ಪರ್ಕಳ: ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ -ಸ್ಥಳದಲ್ಲೇ ಸಾವು
ಮಣಿಪಾಲ: ಪರ್ಕಳ ಪೇಟೆಯ ಬಡಗುಬೆಟ್ಟು ತಿರುವಿನಲ್ಲಿ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಶನಿವಾರ ಸಂಭವಿಸಿದೆ.
ಮೃತರನ್ನು ಶೇಡಿಗುಡ್ಡೆ ನಿವಾಸಿ ರಮೇಶ್ ನಾಯಕ್ (55)ಎಂದು ತಿಳಿದುಬಂದಿದೆ.
ಮಣಿಪಾಲದ ಜಿಸಿಸಿಯಲ್ಲಿ ಕೆಲಸ ಮಾಡುತ್ತಿದ್ದ ಅವರು, ಕಾರು ಇಳಿದು ಬೀಡ ತೆಗೆದುಕೊಳ್ಳಲು ಪಕ್ಕದ ರಸ್ತೆಯಲ್ಲಿರುವ ಅಂಗಡಿಗೆ ರಸ್ತೆ ದಾಟುತ್ತಿದ್ದಾಗ ಅಪಘಾತ ಸಂಭವಿಸಿದೆ.ರಸ್ತೆ ದಾಟುತ್ತಿದ್ದಾಗ ಶಿವಮೊಗ್ಗದ ಕಡೆಗೆ ಹೋಗುವ ಕಾರು ಡಿಕ್ಕಿ ಹೊಡೆದಿದೆ. ಅತಿ ವೇಗದಲ್ಲಿದ್ದ ಕಾರು ಗುದ್ದಿದ ರಭಸಕ್ಕೆ ರಮೇಶ್ ನಾಯಕ್ ಅವರನ್ನು ಸುಮಾರು ದೂರ ಎಳೆದುಕೊಂಡು ಹೋಗಿದೆ. ಈ ಸ್ಥಳದಲ್ಲಿ ಇತ್ತೀಚೆಗೆ ಹಲವು ಅಪಘಾತ ಪ್ರಕರಣಗಳು ನಡೆದಿದ್ದು, ಸೂಕ್ತ ಕ್ರಮಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.