ಪರಿವರ್ತನಾ ಸಮಾವೇಶದಲ್ಲಿ 500 ಕ್ಕೂ ಅಧಿಕ ಜೆಪಿ ಹೆಗ್ಡೆ ಬೆಂಬಲಿಗರು ಬಿಜೆಪಿ ಸೇರ್ಪಡೆ
ಉಡುಪಿ: ಭಾರತೀಯ ಜನತಾ ಪಕ್ಷದ ವತಿಯಿಂದ ಬ್ರಹ್ಮಾವರದಲ್ಲಿ ಜರುಗಿದ ಪರಿವರ್ತನಾ ಸಮಾವೇಶದಲ್ಲಿ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆಯವರ ಸುಮಾರು 500 ಕ್ಕೂ ಅಧಿಕ ಮಂದಿ ಬೆಂಬಲಿಗರು ಸೋಮವಾರ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಕೇಂದ್ರ ಸಂಸದೀಯ ವ್ಯವಹಾರ ಹಾಗೂ ರಾಸಾಯನಿಕ ರಸಗೊಬ್ಬರ ಸಚಿವರಾದ ಅನಂತ ಕುಮಾರ್ ಪರಿವರ್ತನಾ ಸಮಾವೇಶವನ್ನು ಉದ್ಘಾಟಿಸುವುದರೊಂದಿಗೆ ಜೆಪಿ ಹೆಗ್ಡೆ ಬೆಂಬಲಿಗರನ್ನು ಪಕ್ಷದ ಧ್ವಜವನ್ನು ನೀಡುವುದರೊಂದಿಗೆ ಪಕ್ಷಕ್ಕೆ ಸ್ವಾಗತಿಸಿದರು.
ಕೇಂದ್ರ ಮಂತ್ರಿ ಅನಂತ ಕುಮಾರ್ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರಕಾರದಲ್ಲಿ ಎಲ್ಲೇಲ್ಲೂ ಹೊಂಡಗಳು ತುಂಬಿದೆ, ಸರಕಾರದಲ್ಲಿನ, ಆಡಳಿತ ವ್ಯವಸ್ಥೆಯಲ್ಲಿ ದುರಾಡಳಿತ ಹೊಂಡ, ಅಭಿವೃದ್ಧಿಯಲ್ಲಿನ ಹೊಂಡ ತುಂಬಲು ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರಕಾರ ಬರಬೇಕಾದ ಅಗತ್ಯತೆ ಇದೆ. ಬಲು ಮುಖ್ಯವಾಗಿ ಅಜ್ಞಾತದಲ್ಲಿದ್ದರು, ಆಡಳಿತದಲ್ಲಿದ್ದರು, ಎಲ್ಲೇ ಇದ್ದರೂ ಕೂಡ ಹಿಂದೆ ನಿಲ್ಲವ ಜನರ ಪ್ರೀತಿಯ ಉಡುಗೊರೆ ಜಯಪ್ರಕಾಶ್ ಹೆಗ್ಡೆ ಅವರು ಪಡೆದಿದ್ದಾರೆ. ನಮಗೆ ಜನರ ಪ್ರೀತಿಯೇ ಶ್ರೀರಕ್ಷೇ ಆಶೀರ್ವಾದ. ರಾಜಕಾರಣಿಗಳಿಗೆ ಪ್ರತಿ ಚುನಾವಣೆಯಲ್ಲಿ ಸಿಗುವ ಗೆಲುವಯ ಕೂಡ ಒಂದು ಮರುಹುಟ್ಟು ಎನಿಸಿಕೊಳ್ಳುತ್ತದೆ. ಜಯಪ್ರಕಾಶ್ ಹೆಗ್ಡೆಯವರು ಪ್ರತಿ ಪಂಚಾಯತ್ ಮಟ್ಟದಲ್ಲೇ ಕಾರ್ಯಕರ್ತರನ್ನು ಸಂಘಟಿಸುವ ಮೂಲಕ ಪರಿವರ್ತನೆಗೆ ನಾಂದಿ ಹಾಡಿದ್ದಾರೆ, ಇದು ಬಿಜೆಪಿಯ ಮುಂದಿನ ಬದಲಾವಣೆಗೆ ಮುನ್ನುಡಿಯಾಗಲಿ.
