ಉಡುಪಿ : ಯಾವ ಧರ್ಮವೂ ಮತ್ತೊಬ್ಬರನ್ನು ದ್ವೇಷಿಸುವುದಿಲ್ಲ. ನಾವು ಪರಸ್ಪರ ಪ್ರೀತಿ ಸೌಹಾರ್ದತೆಯಿಂದ ಇದ್ದರೆ ಸಮಾಜದಲ್ಲಿ ಶಾಂತಿ ಸಾಧ್ಯ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಧ್ಯಕ್ಷ ಅತೀ ವಂದನೀಯ ಡಾ. ಜೆರಾಲ್ಡ್ ಐಸಾಕ್ ಲೋಬೋ ಹೇಳಿದ್ದಾರೆ.
ಅವರು ಶನಿವಾರ ಸಂಜೆ ಕೆಥೋಲಿಕ್ ಸಭಾ ಉಡುಪಿ ಇದರ ಶಿರ್ವ ಘಟಕ ಅಯೋಜಿಸಿದ್ದ ಕ್ರಿಸ್ಮಸ್ ಪ್ರಯುಕ್ತ ಸ್ನೇಹಕೂಟ 2015ರಲ್ಲಿ ಕ್ರಿಸ್ಮಸ್ ಸಂದೇಶ ನೀಡಿದರು.
ಹಲವಾರು ನದಿಗಳು ಸಮುದ್ರಕ್ಕೆ ಸೇರಿದಾಗ ಹೇಗೆ ಸ್ವೀಕರಿಸುತ್ತದೋ ಹಾಗೆಯೇ ಭಾರತವೂ ಸರ್ವ ಧರ್ಮ ಸಹಿಷ್ಣುತೆಗೆ ಸಾಕ್ಷಿ ಆಗಿದೆ. ಪ್ರತಿ ಧರ್ಮದಲ್ಲಿಯೂ ಸತ್ಯ ಅಡಗಿದೆ. ಇದನ್ನು ನಾವು ಸ್ವೀಕರಿಸಿದಾಗ, ನಮ್ಮಲ್ಲಿರುವ ಭೇದ ಭಾವ, ಭಿನ್ನಾಭಿಪ್ರಾಯ ದೂರ ಆಗುತ್ತದೆ. ಇದನ್ನು ಸ್ವೀಕರಿಸುವ ಮನೋಧರ್ಮ ನಮ್ಮಲ್ಲಿ ಬೆಳೆಸಿಕೊಳ್ಳೋಣ ಎಂದು ಐಸಾಕ್ ಲೋಬೋ ಹೇಳಿದ್ದಾರೆ.
ಈ ಸಂದರ್ಭ ಅತಿಥಿಗಳು ಕೇಕ್ ಕತ್ತರಿಸಿ ಕ್ರಿಸ್ಮಸ್ ಸ್ನೇಹಕೂಟ 2015ಕ್ಕೆ ಚಾಲನೆ ನೀಡಿದರು.
ಶಿರ್ವ ಚಚ್ನ ಧರ್ಮಗುರು ಸ್ಟ್ಯಾನ್ಲಿ ತಾವ್ರೋ, ಲಯನ್ ಜಯಕರ್ ಶೆಟ್ಟಿ, ಶಿರ್ವ ಸುನ್ನಿ ಜಾಮಿಯಾ ಮಸೀದಿಯ ಖತೀಬರಾದ ಮೌಲಾನಾ ಸಿರಾಜುದ್ದೀನ್ ಝೈನಿ ಮುಖ್ಯ ಅತಿಥಿಗಳಾಗಿದ್ದರು.
ವೇದಿಕೆಯಲ್ಲಿ ಕೆಥೋಲಿಕ್ ಸಭಾ ಶಿರ್ವ ಘಟಕಾಧ್ಯಕ್ಷೆ ಲೀನಾ ಮಚಾದೋ, ಕಾರ್ಯದರ್ಶಿ ಲೊರಿಟ ಡಿಸೋಜ, ಕೋಶಾಧಿಕಾರಿ ಸ್ಟೇನ್ಲಿ ಪಿಂಟೋ, ಲಿಯೋ ನೊರೊನ್ಹಾ, ಮೆಲ್ವಿನ್ ನೊರೊನ್ಹಾ ಮತ್ತಿತರರು ಉಪಸ್ಥಿತರಿದ್ದರು.