ಪಾರ್ಲಿಮೆಂಟ್ ಚುನಾವಣೆಯ ನಂತರ ನಳಿನ್ ಕುಮಾರ್ ಕಟೀಲ್ ಪಕೋಡವೇ ಮಾರಬೇಕು- ಬಿ. ಕೆ ಇಮ್ತಿಯಾಝ್

Spread the love

ಪಾರ್ಲಿಮೆಂಟ್ ಚುನಾವಣೆಯ ನಂತರ ನಳಿನ್ ಕುಮಾರ್ ಕಟೀಲ್ ಪಕೋಡವೇ ಮಾರಬೇಕು- ಬಿ. ಕೆ ಇಮ್ತಿಯಾಝ್

ಮಂಗಳೂರು: ಜನರಲ್ಲಿ ಅಪಾರ ನಿರೀಕ್ಷೆ ಹುಟ್ಟಿಸಿ ಅತ್ಯಧಿಕ ಬಹುಮತಗಳಿಂದ ಬಿಜೆಪಿಯನ್ನು ಆರಿಸಿಕೊಟ್ಟ ಜಿಲ್ಲೆಯ ಜನರಿಗೆ ಯಾವುದೇ ಕೊಡುಗೆಗಳನ್ನು ನೀಡದೆ ಜನರಿಗೆ ನಿರಾಶೆಗೊಳಿಸಿದೆ. ಈ ರೀತಿ ಜನರ ಬದುಕಿನಲ್ಲಿ ಚೆಲ್ಲಾಟವಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಮುಂಬರುವ ಪಾರ್ಲಿಮೆಂಟ್ ಚುನಾವಣೆಯ ನಂತರ ಪಕೋಡವೇ ಮಾರಬೇಕಾದಿತು ಎಂದು ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಹೇಳಿದರು. ಅವರು ಇಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜನವರಿ 8 ಮತ್ತು 9ರಂದು ಯುವಜನರ ಮತ್ತು ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಷ್ಟ್ರವ್ಯಾಪಿ ಮುಷ್ಕರ ಬೆಂಬಲಿಸಿ ಇಲ್ಲಿನ  ಜಿಲ್ಲಾಧಿಕಾರಿ ಬಳಿಯಿಂದ ಆರಂಭಗೊಂಡ ಪಂಜಿನ ಮೆರವಣಿಗೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಕಳೆದ ಮೂರು ದಶಕಗಳಿಂದ ಬಿಜೆಪಿಯ ಪ್ರತಿನಿಧಿಗಳು ಸಂಸದರಾಗಿ ಆಯ್ಕೆಯಾಗುತ್ತಿದ್ದಾರೆ. ಜನರಿಗೆ ಕೇಂದ್ರ ಸರಕಾರದಿಂದ ಅನ್ಯಾಯ ಆದಾಗ ಪ್ರತಿಭಟಿಸಬೇಕಾಗಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ರವರು ಮೌನ ಸಮ್ಮತಿಯನ್ನು ಸೂಚಿಸುತ್ತಿದ್ದಾರೆ.

