ಪರಿಸರ ರಕ್ಷಣೆ ವ್ಯಕ್ತಿಗತವಾದಾಗ ನಿರೀಕ್ಷಿತ ಪರಿಣಾಮ ಸಾಧ್ಯ : ಎಸ್‍ಪಿ ಲಕ್ಷ್ಮಣ ನಿಂಬರ್ಗಿ

Spread the love

ಪರಿಸರ ರಕ್ಷಣೆ ವ್ಯಕ್ತಿಗತವಾದಾಗ ನಿರೀಕ್ಷಿತ ಪರಿಣಾಮ ಸಾಧ್ಯ : ಎಸ್‍ಪಿ ಲಕ್ಷ್ಮಣ ನಿಂಬರ್ಗಿ
 
ಉಡುಪಿ: ಪರಿಸರ ರಕ್ಷಣೆ ಕೇವಲ ಆಚರಣೆಗೆ ಸೀಮಿತವಾಗದೆ, ವ್ಯಕ್ತಿಗತ ಆಚರಣೆಯಾದಗ ಮಾತ್ರ ನಿರೀಕ್ಷಿತ ಪರಿಣಾಮ ಸಾಧ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರ್ಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಂಗಳವಾರ ಮಣಿಪಾಲ ಸಾಲುಮರ ತಿಮ್ಮಕ್ಕ ಟ್ರೀಪಾರ್ಕ್‍ನಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಪ್ರೆಸ್‍ಕ್ಲಬ್ ಉಡುಪಿ ಸಂಯುಕ್ತ ಆಶ್ರಯದಲ್ಲಿ ಅರಣ್ಯ ಇಲಾಖೆ ಸಹತಯೋಗದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪರಿಸರ ರಕ್ಷಣೆ ವಿಷಯ ಬಂದಾಗ ಭೂತಕಾಲ, ವರ್ತಮಾನ ಕಾಲ ಮತ್ತು ಭವಿಷ್ಯತ್ಕಾಲಗಳನ್ನು ಊಹಿಸಿಕೊಂಡು ಮಾತನಾಡಬೇಕಾಗುತ್ತದೆ. ಹಿಂದೆ ಪರಿಸರ ಚೆನ್ನಾಗಿತ್ತು. ಇದೀಗ ಪರಿಸರ ಹಾಳಾಗಿದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಮುಂದೆ ಇನ್ನಷ್ಟು ಭೀಕರವಾಗಲಿದೆ. ಹಿಂದೆ ಸಂಪನ್ಮೂಲಗಳನ್ನು ಮಿತವಾಗಿ ಬಳಸಲಾಗುತ್ತಿತ್ತು. ಕೈಗಾರಿಕೀಕರಣ, ಮನುಷ್ಯನ ಅತಿಲಾಲಸೆ ಇತ್ಯಾದಿ ಕಾರಣಗಳಿಂದಾಗಿ ಪರಿಸರ ಹಾಳಾಗುತ್ತಿದೆ. ಪ್ಲಾಸ್ಟಿಕ್‍ನ ಅತಿ ಬಳಕೆ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ. ಪ್ಲಾಸ್ಟಿಕ್ ಬಳಕೆ ನಿಷೇಧ ಬಗ್ಗೆ ಕಾನೂನುಗಳಿದ್ದರೂ ಅವುಗಳ ಸರಿಯಾದ ಪಾಲನೆ ಆಗುತ್ತಿಲ್ಲ. ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ ಪರಿಸರ ರಕ್ಷಣೆ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಭೀಕರ ಪರಿಣಾಮ ಎದುರಿಸಬೇಕಾದೀತು ಎಂದು ಎಚ್ಚರಿಸಿದ ಎಸ್‍ಪಿ ನಿಂಬರ್ಗಿ, ಪರಿಸರ ರಕ್ಷಣೆ ಕಾರ್ಯ ನಮ್ಮ ಮನೆಯಿಂದಲೇ ಆರಂಭವಾಗಬೇಕು ಎಂದು ಸಲಹೆ ನೀಡಿದರು.

ಸಂಪನ್ಮೂಲಗಳನ್ನು ಮಿತವಾಗಿ ಬಳಸಿ, ಮುಂದಿನವರಿಗೂ ಬಳಕೆಗೆ ಅನುವು ಮಾಡಿಕೊಡಿ ಎಂಬ ಗಾಂಧಿ ಚಿಂತನೆ ಪರಿಸರ ರಕ್ಷಣೆಗೆ ಪೂರಕ ಎಂದು ಎಸ್‍ಪಿ ಲಕ್ಷ್ಮಣ ನಿಂಬರ್ಗಿ ಹೇಳಿದರು.

ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಫರ್ಡ್ ಲೋಬೊ, ದೇಶದ ಗಡಿ ಕಾಯುವ ಸೈನಿಕರಂತೆ ಅರಣ್ಯ ಇಲಾಖೆ ದೇಶದೊಳಗಿನ ವನ್ಯ ಸಂಪತ್ತನ್ನು ರಕ್ಷಿಸುವ ಕೆಲಸ ಮಾಡುತ್ತಿದೆ. ಜನಸಂಖ್ಯೆಗನುಗುಣವಾಗಿ ಒಟ್ಟು ಭೂಭಾಗದ ಶೇ. 33ರಷ್ಟು ಅರಣ್ಯ ಇರಬೇಕೆಂಬ ನಿಯಮ ಇದೆ. ಪ್ರಸ್ತುತ 21.5 ಶೇ.ದಷ್ಟು ಮಾತ್ರ ಇದೆ. ಕರ್ನಾಟಕದ ಒಟ್ಟು ವಿಸ್ತೀರ್ಣ 1.91 ಲಕ್ಷ ಹೆಕ್ಟೇರ್ ಪೈಕಿ ಸುಮಾರು 43 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯ ಇದೆ. ಇತರ ರಾಜ್ಯಗಳಿಗೆ ಹೋಲಿಸಿದಲ್ಲಿ ನಮ್ಮ ರಾಜ್ಯ ಶೇ. 1ರಷ್ಟು ಅಧಿಕ ಅರಣ್ಯ ಪ್ರದೇಶ ಹೊಂದಿದೆ ಎಂದರು.

ಅರಣ್ಯ ರಕ್ಷಣೆಯಲ್ಲಿ ಇಲಾಖೆ ಸಾಕಷ್ಟು ಪರಿಣಾಮಕಾರಿ ಕಾರ್ಯಕ್ರಮಗಳನ್ನು ಅನುಸರಿಸುತ್ತಿದ್ದು ಈ ಬಾರಿ ಜಿಲ್ಲೆಯಲ್ಲಿ 8.20 ಲಕ್ಷ ಸಸಿ ನೆಡುವ ಗುರಿ ಇರಿಸಿಕೊಳ್ಳಲಾಗಿದೆ. ಆ ಪೈಕಿ 5 ಲಕ್ಷ ಸಸಿಗಳನ್ನು ರಸ್ತೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನೆಡಲಾಗುವುದು. ಸಾರ್ವನಿಕರಿಗೆ 1 ರೂ. ದರದಲ್ಲಿ 1.5 ಲಕ್ಷ ವಿವಿಧ ಜಾತಿಯ ಸಸಿಗಳನ್ನು ವಿತರಿಸಲುದ್ದೇಶಿಸಲಾಗಿದೆ ಎಂದು ಕ್ಲಿಫರ್ಡ್ ಹೇಳಿದರು.

ಅತಿಯಾದ ಪ್ಲಾಸ್ಟಿಕ್ ಬಳಕೆ ಅಪಾಯದ ಎಚ್ಚರಿಕೆ ಗಂಟೆಯಾಗಿ ಪರಿಣಮಿಸಿದೆ. ಕಳೆದ 100 ವರ್ಷದಲ್ಲಿ ಬಳಕೆ ಆಗುವಷ್ಟು ಪ್ರಮಾಣದ ಪ್ಲಾಸ್ಟಿಕ್ ಕಳೆದ 10 ವರ್ಷದಲ್ಲೇ ಬಳಕೆಯಾಗಿ ಅದರ ನಿರ್ವಹಣೆಯೇ ತಲೆನೋವಾಗಿ ಪರಿಣಮಿಸಿದೆ. ಪರಿಸರ ಮಾಲಿನ್ಯ ನಿವಾರಣೆಗೆ ಅರಣ್ಯೀಕರಣವೊಂದೇ ಪರಿಹಾರವಾಗಲಿದೆ ಎಂದರು.

ವಾರ್ತಾಧಿಕಾರಿ ರೋಹಿಣಿ ಶುಭ ಹಾರೈಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಗಣೇಶಪ್ರಸಾದ ಪಾಂಡೇಲು, ಕಾರ್ಯದರ್ಶಿ ಸಂತೋಷ್ ಸರಳೆಬೆಟ್ಟು, ಕೋಶಾಧಿಕಾರಿ ದಿವಾಕರ ಹಿರಿಯಡ್ಕ, ಜೊತೆ ಕಾರ್ಯದರ್ಶಿ ಮೈಕೆಲ್ ರಾಡ್ರಿಗಸ್ ಇದ್ದರು.

ಸಂಘದ ಮಾಜಿ ಅಧ್ಯಕ್ಷ ಕಿರಣ್ ಮಂಜನಬೈಲು ಸ್ವಾಗತಿಸಿದರು. ಪ್ರೆಸ್‍ಕ್ಲಬ್ ಸಂಚಾಲಕ ನಾಗರಾಜ ರಾವ್ ನಿರೂಪಿಸಿದರು. ಸಹ ಸಂಚಾಲಕ ಸುಭಾಶ್ಚಂದ್ರ ವಾಗ್ಳೆ ವಂದಿಸಿದರು.


Spread the love