ಪವರ್ ಟಿವಿ ವಿರುದ್ದ ರಾಜ್ಯ ಬಿಜೆಪಿ ಸರಕಾರದಿಂದ ದಬ್ಬಾಳಿಕೆ – ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಐವನ್ ಆಗ್ರಹ
ಮಂಗಳೂರು: ರಾಜ್ಯದ ಮುಖ್ಯಮಂತ್ರಿ ಮಗನ ಮೇಲಿನ ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಪವರ್ ಟಿವಿ ಮಾಡಿದ ಸುದ್ದಿಯನ್ನು ಗುರಿಯಾಗಿರಿಸಿ ಟಿವಿಯ ಪ್ರಸಾರವನ್ನೇ ನಿಲ್ಲಿಸಿ ಮಾಧ್ಯಮ ಸ್ವಾತಂತ್ರ್ಯದ ಮೇಲೆ ದಬ್ಬಾಳಿಕೆ ನಡೆಸಿದ ವಿಚಾರದಲ್ಲಿ ರಾಜ್ಯಪಾಲರು ಮಧ್ಯಪ್ರವೇಶಿಸಿ ಮುಖ್ಯಮಂತ್ರಿಯವರ ರಾಜೀನಾಮೆಯನ್ನು ಪಡೆಯಬೇಕು ಎಂದು ಮಾಜಿ ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ ಆಗ್ರಹಿಸಿದ್ದಾರೆ.
ಅವರು ಮಂಗಳವಾರ ದಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸರಕಾರವೊಂದು ತನ್ನ ಮೇಲೆ ಭ್ರಷ್ಟಾಚಾರ ಆರೋಪಕ್ಕೆ ಪ್ರತಿಯಾಗಿ ದ್ವೇಷ ರಾಜಕಾರಣ ನಡೆಸಿದೆ.
ಬಿಡಿಎ ಪ್ರಕರಣವೊಂದರಲ್ಲಿ 24 ಕೋಟಿ ರೂ.ಗಳ ಹಗರಣ ನಡೆದಿರುವ ಬಗ್ಗೆ ಸಾಕ್ಷ ಸಹಿತ ದಾಖಲೆಗಳಿವೆ. ಈ ಪ್ರಕರಣದಲ್ಲಿ 7.44 ಕೋಟಿ ರೂ. ಶೇಷಾದ್ರಿಪುರಂ ಬ್ಯಾಂಕೊಂದರ ಮೂಲಕ ಮುಖ್ಯಮಂತ್ರಿ ಸಂಬಂಧಿಕರು ಪಡೆದಿದ್ದಾರೆ. ಇದಲ್ಲದೆ, ಉಳಿದ ಹಣ ಕೋಲ್ಕತ್ತಾದ ಬ್ಯಾಂಕೊಂದರ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಸಂಬಂಧಿಕರ ಕಪಂನಿಗೆ ವರ್ಗಾವಣೆಯಾಗಿದೆ. ಆರ್‌ಟಿಜಿಎಸ್ ಮೂಲಕ ಹಣ ವರ್ಗಾವಣೆಯಾಗಿರುವ ಬಗ್ಗೆ ದಾಖಲೆ ಇರುವಾಗ ತನಿಖೆ ಆಗಬೇಕಲ್ಲವೆ ಎಂದು ಪ್ರಶ್ನಿಸಿದರು.
ಈ ಬಗ್ಗೆ ಸುದ್ದಿ ಮಾಡಿದ ಚಾನಲ್ ಮೇಲೆ ಬಲಪಯೋಗಿಸುವ ಮೂಲಕ ಜನರ ಬಾಯಿಯನ್ನು ಮುಚ್ಚಿಸಲಾಗದು. 2008ರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಆಡಳಿತವಿದ್ದಾಗ ಪ್ರೇರಣಾ ಟ್ರಸ್ಟ್ ಪ್ರಕರಣದ ಮೂಲಕ ಅಧಿಕಾರ ಕಳೆದುಕೊಂಡಿದ್ದಾರೆ. ಇದೀಗ ಮತ್ತೆ ಭ್ರಷ್ಟಾಚಾರ ನಡೆದಿದೆ. ಈ ಪ್ರಕರಣವನ್ನು ಇಲ್ಲಿಗೇ ಬಿಡದೆ ರಾಜ್ಯದ ಮೂಲೆ ಮೂಲೆಯಲ್ಲಿ ಇದರ ಬಗ್ಗೆ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ತಿಳಿಸಿದರು.