ಮಂಗಳೂರು ಅಂತರಾಷ್ಟ್ರೀಯ ವಿಮಾನನಿಲ್ದಾಣ ಮತ್ತು ನವ ಮಂಗಳೂರು ಬಂದರನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆಯನ್ನು ಕೇಂದ್ರ ಸರಕಾರ ಚುರುಕುಗೊಳಿಸಿದೆ. ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಬಗೆಹರಿಸಲಾಗಿಲ್ಲ. ಜಿಲ್ಲೆಯ ಆರ್ಥಿಕತೆಯ ಪ್ರತೀಕವಾಗಿದ್ದ ವಿಜಯಾ ಬ್ಯಾಂಕನ್ನು ನಷ್ಟದಲ್ಲಿರುವ ಬ್ಯಾಂಕಿನ ಜೊತೆಯಲ್ಲಿ ವಿಲೀನಗೊಳಿಸಿ ಜಿಲ್ಲೆಗೆ ಅನ್ಯಾಯ ಮಾಡಲಾಯಿತು. ಈ ಜಿಲ್ಲೆಯವರೇ ಆದ ಸದಾನಂದ ಗೌಡರು ರೈಲ್ವೇ ಮಂತ್ರಿಯಾಗಿ ಎರಡು ಬಾರಿ ರೈಲ್ವೇ ಬಜೆಟ್ ಮಂಡಿಸುವ ಅವಕಾಶ ದಕ್ಕಿದರೂ ರೈಲ್ವೇ ವಿಭಾಗೀಯ ಕಚೇರಿ ಆಗಿಲ್ಲ. ಉತ್ತರ ಕರ್ನಾಟಕಕ್ಕೆ ರೈಲ್ವೇ ಸಂಪರ್ಕ ಮಾಡುವ ಕುರಿತು ಸಣ್ಣ ಪ್ರಯತ್ನವೂ ನಡೆಯಲಿಲ್ಲ ಎಂದು ಟೀಕಿಸಿದ ಅವರು ಜಿಲ್ಲೆಯ ಯುವಜನರ ನಿರುದ್ಯೋಗ ಸಮಸ್ಯೆ ಬಗೆಹರಿಸಲು ಕಾರ್ಯ ಯೋಜನೆಯೇ ಇಲ್ಲ. ಸೌದಿ ಅರೇಬಿಯಾದ ನವ ಉದ್ಯೋಗ ನೀತಿಯಿಂದ ಹಿಂದಿರುಗುತ್ತಿರುವ ಯುವಜನರ ರಕ್ಷಣೆಗೆ ಮುಂದಾಗದ ಮೋದಿ ಸರಕಾರದ ವಿರುದ್ದ ಜಿಲ್ಲೆಯ ಯುವಜನರು ಅಖಿಲ ಭಾರತ ಮುಷ್ಕರ ಬೆಂಬಲಿಸಬೇಕೆಂದು ಕರೆ ನೀಡಿದರು.

ನಂತರ ಮಾತನಾಡಿದ ಜಿಲ್ಲಾ ಪ್ರಾಂತ ರೈತ ಸಂಘದ ಕಾರ್ಯದರ್ಶಿ ಯಾದವ ಶೆಟ್ಟಿ ಮಾತನಾಡುತ್ತಾ ನರೇಂದ್ರ ಮೋದಿಯ ಅಚ್ಚೇದನ್ ಕಾರ್ಪೋರೇಟ್ ಕಂಪೆನಿಗಳಿಗೆ ಮಾತ್ರ. ದೇಶದ ರೈತರು ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಿಸಿದ ಮೋದಿ ಸರಕಾರ ಕಾರ್ಮಿಕರ ಕಾನೂನುಗಳನ್ನು ದುರ್ಬಲಗೊಳಿಸಿ ಕಾರ್ಮಿಕರನ್ನು ಸಂಕಷ್ಟಕ್ಕೆ ತಂದೊಡ್ಡಿದ ಮೋದಿ ಸರಕಾರದ ವಿರುದ್ದ ಹೋರಾಟ ತೀವ್ರಗೊಳಿಸಬೇಕಿದೆ ಎಂದರು.

ನಂತರ ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿದರು.

ಪಂಜಿನ ಮೆರವಣಿಗೆಯು ನಗರದ ವಿವಿಧ ಬೀದಿಗಳಲ್ಲಿ ಸಂಚರಿಸಿ ಕ್ಲಾಕ್ ಟವರ್ ಬಳಿ ಸಮಾರೋಪಗೊಂಡಿತು.

ಕಾರ್ಯಕ್ರಮದಲ್ಲಿ ಡಿವೈಎಫ್ಐ ಜಿಲ್ಲಾ ಮುಖಂಡರಾದ ಜೀವನ್ ರಾಜ್ ಕುತ್ತಾರ್, ರಫೀಕ್ ಹರೇಕಳ, ಸಾದಿಕ್ ಕಣ್ಣೂರು, ಶ್ರೀನಾಥ್ ಕುಲಾಲ್, ಆಶಾ ಬೋಳೂರು, ನವೀನ್ ಕೊಂಚಾಡಿ, ರಝಾಕ್ ಮೊಂಟೆಪದವು, ಪ್ರಶಾಂತ್ ಎಂ.ಬಿ, ಮನೋಜ್ ಉರ್ವಸ್ಟೋರ್, ನೌಷಾದ್ ಬೆಂಗರೆ ಉಪಸ್ಥಿತರಿದ್ದರು. ಮನೋಜ್ ವಾಮಂಜೂರು ಸ್ವಾಗತಿಸಿದರೆ ನಿತಿನ್ ಕುಮಾರ್ ಕುತ್ತಾರ್ ವಂದಿಸಿದರು.


Spread the love