ಪಾಕೃತಿಕ ಸೌಂದರ್ಯ, ನದಿಯನ್ನು ನಾಶಮಾಡುತ್ತಿರುವುದು ವಿಷಾದನೀಯ; ಉಮಾನಾಥ್ ಕೋಟೆಕಾರ್
ಮಂಗಳೂರು: ನಾಶವಾಗುತ್ತಿರುವ ನದಿ ಸಂಪನ್ಮೂಲಗಳನ್ನು ಸಂರಕ್ಷಿಸಿ ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ ಉಳ್ಳಾಲ ಉಳಿಯ ನದಿ ತೀರದಲ್ಲಿ ಪರಿಸರದ ನಿವಾಸಿಗಳು ನದಿ ಸಂರಕ್ಷಣೆ ಅಭಿಯಾನದ ಭಾಗವಾಗಿ ಜನ ಜಾಗೃತಿಗಾಗಿ ನದಿ ಪರಿಸರದ ಸ್ವಚ್ಚತಾ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ರಾಮಕೃಷ್ಣ ಮಠ ಸ್ವಚ್ಛ ಮಂಗಳೂರು ವಿಭಾಗದ ಸಂಯೋಜಕರಾದ ಉಮಾನಾಥ್ ಕೋಟೆಕಾರ್ ಮಾತನಾಡಿ, ಹಿಂದಿನ ತಲೆಮಾರಿನವರು ನಮಗೆ ಒಳ್ಳೆಯ ಪರಿಸರ ನೀಡಿದ್ದಾರೆ. ನಾವು ನಮ್ಮ ಮುಂದಿನ ತಲೆಮಾರಿಗೆ ಯಾವ ಪರಿಸರ ನೀಡುತ್ತಿದ್ದೇವೆ ಎಂಬ ಬಗ್ಗೆ ಅವಲೋಕನ ನಡೆಸಬೇಕಾಗಿದೆ, ಸುಂದರವಾದ ಪಾಕೃತಿಕ ಸೌಂದರ್ಯ ಹೊಂದಿರುವ ನಾಡಿನ ನದಿಯನ್ನು ನಾಶಮಾಡುತ್ತಿರುವುದು ವಿಷಾದನೀಯ, ಇದು ನಿಸರ್ಗಕ್ಕೆ ಮತ್ತು ಮುಂದಿನ ತಲೆಮಾರಿಗೆ ನಾವು ಮಾಡುವ ಅನ್ಯಾಯವೆಂದು ಮನಗಂಡು ಪರಿಸರದ ರಕ್ಷಣೆಗೆ ಎಚ್ಚೆತ್ತು ಕೊಳ್ಳಬೇಕಾಗಿದೆ. ಕೇವಲ ಸ್ಥಳೀಯ ಆಡಳಿತ ವರ್ಗದವರಿಂದ ಮಾತ್ರ ಎಲ್ಲಾ ಸ್ವಚ್ಛತೆ ಸಾಧ್ಯವಿಲ್ಲ ಇದಕ್ಕೆ ಸ್ಥಳೀಯರ ಪ್ರಮಾಣಿಕ ಪ್ರಯತ್ನ ಬಹುಮುಖ್ಯವಾಗಿರುತ್ತದೆ. ಸ್ವಚ್ಛತೆ ಯಾಕೆ ಮಾಡುತ್ತಿದ್ದೇವೆ ಎನ್ನುವ ಸರಿಯಾದ ಪರಿಕಲ್ಪನೆಯೊಂದಿಗೆ ಕೈಜೋಡಿಸಿದಾಗ ಯಶಸ್ಸು ಸಾಧ್ಯ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಮಾರ್ಗತಲೆ ಮಸ್ಜಿದುಲ್ ಮಿಅ್-ರಾಜ್ ಜುಮಾ ಮಸೀದಿಯ ಖತೀಬ್ ಜನಾಬ್ ಉಸ್ಮಾನ್ ಸಖಾಫಿಯವರು, ಸಮೃದ್ಧಗಳ ಸಮ್ಮಿಲನವಾದ ಭೂಮಿಯನ್ನು ಮಾನವ ತನ್ನ ಕರಗಳಿಂದ ನಾಶಮಾಡುತ್ತಿದ್ದಾನೆ, ನಿರ್ಮಲವಾದ ನೆಲಜಲ ಕೃಷಿಯನ್ನು ಭೂವಾಸಕ್ಕೆ ಅನುಕೂಲವಾಗಿ ಬಳಸುವುದು ಭೂನಿವಾಸಿಗಳ ಜವಾಬ್ದಾರಿಯಾಗಿದೆ. ಕಾರ್ಖಾನೆಗಳಿಂದ ಬಿಡುವ ವಿಷಕಾರಿಕಾರಿ ಪದಾರ್ಥಗಳು ಸೇರಿ ನೆಲ ಜಲಗಳು ಸಾಂಕ್ರಾಮಿಕ ರೋಗದ ಆವಾಸವಾಗಿ ಮಾರ್ಪಟ್ಟಿವೆ, ನದಿ ತಟದ ಪ್ರದೇಶಗಳಲ್ಲಿರುವ ಜನತೆ ಈ ಬಗ್ಗೆ ಎಚ್ಚೆತ್ತುಕೊಂಡು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಅಭಿನಂದನಾರ್ಹ ಎಂದರು.
ಸಾಮಾಜಿಕ ಕಾರ್ಯಕರ್ತೆ ಸಿಸ್ಟರ್ ಆಗ್ನೇಸಿಯಾ ಫ್ರಾಂಕ್ ಮಾತನಾಡಿ, ಜನಹಿತ ಕಾರ್ಯಕ್ರಮವನ್ನು ಎಲ್ಲಾ ಧರ್ಮದ ಬಾಂಧವರು ಒಟ್ಟಿಗೆ ಸೇರಿ ಒಂದೇ ಭಾವನೆಯಿಂದ ಮಾಡುವುದೇ ಅತೀ ಮುಖ್ಯ ಸ್ವಚ್ಛತೆ ಎಂದರು.
ರಾಮಕೃಷ್ಣ ಮಠ ಸ್ವಚ್ಛ ಮಂಗಳೂರು ವಿಭಾಗದ, ಒಕ್ಕೂಟದ ಹಿರಿಯ ಮಾರ್ಗದರ್ಶಕ ಸುರೇಶ್ ಶೆಟ್ಟಿ, ನಿರ್ದೇಶಕರು ರೋಶನಿ ನಿಲಯ ಕಿಶೋರ್ ಅತ್ತಾವರ, ಕ್ಷೇತ್ರದ ಅಂತ ಗುರಿಕಾರರು ರಾಜೇಶ್ ನಾಯಕ್, ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರ ಇದರ ಧರ್ಮದರ್ಶಿ ದೇವ ಮೂಲ್ಯ, ಉಳ್ಳಾಲ ನಗರ ಸಭೆಯ ಕೌನ್ಸಿಲರ್ ವೀಣಾ ಡಿಸೋಜ, ಗುರಿಕಾರ ಸುರೇಶ್ ಕೊಪ್ಪಳ ಇದ್ದರು.
ಒಕ್ಕೂಟದ ಹಿರಿಯ ರಿಚಾರ್ಡ್ ಡಿಸೋಜ ಪ್ರಾರ್ಥಿಸಿದರು. ಸುಂದರ್ ಉಳಿಯ ವಂದಿಸಿದರು. ಅರುಣ್ ಡಿಸೋಜ ನಿರೂಪಿಸಿದರು.