ಪಾಕಿಸ್ತಾನ ಪರ ಘೋಷಣೆ ಆರೋಪ: ದೇಶದ್ರೋಹಿಗಳನ್ನು ಬಂಧಿಸಲು ಯೋಚನೆ ಮಾಡಬೇಕಾ?: ವಿಜಯೇಂದ್ರ
ಶಿವಮೊಗ್ಗ: ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ನಿನ್ನೆಯೇ ಬಂಧಿಸಬೇಕಿತ್ತು. ದೇಶದ್ರೋಹಿಗಳನ್ನು ಬಂಧಿಸಲು ಯೋಚನೆ ಮಾಡಬೇಕಾ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನೆ ಮಾಡಿದ್ದಾರೆ.
ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಆರೋಪ ವಿಚಾರವಾಗಿ ಜಿಲ್ಲೆಯ ಶಿಕಾರಿಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಘೋಷಣೆ ಕೂಗಿದ ಜಾಗದಲ್ಲೇ ಒದ್ದು ಆತನನ್ನು ಬಂಧಿಸಬೇಕಿತ್ತು. ದೇಶದ್ರೋಹಿಗಳನ್ನು ರಕ್ಷಿಸುವ 6ನೇ ಗ್ಯಾರಂಟಿ ಘೋಷಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ದೇಶದ್ರೋಹಿಗಳಿಗೆ ಬೆಂಬಲ ನೀಡಲಾಗುತ್ತಿದೆ ಎಂದು ವಾಗ್ದಾಳಿ ಮಾಡಿದ್ದಾರೆ.
ಮಂಗಳೂರಿನಲ್ಲಿ ನಟ ಪ್ರಕಾಶ್ ರೈ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ವಿಚಾರವಾಗಿ ಮಾತನಾಡಿದ್ದು, ಪ್ರಕಾಶ್ ರೈ ಅಯೋಗ್ಯ ಎಂದಿದ್ದಾರೆ. ಅಯೋಗ್ಯರ ಮಾತಿಗೆ ಉತ್ತರ ನೀಡಬೇಕಿಲ್ಲ. ಮೋದಿ ಅವರನ್ನ ದೇಶದ ಎಲ್ಲಾ ಜನ ಒಪ್ಪಿಕೊಂಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೇ ಹೇಳಿದ್ದಾರೆ, 400 ಕ್ಕೂ ಹೆಚ್ಚು ಸ್ಥಾನ ಬಿಜೆಪಿ ಗೆಲ್ಲುತ್ತೆ, ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂದು ಹೇಳಿದ್ದಾರೆ.
ದೇಶದ ಭವಿಷ್ಯದ ದೃಷ್ಟಿಯಿಂದ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಜನ ತೀರ್ಮಾನ ಮಾಡಿದ್ದಾರೆ. ಈ ರೀತಿಯ ಉಡಾಫೆಯಾಗಿ ಮಾತಾನಾಡುವವರಿಗೆ ದೇಶದ ಜನ, ರಾಜ್ಯದ ಜನ ಉತ್ತರ ನೀಡುತ್ತಾರೆ ಎಂದಿದ್ದಾರೆ.