ಪಿತ್ರೋಡಿ: ಮಂಡಲ ಸತ್ಯನಾರಾಯಣ ಪೂಜೆ ಸಮಾರೋಪ
ಉದ್ಯಾವರ ಹಿತ್ಲು ಮೊಗವೀರ ಗ್ರಾಮ ಸಭೆ, ದತ್ತಾತ್ರೇಯ ಭಜನಾ ಮಂದಿರ ಮತ್ತು ಮಹಿಳಾ ಮಂಡಳಿಯ ಸಹಯೋಗದಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆ ಪ್ರಾರಂಭವಾಗಿ 48 ತಿಂಗಳುಗಳ ಕಾಲ ನಿರಂತರವಾಗಿ ಹುಣ್ಣಿಮೆಯಂದು ನಡೆದುಕೊಂಡು ಬಂದ ಸಾಮೂಹಿಕ ಸತ್ಯನಾರಾಯಣ ಪೂಜೆಯ ಸಮಾರೋಪ ಸಮಾರಂಭ ಪಿತ್ರೋಡಿ ದತ್ತಾತ್ರೇಯ ಭಜನಾ ಮಂದಿರದಲ್ಲಿ ಜರಗಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ ದ ಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್ ಬೆಳ್ಳಂಪಳ್ಳಿ ಮಾತನಾಡಿ ದತ್ತಾತ್ರೇಯ ಮಹಿಳಾ ಮಂಡಳಿಯ ನೇತೃತ್ವದಲ್ಲಿ ನಡೆದ ಮಂಡಲ ಸತ್ಯನಾರಾಯಣ ಪುಜೆಯಿಂದ ಪ್ರಪಂಚವನ್ನೇ ಕಾಡುತ್ತಿರುವ ಕೊರೊನ ರೋಗ ಸಮಸ್ಯೆ ದೂರವಾಗಿ, ಜನರು ನೆಮ್ಮದಿಯಿಂದ ಬಾಳುವಂತಾಗಲಿ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಗುರುಪೂರ್ಣಿಮೆಯ ಅಂಗವಾಗಿ ಎಸ್ ಎಸ್ ಪಿತ್ರೋಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿದ ಸರೋಜಿನಿ ಟೀಚರ್ ರವರಿಗೆ ಗುರು ವಂದನೆ ಸಲ್ಲಿಸಲಾಯಿತು ಮತ್ತು ಮಹಿಳಾ ಚೆಂಡೆ ಗುರುಗಳಾದ ಸುಶೀಲ ಜಯಕರ್ ಇವರಿಗೆ ದತ್ತಾನುಗ್ರಹ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ಸ್ಥಳೀಯ ಆಶಾ ಕಾರ್ಯಕರ್ತರನ್ನು ಸಂನ್ಮಾನಿಸಲಾಯಿತು. ಪುರೋಹಿತರಾದ ರಾಜಾರಾಮ ಭಟ್ ಧಾರ್ಮಿಕ ವಿಧಿ ವಿಧಾನ ನಡೆಸಿಕೊಟ್ಟರು, ಕೆ ಎಸ್ ಪಡಿತ್ತಾಯರು ಧಾರ್ಮಿಕ ಸಂದೇಶ ನೀಡಿದರು.
ವೇದಿಕೆಯಲ್ಲಿ ಉದ್ಯಮಿ ಲೋಹಿತ್ ಕುಮಾರ್, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ್ ಬಾಬು, ಭಜನಾ ಮಂದಿರದ ಅಧ್ಯಕ್ಷರಾದ ಚೇತನ್ ಕುಮಾರ್ ಪಿತ್ರೋಡಿ, ಮಹಿಳಾ ಮಂಡಳಿಯ ಅಧ್ಯಕ್ಷರಾದ ಸಬಿತಾ ಸುರೇಶ್ ಮೈಂದನ್ ಉಪಸ್ಥಿತರಿದ್ದರು.
ಮಹಿಳಾ ಮಂಡಳಿಯ ಸದಸ್ಯೆ ಹರಿಣಿ ದಿನೇಶ್ ರಾಜ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಕನಕಾಂಗಿನಿ ಧನ್ಯವಾದ ಸಮರ್ಪಿಸಿದರು.