ಪತ್ರಿಕೋದ್ಯಮದ ದಿಗ್ಗಜರ ಮಸ್ಕತ್ ಭೇಟಿ

Spread the love

ಪತ್ರಿಕೋದ್ಯಮದ ದಿಗ್ಗಜರ ಮಸ್ಕತ್ ಭೇಟಿ

ಕನ್ನಡ ಪತ್ರಿಕೋದ್ಯಮದ ದಿಗ್ಗಜರನಿಸಿದ ವಿಶ್ವವಾಣಿ ಪತ್ರಿಕೆಯ ಮಾಲೀಕ, ಸಂಪಾದಕ ಶ್ರೀ.ವಿಶ್ವೇಶ್ವರ ಭಟ್ ಮತ್ತು ಕನ್ನಡಪ್ರಭ ಮತ್ತು ಸುವರ್ಣ ಸುದ್ದಿ ವಾಹಿನಿಯ ಸಂಪಾದಕ ರವಿ ಹೆಗ್ಡೆಯವರು ಇತ್ತೀಚೆಗೆ ಮಸ್ಕತ್ತಿಗೆ ಭೇಟಿ ನೀಡಿದ್ದರು. ಅವರ ಭೇಟಿಯನ್ನು ಸದುಪಯೋಗಪಡಿಸಿಕೊಂಡ ಕೋಣಿ ಪ್ರಕಾಶ್ ನಾಯಕ್ ಅವರ ನೇತೃತ್ವದ ಸ್ಪಂದನ ತಂಡವು ಅವರನ್ನು ಸನ್ಮಾನಿಸಿ ಅವರೊಂದಿಗೆ ಸಂವಾದ ಕಾರ್ಯಕ್ರಮವನ್ನು  ಏರ್ಪಡಿಸಿ ಇಲ್ಲಿನ ಕನ್ನಡಿಗರಿಗೆ ಈ ಮೇರು ವ್ಯಕ್ತಿಗಳೊಂದಿಗೆ ಸಮಯ ಕಳೆಯುವ ಸದವಕಾಶವನ್ನು ಒದಗಿಸಿತು

ಇಲ್ಲಿನ ಉಡುಪಿ ಹೋಮ್ ರೆಸ್ಟುರಂಟ್ ನ ಸಭಾಗೃಹದಲ್ಲಿ ನಡೆದ ಚಿಕ್ಕ ಮತ್ತು ಚೊಕ್ಕ ಸಮಾರಂಭದಲ್ಲಿ ಪ್ರಕಾಶ್ ನಾಯಕ್ ಅವರು ಅತಿಥಿಗಳನ್ನು ಹಾಗು ಸಭಿಕರನ್ನು  ಸ್ವಾಗತಿಸಿ ಕಾರ್ಯಕ್ರಮವನ್ನು ಆರಂಭಿಸಿದರು.ಶ್ರೀ ಲಕ್ಷ್ಮಿನಾರಾಯಣ ಆಚಾರ್ಯರ ಶ್ರೀ ದೇವರ ನಾಮಸ್ಮರಣೆಯಿಂದ ಕಾರ್ಯಕ್ರಮಮುಂದುವರಿಯಿತು. ಕಳೆದ ಹಲವಾರು ವರುಷಗಳಿಂದ ಸ್ಪಂದನ ಮಸ್ಕತ್ ನಡೆಸುತ್ತಿರುವ ಚಟುವಟಿಕೆಗಳನ್ನು ಚಿಕ್ಕವಿಡಿಯೋ ತುಣುಕಗಳ ಮೂಲಕ ಆಗಮಿಸಿದ ಅತಿಥಿಗಳಿಗೆ ಪರಿಚಯಿಸಲಾಯಿತು.

ನಂತರ ಅತಿಥಿಗಳಾದ ಶ್ರೀ ವಿಶ್ವೇಶ್ವರ ಭಟ್, ರವಿ ಹೆಗ್ಡೆ, ವಿಶ್ವವಾಣಿ ಪತ್ರಿಕೆಯ ಉಪಸಂಪಾದಕ ಮೋಹನ್ ಕುಮಾರ್ ಮತ್ತು  ಬಹರೈನ್ ಕನ್ನಡ ಸಂಘದ ಪದಾಧಿಕಾರಿ  ಶ್ರೀ ಕಿರಣ್ ಉಪಾಧ್ಯಾಯರನ್ನು ವೇದಿಕೆಯ ಮೇಲೆ ಆಹ್ವಾನಿಸಿ ಶಾಲು ಹೊದಿಸಿ, ಮಸ್ಕತ್ ನ್ ಖರ್ಜೂರದ ಉಡುಗೊರೆ ಕೊಟ್ಟು, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಇತ್ತೀಚೆಗೆ ಮಸ್ಕತ್ತಿಗೆ ಭೇಟಿ ನೀಡಿ ಸ್ಥಳೀಯ ಪ್ರತಿಭೆಗಳ ಗಾಯನವನ್ನು ಧ್ವನಿಮುದ್ರಿಸಿದ್ದ ಕರ್ನಾಟಕದ ಸುಪ್ರಸಿದ್ದ ಸಿನೆಮಾ ನಿರ್ಮಾಪಕ, ನಟ, ಸಂಗೀತಗಾರ ರವಿ ಬಸ್ರೂರು ಅವರ ಸಂಗೀತ ಸಂಯೋಜನೆಯ “ಉಲ್ಲಾಸ ಮತ್ತು ಉತ್ಸಾಹ” (Zeಚಿಟ & Zesಣ ) ಎನ್ನುವ ಧ್ವನಿ ಸುರುಳಿಯನ್ನು ಅತಿಥಿಗಳಿಂದ ವಿಧ್ಯುಕ್ತವಾಗಿ ಲೋಕಾರ್ಪಣೆಗೊಳಿಸಲಾಯಿತು.

 ನಂತರ ವೇದಿಕೆಗೆ ಬಂದ ಶ್ರೀಮತಿ ಕವಿತಾ ರಾಮಕೃಷ್ಣ ಅವರು ಅತಿಥಿಗಳ ಕಿರು ಪರಿಚಯ ನೀಡಿ ಅತಿಥಿಗಳೊಡನೆ ಸಂವಾದವನ್ನು ಆರಂಭಿಸಿ ಕಾರ್ಯಕ್ರಮವನ್ನು ಸುಂದರವಾಗಿ ನಡೆಸಿಕೊಟ್ಟರು. ಈ ಸಂವಾದವು  ವಿಶ್ವೇಶ್ವರ ಭಟ್ಟರ, ರವಿ ಹೆಗ್ಡೆಯವರ ಬಾಲ್ಯವನ್ನು; ಅವರ ಪರಿವಾರವು ಅವರಿಗಾಗಿ ಮಾಡಿರುವ ತ್ಯಾಗವನ್ನು; ಸಂಪಾದಕರಾಗಿ ಅವರು ಇದಿರಿಸುವ ಸಮಸ್ಯೆಗಳನ್ನು; ಪತ್ರಿಕೋದ್ಯಮದ ಹಲವು ಮಜಲುಗಳನ್ನು -ಸಭಿಕರ ಮುಂದಿಟ್ಟಿತು.

