ಸ್ಟಿಕ್ಕರನ್ನು ಅಂಟಿಸಿರುವುದು ಕಂಡು ಬಂತು. ಈ ಕಾರಿನಲ್ಲಿ ಮಾಧ್ಯಮಕ್ಕೆ ಸಂಬಂಧಿಸಿದ ಯಾವುದೇ ವ್ಯಕ್ತಿ ಇಲ್ಲದೆ ಇದ್ದು ಮತ್ತು ಇಂತಹ ತುರ್ತು ಪರಿಸ್ಥಿಯಲ್ಲಿ ಮಾಧ್ಯಮ ಎಂದು ಸುಳ್ಳು ಗುರುತಿನ ಚೀಟಿಯನ್ನು ಅಂಟಿಸಿ ಸಂಚರಿಸುತ್ತಿದ್ದ ವಾಹನವನ್ನು ವಶಕ್ಕೆ ಪಡೆದ ಪೊಲೀಸರು ಆರೋಪಿ ಬೆಂಗಳೂರಿನ ಹುಸೈನ್ ಅಲಿ (58) ಎಂಬಾತನ ವಿರುದ್ಧ ಕ್ರಮ ಜರುಗಿಸಿದ್ದಾರೆ.