ಕಾಂಗ್ರೆಸ್ನವರು ಆಧುನಿಕ ಭಸ್ಮಾಸುರನ ರೀತಿಯಲ್ಲಿ ರಾಜ್ಯದಲ್ಲಿ ಆಡಳಿತ ನಡೆಸಿದ ಪರಿಣಾಮವಾಗಿ ಇಂದು ಜನತೆ ರೋಸಿ ಹೋಗಿದ್ದಾರೆ. ಅಹಂಕಾರ, ಅವ್ಯವಹಾರ ಮತ್ತು ಅಸಡ್ಡೆ ಇವು ಮೂರು ಗುಣಗಳ ಮೂಲಕ ರಾಜ್ಯದ ಜನತೆಗೆ ಉತ್ತಮ ಆಡಳಿತ ನೀಡುವಲ್ಲಿ ವಿಫಲರಾಗಿದ್ದಾರೆ. ಕಾಂಗ್ರೆಸ್ ಎಂಬ ರಾವಣ ರಾಜ್ಯದಿಂದ ವಿಭೀಷಣನಂತೆ ಜಯಪ್ರಕಾಶ್ ಹೆಗ್ಡೆ ಅವರು ನಮ್ಮ ಪಕ್ಷಕ್ಕೆ ಆಗಮಿಸಿದ್ದಾರೆ, ಮುಂದೆ ಯಡಿಯೂಡಿರಪ್ಪ ಅವರ ನೇತೃತ್ವದಲ್ಲಿ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯಲು ಇದು ಬದಲಾವಣೆಯ ಪರಿವರ್ತನೆಯ ವೇದಿಕೆಯಾಗಲಿದೆ ಎಂದರು.
ಮಾಜಿ ಉಪಮುಖ್ಯ ಮಂತ್ರಿ ಆರ್.ಅಶೋಕ್ ಮಾತನಾಡಿ, ಕಾಂಗ್ರೆಸ್ ಸರಕಾರಕ್ಕೆ ನಡುಕ ಹುಟ್ಟಿಸುವ ಕಾರ್ಯವನ್ನು ಈ ಪರಿವರ್ತನಾ ಸಭೆಯ ಮೂಲಕ ಜಯಪ್ರಕಾಶ್ ಹೆಗ್ಡೆ ಮಾಡಿದ್ದಾರೆ. ಹಗ್ಡೆಯವರ ಆಗಮನದಿಂದು ಇಂದಿ ಇಡಿ ಕರಾವಳಿಗೆ ಆನೆಬಲ ಬಂದಿದೆ. ಇಂದು ಕರ್ನಾಟಕದ ಮಂತ್ರಿಗಳು ಯಾರು ಕೆಲಸ ಮಾಡುತ್ತಿಲ್ಲ, ರಾಜ್ಯ ಮುಖ್ಯಮಂತ್ರಿಗಳೆ ನಿದ್ದೆ ಮಾಡುತ್ತಿರುವಾಗ ಜಿಲ್ಲಾ ಉಸ್ತುವಾರಿ ಮತ್ತು ಇನ್ನುಳಿದ ಸಚಿವರು ಕೆಲಸ ಮಾಡುತ್ತಾರೆ ಎನ್ನುವುದು ಕನಸಿನಂತಾಗಿದೆ. ಸಿದ್ಧರಾಮಯ್ಯ ಅವರು ಉತ್ತಮ ಆಡಳಿತ ನೀಡಲು ಮುಖ್ಯಮಂತ್ರಿಯಾಗಿ ಆರಿಸಿ ಬಂದಿಲ್ಲ ಸದಾ ಬೆಂಕಿ ಹಚ್ಚುವ ಕಾಯಕ ಮಾಡುತ್ತಿದ್ದಾರೆ. ಜಾತಿ ಜಾತಿಗಳ ಮಧ್ಯೆ ಒಡುಕು ಹುಟ್ಟಿಸುವ ಕಾರ್ಯ ನಡೆಸುವುದು, ಧರ್ಮದ ನಡುವೆ ಒಡಕು ತರುವ ಕಾಯಕ ನಡೆಸುತ್ತಿದ್ದಾರೆ. ಅವರು ಕಾಪಿ ಮಾಡುವುದರಲ್ಲಿ ನಿಸ್ಸೀಮರು, ಮೋದಿಯವರ ಜನಪ್ರಿಯ ಕಾರ್ಯಕ್ರಮ ಮನ್ಕೀ ಬಾತ್ ಮಾದರಿಯಲ್ಲಿ ಕಾರ್ಯಕ್ರಮ ಕಾಪಿ ಮಾಡಲು ಹೊರಟಿದ್ದಾರೆ, ಅದು ಲೂಟ್ ಕಿ ಬಾತ್ ಆಗಿದೆ. ರಾಜ್ಯದ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಅವರು ರಾಜ್ಯದ ಚುನಾವಣಾ ಕಾರ್ಯಕ್ಕೆ ಬಾರದೆ ಇರುವಂತೆ ಪ್ರಯತ್ನ ನಡೆಸುತ್ತಿದ್ದಾರೆ, ಆದರೆ ನಾವು ಬಿಜೆಪಿಯವರು ಕರ್ನಾಟಕಕ್ಕೆ ಬಂದು ಇರುವ ಒಂದು ಕಾಂಗ್ರೆಸ್ ಆಡಳಿತ ಕ್ಷೇತ್ರವು ಮುಂದಿನ ಚುನಾವಣೆಯಲ್ಲಿ ಕೈ ತಪ್ಪುವಂತೆ, ಯುಪಿ ಮತ್ತು ರಾಜಸ್ಥಾನ ಕಾಂಗ್ರೆಸ್ ಮುಕ್ತ ಮಾಡಿದಂತೆ ಮಾಡಬೇಕು ಎಂದರು.
ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ, ವ್ಯಕ್ತಿಗಳು ಅಭಿಪ್ರಾಯ ಮೂಡಿಸುವ ಕಾರ್ಯದಲ್ಲಿ ತೊಡಗಿದಾಗ ಬದಲಾವಣೆಗೆ ಅವಕಾಶವಾಗುತ್ತದೆ. ಈ ಪರಿವರ್ತನೆಯ ಕಾರ್ಯ ಪ್ರಾರಂಭವಾಗಿರುವುದು ಹೆಗ್ಗುಂಜೆ ಗ್ರಾಮ ಪಂಚಾಯತ್ನಿಂದ ಪ್ರಾರಂಭವಾಗಿದೆ ಎಂದರು. ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಸದೆ ಶೋಭ ಕರಂದ್ಲಾಜೆ, ಶಾಸಕ ಸುನೀಲ್ ಕುಮಾರ್, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಲಾಲಾಜಿ ಆರ್. ಮೆಂಡನ್, ಮಾಜಿ ಶಾಸಕ ಲಕ್ಷ್ಮೀನಾರಾಯಣ್, ಉದಯ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಶೆಟ್ಟಿ, ರೇಶ್ಮಾ ಉದಯ ಕುಮಾರ್ ಶೆಟ್ಟಿ ಇನ್ನಾ, ಕುತ್ಯಾರು ನವೀನ್ ಕುಮಾರ್, ಯಶ್ಪಾಲ್ ಸುವರ್ಣ, ಗೀತಾಂಜಲಿ ಆರ್. ಸುವರ್ಣ, ಕಾಡೂರು ಸುರೇಶ್ ಶೆಟ್ಟಿ, ಕಿಶೋರ್ ಕುಂದಾಪುರ ಮತ್ತಿತರರ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
ಇದೇ ಸಂದರ್ಭ ಈ ಭಾಗದ ರೈತರು ಕುಚ್ಚಿಲ ಅಕ್ಕಿಯ ಮುಡಿ ನೀಡುವ ಮೂಲಕ ಕೇಂದ್ರ ಸಚಿವರನ್ನು ಸನ್ಮಾನಿಸಿ ಗೌರವಿಸಿದರು. ಇದೇ ಸಂದರ್ಭ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಜಯಪ್ರಕಾಶ್ ಹೆಗ್ಡೆ ಅವರಿಗೆ ಕೇಂದ್ರ ಸಚಿವರು ಗೌರವಿಸಿದರು. ಬ್ರಹ್ಮಾವರದ ಬ್ಲಾಕ್ ಕಾಂಗ್ರೇಸ್ ಮಾಜಿ ಅಧ್ಯಕ್ಷ ರಾಜೇಶ್ ಶೆಟ್ಟಿ ಭಿರ್ತಿ ಸೇರಿದಂತೆ 36 ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಮಾರು 500ಕ್ಕೂ ಅಧಿಕ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು. ಮಾಜಿ ಶಾಸಕ ರಘುಪತಿ ಭಟ್ ಪ್ರಸ್ತಾವಿಸಿದರು. ಜಿಲ್ಲಾ ಪಂಚಾಯತ್ ಸದಸ್ಯ ಪ್ರತಾಪ್ ಹೆಗ್ಡೆ ಸ್ವಾಗತಿಸಿದರು.
ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ಮಂಗಳೂರು ಶಾಸಕರಾದ ವಿ ಸುನೀಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕರಾದ ರಘುಪತಿ ಭಟ್, ಲಾಲಾಜಿ ಆರ್ ಮೆಂಡನ್, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ್ ಕುಮಾರ್ ಶೆಟ್ಟಿ ಹಾಗೂ ಇತರ ನಾಯಕರು ಭಾಗವಹಿಸಿದ್ದರು.