ವಿಶ್ವೇಶ್ವರ್ ಭಟ್ ಅವರು ಒಮಾನಿನ ಸೌಂದರ್ಯವನ್ನು ವರ್ಣಿಸಿ ಮಸ್ಕತ್ ಕನ್ನಡಿಗರಿಗೆ ಈ ಸುಂದರ ದೇಶದ ಬಗೆಗೆ ಬರೆಯುವಂತೆ ಪ್ರೇರೇಪಿಸಿದರು. ರವಿ ಹೆಗ್ಡೆಯವರು ಅನಿವಾಸಿ ಕನ್ನಡಿಗರ ಕನ್ನಡಪರ ಚಟುವಟಿಕೆಗಳನ್ನು ಶ್ಲಾಘಿಸಿ ಕನ್ನಡಪ್ರಭ ಮತ್ತು  ಸುವರ್ಣ ವಾಹಿನಿಯ ಮೂಲಕ ಅನಿವಾಸಿ ಕನ್ನಡಿಗರಿಗೆ ಮೀಸಲಾದ ವಿಶೇಷ ಆವೃತ್ತಿಯನ್ನು 2019ರ ಜನವರಿ ಒಂದರಿಂದ ಆರಂಭಿಸುತ್ತಿರುವುದಾಗಿ ಘೋಷಿಸಿದರು. ಕಿರಣ್ ಉಪಾಧ್ಯಾಯ ಮತ್ತು ಮೋಹನ್ ಕುಮಾರ್ ರವರು ಮಾತನಾಡಿ ಸಂಪಾದಕ ದ್ವಯರ ವ್ಯಕ್ತಿತ್ವಗಳ ಮೇಲೆ ಹೆಚ್ಚಿನ ಬೆಳಕನ್ನು ಚೆಲ್ಲಿ ಸಂವಾದವನ್ನು ಇನ್ನಷ್ಟು ರಸವತ್ತಾಗಿಸಿ ಪರಿಣಮಿಸಿದರು.

ಸಂವಾದದ ನಂತರ ಸ್ಥಳೀಯ ಪ್ರತಿಭೆಗಳ ಕೆರೋಕೆ ಗಾಯನದೊಂದಿಗೆ ಏರ್ಪಡಿಸಿದ ರುಚಿಕರ ಭೋಜನ ಕಾರ್ಯಕ್ರಮದ ಕಳೆಯನ್ನು ಹೆಚ್ಚಿಸಿತು. ವಾಲ್ಟರ್ ಮೆಂಡೋನ್ಸ ಅವರು ಕಾರ್ಯಕ್ರಮವನ್ನುಅಚ್ಚುಕಟ್ಟಾಗಿನಿರೂಪಿಸಿದರು. ಕಾರ್ಯಕ್ರಮದಲ್ಲಿ ಬ್ಯಾಂಕ್ ಮಸ್ಕತ್ತಿನ ಶ್ರೀ ಜಿ.ವಿ.ರಾಮಕೃಷ್ಣ,  ಎಸ್.ಟಿ.ಎಸ ನ.. ಶ್ರೀಗಣೇಶ್ ಶೆಟ್ಟಿ, ರೆಡ್ ರೋಜ್ ಸಂಸ್ಥೆಯ ಶ್ರೀಎಸ್.ಕೆ.ಪೂಜಾರಿ, ಮತ್ತು ಶ್ರೀಲಕ್ಷ್ಮ್ಮಿ ನಾರಾಯಣ  ಆಚಾರ್ಯ  ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಸ್ಪಂದನ ಮಸ್ಕತ್ ತಂಡದ ಪದಾಧಿಕಾರಿಗಳಾದ ಪ್ರಕಾಶ್ನಾಯಕ್,  ನಾಗೇಶ್ಶೆಟ್ಟಿ, ಝುಬೈರ್ ಅಹ್ಮದ್,  ಉಮೇಶ್ ಬಂಟ್ವಾಳ್, ಮತ್ತು   ಸ್ನೇಹಿತರಾಗಿ ಕಾರ್ಯಕ್ರಮಕ್ಕೆ ಶಕ್ತಿ ನೀಡಿದ ರಾಜ್ ಸನಿಲ್, ಅರ. ಕೆ. ನಿರಂಜನ್, ವಿಜಯ್ ಸಾಲಿಯಾನ್, ಶರತ್ ಕುಮಾರ್ ಹಾಜರಿದ್ದು ಇಂತಹ  ವಿಭಿನ್ನ ಮತ್ತು ಉತ್ತಮ ಗುಣಮಟ್ಟದ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.

ವರದಿ: ಶ್ರೀಮತಿ ಸುಧಾ ಶಶಿಕಾಂತ್


Spread the love