Home Mangalorean News Kannada News ಪಿಲಿಕುಳದಲ್ಲಿ ಪಶ್ಚಿಮ ಘಟ್ಟದ ಗಿಡಗಳ ಹಾಗೂ ಔಷಧೀಯ ಸಸ್ಯಗಳ ಮಾಹಿತಿ ಶಿಬಿರ

ಪಿಲಿಕುಳದಲ್ಲಿ ಪಶ್ಚಿಮ ಘಟ್ಟದ ಗಿಡಗಳ ಹಾಗೂ ಔಷಧೀಯ ಸಸ್ಯಗಳ ಮಾಹಿತಿ ಶಿಬಿರ

Spread the love

ಪಿಲಿಕುಳದಲ್ಲಿ ಪಶ್ಚಿಮ ಘಟ್ಟದ ಗಿಡಗಳ ಹಾಗೂ ಔಷಧೀಯ ಸಸ್ಯಗಳ ಮಾಹಿತಿ ಶಿಬಿರ

ಮಂಗಳೂರು: ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಶನಿವಾರ ‘ಬಿ. ಎಡ್. ಹಾಗೂ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಪಶ್ಚಿಮ ಘಟ್ಟದ ಗಿಡಗಳ ಹಾಗೂ ಔಷಧೀಯಸಸ್ಯಗಳ ಮಾಹಿತಿ ಶಿಬಿರವನ್ನು ಆಯೋಜಿಸಲಾಗಿತ್ತು. ನಗರದ ಕರಾವಳಿ ಕಾಲೇಜ್ ಆಫ್ ಎಜುಕೇಶನ್, ಅಮೃತ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ, ಸಂತ ಆಗ್ನೇಸ್ ಕಾಲೇಜು ಮತ್ತು ಸಂತ ಅಲೊಶೀಯಸ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

pilikula-vanamahotsava-20160625

ಕಾರ್ಯಕ್ರಮದ ಉದ್ಘಾಟನೆಯನ್ನು ಪಿಲಿಕುಳದ ಸಸ್ಯಕಾಶಿಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಗಿಡಗಳನ್ನು ನೆಡುವ ಮೂಲಕ ನೆರವೇರಿಸಲಾಯಿತು. ಎಲ್ಲಾ ವಿದ್ಯಾರ್ಥಿಗಳು ಸುರಿಯುವ ಮಳೆಯಲ್ಲಿ ಸಹ ಉತ್ಸಾಹದಿಂದ ಇದರಲ್ಲಿ ಪಾಲ್ಗೊಂಡು ಪಶ್ಚಿಮ ಘಟ್ಟದ ವಿವಿಧ ಜಾತಿಯ ಗಿಡಗಳನ್ನು ನೆಟ್ಟರು. ನಂತರ ಡಾ. ಸೂರ್ಯಪ್ರಕಾಶ ಶೆಣೈ, ಡಾ. ಕೆ. ವಿ. ರಾವ್, ಡಾ. ನಿತಿನ್, ರಾಮಕೃಷ್ಣ ಮರಾಟಿ, ಜಗನ್ನಾಥ, ಜಯರಾಮ, ರವಿ, ರೋಷನ್ ಇವರೊಂದಿಗೆ ಔಷಡೀಯ ಸಸ್ಯಗಳ ಪರಿಚಯ, ಅವುಗಳ ಉಪಯೋಗದ ಬಗ್ಗೆ ತಿಳಿದುಕೊಂಡರು. ನರ್ಸರಿಗೂ ಭೇಟಿ ಏರ್ಪಡಿಸಲಾಗಿತ್ತು.

ಮಧ್ಯಾಹ್ನ ನಂತರದ ನಡೆದ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಮಂಗಳೂರು ಪ್ರಾದೇಶಿಕ ಕಚೇರಿಯ ಹಿರಿಯ ವೈಜ್ಞಾನಿಕ ಅಧಿಕಾರಿ ಜಯಪ್ರಕಾಶ ನಾಯಕ್ ಉಪನ್ಯಾಸ ನೀಡುತ್ತಾ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಮೂಡಿಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದೆ. ನೆಲ, ಜಲ, ವಾಯು ಮಾಲಿನ್ಯದ ಕಾರಣಗಳನ್ನು ತಿಳಿದು ನಾವೇ ಉಂಟುಮಾಡುತ್ತಿರುವ ಇಂತಹ ಸಮಸ್ಯೆಗಳಿಗೆ ಎಲ್ಲರ ಸಹಕಾರದೊಂದಿಗೆ ಪರಿಹಾರ ಕಂಡುಕೊಂಡಾಗ ಮಾತ್ರ ಭೂಮಿಯ ಬದುಕು ಸಹನೀಯವಾಗುತ್ತದೆ ಎಂದರು. ಪರಿಸರ ಸಂಬಂಧಿ ಕಾನೂನುಗಳನ್ನು ಪಾಲಿಸಿದಲ್ಲಿ ಮತ್ತು ಅವುಗಳ ಅರಿವನ್ನು ಎಲ್ಲರಲ್ಲಿ ಮೂಡಿಸಿದಲ್ಲಿ ಪರಿಸರ ತನ್ನಿಂದ ತಾನೇ ಉತ್ತಮಗೊಳ್ಳುವುದು ಎಂದರು.

ನಂತರ ಮಾತನಾಡಿದ ಸಸ್ಯಗಳ ವಿಷಯದಲ್ಲಿ ವಿಶೇಷ ಪರಿಣತಿಯ ದಿನೇಶ ನಾಯಕ್ ನಮ್ಮ ಜೀವನದಲ್ಲಿ ಸಸ್ಯಗಳ ಪ್ರಾಮುಖ್ಯತೆ, ಅಡುಗೆ ಔಷಧಿಗಳಲ್ಲಿ ಅವುಗಳನ್ನು ಉಪಯೋಗಿಸುವ ಬಗೆ, ಇತ್ಯಾದಿಗಳ ಬಗ್ಗೆ ಉದಾಹರಣೆ ಸಹಿತ ವಿವರಿಸಿದರು. ಈಗಿನ ಕಾಲ ಘಟ್ಟದಲ್ಲಿ ನಮ್ಮ ಸಸ್ಯ ಸಂಪತ್ತನ್ನು ಮತ್ತು ಅವುಗಳ ಬಗೆಗಿನ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕಾದ ಅವಶ್ಯಕತೆಗಳನ್ನು ಮನಮುಟ್ಟುವಂತೆ ತಿಳಿಸಿದರು.

ಡಾ. ಸೂರ್ಯಪ್ರಕಾಶ ಶೆಣೈ ವಂದನಾರ್ಪಣೆಗೈದರು. ವಿದ್ಯಾರ್ಥಿಗಳಿಂದ ಕಾರ್ಯಕ್ರಮದ ಬಗ್ಗೆ ಹಿಮಾಹಿತಿ ಪಡೆಯಲಾಯಿತು ವಿದ್ಯಾರ್ಥಿಗಳು ಮಳೆಯಲ್ಲಿ ಗಿಡ ನೆಡುವುದು ಒಂದು ವಿಶೇಷ ಅನುಭವ ಎಂದು ಅಭಿಪ್ರಾಯಪಟ್ಟರು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು. ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬೆಂಗಳೂರು ಇವರು ಪ್ರಾಯೋಜಿಸಿದ್ದರು.


Spread the love

Exit mobile version