ಪಾದೂರು ಐ.ಎಸ್.ಪಿ.ಆರ್.ಎಲ್ ಕಚ್ಚಾ ತೈಲ ಪೈಪ್ ಲೈನ್ 2 ನೇ ಹಂತ ಯೋಜನೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ
ಉಡುಪಿ: ಪಾದೂರು ಐಎಸ್ಪಿಆರ್ಎಲ್ ಕಚ್ಛಾತೈಲ ಪೈಪ್ ಲೈನ್ ಯೋಜನೆಯ 2ನೇ ಹಂತದ ಕಾಮಗಾರಿಗೆ ಸಿದ್ಧತೆ ನಡೆಯುತ್ತಿದೆ. ಹೊಸ ಕಾಮಗಾರಿ ಆರಂಭಿಸುವ ಮೊದಲು ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ವಿತರಿಸಬೇಕು. ಕಂಪೆನಿಯ ನಿಲುವುಗಳ ವಿರುದ್ಧ ಕಾಪು ಬ್ಲಾಕ್ ಕಾಂಗ್ರೆಸ್ ಸೋಮವಾರ ಪ್ರತಿಭಟನೆ ನಡೆಸಿತು.
ಈ ವೇಳೆ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ದೇಶದ ತುರ್ತು ಅಗತ್ಯಗಳಿಗೆ ಬೇಕಾದ ಕಚ್ಛಾತೈಲದ ಸಂಗ್ರಹದ ಯೋಜನೆ ಯನ್ನು ಖಾಸಗಿಯವರಿಗೆ -ಅಂಬಾನಿ ಗುಂಪಿಗೆ- ನೀಡುವ ಪ್ರಸ್ತಾಪವನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ. ಅಲ್ಲದೇ ಯೋಜನೆಯಿಂದ ಸಂತ್ರಸ್ಥರಾದ ಅನೇಕ ಮಂದಿಗೆ ಇನ್ನೂ ಸೂಕ್ತವಾಗಿ ಪರಿಹಾರ ಸಿಕ್ಕಿಲ್ಲ. ಅವರಿಗೆ ಪರಿಹಾರ ನೀಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದರು.
ಅಲ್ಲದೇ ಮೊದಲ ಹಂತದ ಕಾಮಗಾರಿಯ ವೇಳೆ ಬಂಡೆಗಳ ಸ್ಪೋಟದಿಂದ ಅನೇಕ ಮನೆ, ಪರಿಸರಗಳಿಗೆ ಹಾನಿಯಾಗಿದೆ. ತಾವು ಶಾಸಕ, ಸಚಿವರಾಗಿ ವೇಳೆ ಹೋರಾಟದ ಮೂಲಕ 48 ಮಂದಿಗೆ ತಲಾ ಒಂದು ಲಕ್ಷ ರೂ.ನಂತೆ ಪರಿಹಾರ ದೊರಕಿಸಿಕೊಟ್ಟಿದ್ದೇನೆ. ಆ ಬಳಿಕ ಇನ್ನೂ 120 ಮಂದಿ ಪರಿಹಾರ ಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಅವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಅವರಿಗೆಲ್ಲರಿಗೂ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಯೋಜನೆಗೆ ಭೂಮಿ ಕಳೆದುಕೊಂಡವರಿಗೆ ಪೂರ್ಣ ಪ್ರಮಾಣದ ಪರಿಹಾರ ಸಿಕ್ಕಿಲ್ಲ. ಕಾಮಗಾರಿಗೆ ಬಂಡೆಗಳನ್ನು ಸ್ಫೋಟಿಸುವಾಗ ಹಲವು ಮನೆಗಳಿಗೆ ಹಾನಿಯಾಗಿದ್ದು, ಸೂಕ್ತ ಪರಿಹಾರ ನೀಡಬೇಕು. ಮಾರುಕಟ್ಟೆ ಮೌಲ್ಯದ ಮೂರುಪಟ್ಟು ಪರಿಹಾರ ನಿಗಧಿಮಾಡಬೇಕು. ದೇವಸ್ಥಾನ, ಇಗರ್ಜಿ, ಮಸೀದಿಗಳನ್ನು ಉಳಿಸಬೇಕು. ಸ್ಥಳೀಯರ ಹಾಗೂ ಭೂಮಿ ಕಳೆದುಕೊಳ್ಳುವವರ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಎರಡನೇ ಹಂತದಲ್ಲಿ ಜನವಸತಿ ಪ್ರದೇಶವನ್ನೂ ಸ್ವಾಧೀನ ಪಡಿಸಿಕೊಳ್ಳಲು ಪ್ರಯತ್ನ ನಡೆಯುತ್ತಿದೆ. ಭೂಸ್ವಾಧೀನಕ್ಕಾಗಿ ಬೆದರಿಕೆ, ಬಲಾತ್ಕಾರವನ್ನೂ ನಡೆಸ ಲಾಗುತ್ತಿದೆ. ಇದಕ್ಕೆ ನಮ್ಮೆಲ್ಲರ ಸ್ಪಷ್ಟ ವಿರೋಧವಿದೆ. ಭೂಸ್ವಾಧೀನಕ್ಕಾಗಿ ಕೇಂದ್ರ ಸರಕಾರ ಮಾಡಿರುವ ಮಾರ್ಗಸೂಚಿಗಳಂತೆ ಕ್ರಮ ಜರಗಬೇಕು. ಯೋಜನಾ ಪ್ರದೇಶದ ಶೇ.80ರಷ್ಟು ಜನರ ಒಪ್ಪಿಗೆ ದೊರೆಯಬೇಕು. ಅಲ್ಲಿ ಸಮಾಲೋಚನಾ ಸಭೆ ನಡೆಸಬೇಕು. ಮಾರುಕಟ್ಟೆ ಧಾರಣೆಯ ಮೂರು ಪಟ್ಟು ಪರಿಹಾರವನ್ನು ಸಂತ್ರಸ್ಥರಿಗೆ ನೀಡಬೇಕು ಎಂಬುದು ತಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದರು.
ಯೋಜನೆಗಾಗಿ ಸ್ವಾಧೀನ ಪಡಿಸಿಕೊಳ್ಳುವ ಕಳ್ತೂರು, ಪಾದೂರು, ಹೇರೂರು, ಕುತ್ಯಾರು, ಶಾಂತಿಗುಡ್ಡೆ, ಮಜೂರು ಪರಿಸರದಲ್ಲಿರುವ ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿಗೆ, ದೇವಸ್ಥಾನ, ದೈವಸ್ಥಾನ, ಚರ್ಚ್, ಮಸೀದಿ ಹಾಗೂ ಮನೆಗಳಿಗೆ ಸೂಕ್ತ ಪರಿಹಾರ ನೀಡಬೇಕು. ಇದಕ್ಕಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಯೋಜನಾ ಪ್ರದೇಶದಲ್ಲಿ ಸ್ಥಳೀಯರ ‘ಸಾರ್ವಜನಿಕ ಅಭಿಪ್ರಾಯ ಮಂಡನ’ ಸಭೆ ಕರೆದು ಅಹವಾಲು ಸ್ವೀಕರಿಸಬೇಕು ಎಂದರು.
ಅಲ್ಲದೇ ಮೊದಲ ಹಂತದ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ನಿರ್ವಸತಿಗರ ಮನೆಗೊಂದು ಖಾಯಂ ಉದ್ಯೋಗ ನೀಡಬೇಕು. ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ ನಿರ್ವಸತಿಗರ ಕಾಲೋನಿ ಸ್ಥಾಪಿಸಬೇಕು. ಯೋಜನಾ ಪ್ರದೇಶದ ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದರು.
ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್, ಕಾಪು ಬ್ಲಾಕ್ ಕಾಂಗ್ರೆಸ್ ದಕ್ಷಿಣ ಸಮಿತಿ ಅಧ್ಯಕ್ಷ ನವೀನ್ ಚಂದ್ರ ಎಸ್ ಸುವರ್ಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷಅಶೋಕ್ ಕುಮಾರ್ ಕೊಡವೂರು, ಎಮ್ ಎ ಗಫೂರ್, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಮೆಲ್ವಿನ್ ಡಿಸೋಜ ಹಾಗೂ ಇತರರು ಉಪಸ್ಥಿತರಿದ್ದರು.