ಪರಶುರಾಮ ಪ್ರತಿಮೆ ನಕಲಿ ಎನ್ನುವುದು ಕೊನೆಗೂ ಸಾಬೀತು – ರಮೇಶ್ ಕಾಂಚನ್
ಉಡುಪಿ: ಕಾರ್ಕಳ ತಾಲೂಕಿನ ಬೈಲೂರು ಉಮಿಕಲ್ ಬೆಟ್ಟದ ಮೇಲೆ ನಿರ್ಮಿಸಿರುವ ಪರಶುರಾಮನ ಮೂರ್ತಿ ಕಂಚಿನದ್ದು ಎಂದು ಹೇಳಿ ಜನರನ್ನು ವಂಚಿಸಿ ಅವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದು ಹಿಂದೆ ನಿರ್ಮಿಸಿದ್ದ ಪರುಶುರಾಮನ ನಕಲಿ ಮೂರ್ತಿಯನ್ನು ತೆರವುಗೊಳಿಸಿ ಹೊಸ ಮೂರ್ತಿಯನ್ನು ಮತ್ತೆ ಪ್ರತಿಷ್ಠಾಪಿಸುವ ಕೆಲಸ ಆರಂಭಿಸಿರುವುದು ಬಿಜೆಪಿಯ ಶಾಸಕ ಸುನೀಲ್ ಕುಮಾರ್ ಚುನಾವಣೆಯ ಉದ್ದೇಶಕ್ಕೆ ಜನರಿಂದ ಮತಪಡೆಯಲು ಮಾಡಿದ ಹುನ್ನಾರ ಎನ್ನುವುದು ಸಾಬೀತಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಹೇಳಿದ್ದಾರೆ.
1.58 ಎಕ್ರೆ ಗೋಮಾಳದಲ್ಲಿ ಅಕ್ರಮವಾಗಿ ಪರಶುರಾಮ ಥೀಮ್ ಪಾರ್ಕ್ ನಿರ್ಮಿಸಿ ಚುನಾವಣೆ ಉದ್ದೇಶದಿಂದ ಅವಸರದಲ್ಲಿ ಥೀಮ್ ಪಾರ್ಕ್ ಉದ್ಘಾಟನೆಯನ್ನು ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಉದ್ಘಾಟಿಸಿದ್ದರು. ಭಾರಿ ಮಟ್ಟದ ಸದ್ದು ಮಾಡಿ ಕಂಚಿನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿರುವುದಾಗಿ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಸುನೀಲ್ ಕುಮಾರ್ ಅವರ ನಿಜ ಬಣ್ಣ ಬಯಲಾಗಿದೆ. ಅರ್ಧ ಭಾಗವಷ್ಟೇ ಕಂಚಿನ ಪ್ರತಿಮೆಯಾಗಿದ್ದು ಉಳಿದ ಅರ್ಧ ಭಾಗವು ಸಿಮೆಂಟ್ ಅಥವಾ ಇತರ ಯಾವುದೇ ವಸ್ತುವಿನಿಂದ ನಿರ್ಮಿಸಲಾಗಿದೆ.
ಇದು ಹಿಂದೂಗಳು ಪೂಜಿಸಿಕೊಂಡು ಬಂದಿರುವ ಪರಶುರಾಮನಿಗೆ ಮಾಡಿದ ದೊಡ್ಡ ಮಟ್ಟದ ದ್ರೋಹವಾಗಿದೆ. ಸದಾ ಹಿಂದುತ್ವ ಎಂದು ಬಡಾಯಿಕೊಚ್ಚುವ ಸುನೀಲ್ ಕುಮಾರ್ ಅವರು ತಮ್ಮ ಲಾಭಕ್ಕಾಗಿ ಯಾವುದೇ ರೀತಿಯ ಮೋಸ ಮಾಡಲು ಸಿದ್ದ ಎನ್ನುವುದು ಈ ಘಟನೆಯಿಂದ ಸಾಬೀತಾಗಿದೆ.
ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬೆಟ್ಟಕ್ಕೆ ಭೇಟಿ ನೀಡಿದ ವೇಳೆ ಸಂಬಂಧಪಟ್ಟ ಅಧಿಕಾರಿಗಳು ಕೂಡ ಇದು ಕಂಚಿನ ಮೂರ್ತಿಯಲ್ಲ ಎಂದು ಒಪ್ಪಿಕೊಂಡಿದ್ದರು. ಅದರ ಬಳಿಕ ಕಳೆದೆರಡು ದಿನಗಳಿಂದ ನೈಜ ಮೂರ್ತಿಯ ಭಾಗಗಳು ದೊಡ್ಡ ದೊಡ್ಡ ಲಾರಿಗಳಲ್ಲಿ ಕಾರ್ಕಳಕ್ಕೆ ಆಗಮಿಸಿದ್ದು ಮೂರ್ತಿಯ ಪುನರ್ ನಿರ್ಮಾಣ ಕಾರ್ಯ ಆರಂಭವಾಗಿದೆ. ಕಾರ್ಕಳ ಹಾಗೂ ಉಡುಪಿ ಜಿಲ್ಲೆಯ ಜನರಿಗೆ ಇಷ್ಟೊಂದು ದೊಡ್ಡ ಮೋಸ ಮಾಡಿದ್ದಲ್ಲದೆ ಹಿಂದೂಗಳ ಭಾವನೆಗಳೊಂದಿಗೆ ಆಟವಾಡಿರುವ ಬಿಜೆಪಿಯ ಶಾಸಕ ಸುನೀಲ್ ಕುಮಾರ್ ಅವರು ಇದಕ್ಕೆ ನೇರ ಹೋಣೆಗಾರರಾಗಿದ್ದಾರೆ. ಈಗಾಗಲೇ ಹಳೆಯ ಮೂರ್ತಿಗಾಗಿ ಹಣವನ್ನು ಕೂಡ ಪಾವತಿಸಲಾಗಿದ್ದು ಮತ್ತೆ ಹೊಸ ಮೂರ್ತಿ ಪ್ರತಿಷ್ಠಾಪನೆ ಹೆಸರಿನಲ್ಲಿ ಹಣದ ಪೋಲು ನಡೆಯುತ್ತಿದ್ದು ಇದೆಲ್ಲವುದರ ಬಗ್ಗೆ ವಿಸ್ತ್ರತ ತನಿಖೆಯ ನಡೆಯಬೇಕು ಮತ್ತು ಇದರಿಂದ ಆಗಿರುವ ನಷ್ಠವನ್ನು ಸ್ವತಃ ಸುನೀಲ್ ಕುಮಾರ್ ಅವರು ತಮ್ಮ ವೈಯುಕ್ತಿಕ ಖರ್ಚಿನಿಂದ ನೀಡುವಂತಾಗಬೇಕು. ಇದರಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮವನ್ನು ಸರಕಾರ ವಹಿಸಬೇಕು. ಹಿಂದುತ್ವದ ಹೆಸರಿನಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳೊಂದಿಗೆ ಆಟವಾಡಿರುವ ಶಾಸಕ ಸುನೀಲ್ ಕುಮಾರ್ ಅವರಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠವನ್ನು ಜನರು ಕಲಿಸಬೇಕು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಅವರು ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.