ಪಾಸ್ ಇದ್ದರೆ ಮಂಗಳೂರು-ಕಾಸರಗೋಡು ನಡುವೆ ಸಂಚರಿಸಲು ಅವಕಾಶ
ಮಂಗಳೂರು: ಎರಡೂವರೆ ತಿಂಗಳ ಬಳಿಕ ಮಂಗಳೂರು-ಕಾಸರಗೋಡು ನಡುವಿನ ಜನರ ಸಂಚಾರಕ್ಕೆ ಉಭಯ ಜಿಲ್ಲಾಡಳಿತಗಳು ಅನುಮತಿ ನೀಡಿವೆ.
ಕೊರೋನಾ ವೈರಸ್ ಭೀತಿಯಿಂದ ಬಂದ್ ಆಗಿದ್ದ ಮಂಗಳೂರು – ಕಾಸರಗೋಡು ಗಡಿಯಲ್ಲಿ ಪಾಸ್ ಇದ್ದವರಿಗೆ ಸಂಚರಿಸಲು ಅವಕಾಶ ದೊರತಿದೆ. ಉದ್ಯೋಗಿಗಳು, ವಿದ್ಯಾರ್ಥಿಗಳು, ಆರೋಗ್ಯ ಸೇವಕರು ಮತ್ತು ಸರ್ಕಾರಿ ನೌಕರರು ತಮ್ಮ ಸಂಸ್ಥೆಯ ಅಧಿಕೃತ ಪಾಸ್ ಬಳಸಿ ಸಂಚರಿಸಲು ಅವಕಾಶ ನೀಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಆದೇಶ ಹೊರಡಿಸಿದ್ದಾರೆ.
ಕಾಸರಗೋಡಿನಲ್ಲಿರುವವರು ಉದ್ಯೋಗ, ಶಿಕ್ಷಣ ನಿಮಿತ್ತ ದಿನನಿತ್ಯ ಮಂಗಳೂರಿಗೆ ಸಂಚರಿಸುತ್ತಾರೆ. ಇಂತವರಿಗೆ ಪಾಸ್ ಬಳಸಿ ನಿತ್ಯ ಸಂಚರಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಅವಕಾಶ ಕಲ್ಪಿಸಲಾಗಿದೆ.
Dkdpermit ವೆಬ್ ಸೈಟ್ ನಲ್ಲಿ ರಿಜಿಸ್ಟರ್ ಮಾಡಿ ಪಾಸ್ ಪಡೆಯಲು ಸೂಚಿಸಲಾಗಿದ್ದು, ಉದ್ಯೋಗಿಗಳು, ವಿದ್ಯಾರ್ಥಿಗಳು, ಆರೋಗ್ಯ ಸೇವಕರು ಮತ್ತು ಸರ್ಕಾರಿ ನೌಕರರಿಗಷ್ಟೇ ಅವಕಾಶ ನೀಡಲಾಗಿದೆ. ಉದ್ಯೋಗ ಹೊರತು ಅನ್ಯ ಕಾರ್ಯಕ್ಕೆ ಪಾಸ್ ಬಳಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪಾಸ್ ಗೆ ಅರ್ಜಿ ಸಲ್ಲಿಸಲು ಆಧಾರ್, ಉದ್ಯೋಗ ವಿಳಾಸ, ಮಾಹಿತಿ ಸಲ್ಲಿಸುವುದು ಕಡ್ಡಾಯವಾಗಿದ್ದು, ಪ್ರಯಾಣಿಕರು ನಿತ್ಯ ಥರ್ಮಲ್ ಸ್ಕ್ಯಾನ್ ಮತ್ತು ಆರೋಗ್ಯ ತಪಾಸಣೆ ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.